ತುಮಕೂರು
ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ಮೇಯರ್ ಕೊಠಡಿಯನ್ನು ಇದೀಗ ತಾತ್ಕಾಲಿಕವಾಗಿ ಪಾಲಿಕೆಯ ಆಡಳಿತಾಧಿಕಾರಿ ಅವರಿಗೆ ಮೀಸಲಿರಿಸಲಾಗಿದೆ.
ಮಹಾನಗರ ಪಾಲಿಕೆಗೆ ಈಗಷ್ಟೇ ಚುನಾವಣೆ ನಡೆದು ಹೊಸ ಚುನಾಯಿತ ಮಂಡಲಿ ಅಸ್ತಿತ್ವಕ್ಕೆ ಬಂದಿದೆ. ಹೊಸ ಮೇಯರ್ ಮತ್ತು ಉಪಮೇಯರ್ ಆಯ್ಕೆ ಇನ್ನಷ್ಟೇ ಆಗಬೇಕು. ಇದಕ್ಕಾಗಿ ಸರ್ಕಾರ ವೇಳಾಪಟ್ಟಿ ಪ್ರಕಟಿಸಬೇಕು. ಇದಕ್ಕೆ ಸುಮಾರು 15 ದಿನಗಳಾಗಬಹುದು. ಆವರೆಗೆ ಪಾಲಿಕೆಯ ಸುಗಮ ಕಾರ್ಯನಿರ್ವಹಣೆಗಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರನ್ನು ಪಾಲಿಕೆಯ ಆಡಳಿತಾಧಿಕಾರಿ ಆಗಿ ಸರ್ಕಾರ ನಿಯುಕ್ತಿಗೊಳಿಸಿದೆ. ಜೊತೆಗೆ ಪ್ರಾದೇಶಿಕ ಆಯುಕ್ತರೇ ಮೇಯರ್ ಮತ್ತು ಉಪಮೇಯರ್ ಚುನಾವಣೆಯನ್ನು ನಡೆಸುವವರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಈಗ ಮೇಯರ್ ಕೊಠಡಿಯನ್ನೇ ಇವರಿಗೆ ತಾತ್ಕಾಲಿಕವಾಗಿ ಕಾಯ್ದಿರಿಸಲಾಗಿದೆ.
ಆಡಳಿತಾಧಿಕಾರಿ ಆಗಿರುವ ಶಿವಯೋಗಿ ಕಳಸದ್ ಅವರು ಈ ನಡುವೆ ಪಾಲಿಕೆ ಕಚೇರಿಗೆ ಔಪಚಾರಿಕವಾಗಿ ಭೇಟಿ ನೀಡಬಹುದೆಂದು ನಿರೀಕ್ಷಿಸಲಾಗಿದೆ.