ಹಾವೇರಿ:
ಹಾವೇರಿ ಜಿಲ್ಲೆಯಲ್ಲಿ ಜನವರಿ 28 ರಿಂದ ಫೆಬ್ರುವರಿ 16ರವರೆಗೆ 15ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಜಾನುವಾರು ಸಹ ಲಸಿಕೆಯಿಂದ ವಂಚಿತವಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೇಂದ್ರ ಪುರಸ್ಕøತ 15ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ನಿಗದಿ ಪಡಿಸಿದ 15 ದಿನಗಳ ಅವಧಿವರೆಗೆ ಪೂರ್ಣಗೊಳಿಸಿ ಪ್ರತಿಶತ 100 ರಷ್ಟು ಪ್ರಗತಿ ಸಾಧಿಸಬೇಕು. ಲಸಿಕೆ ಹಾಕಲು ಇದು ಸೂಕ್ತಕಾಲವಾಗಿದ್ದು, ಈ ಸಮಯದಲ್ಲಿ ಲಸಿಕೆ ಹಾಕುವದರಿಂದ ಮೇ ತಿಂಗಳಲ್ಲಿ ಸಂಭವಿಸಬಹುದಾದ ರೋಗೋದ್ರೇಕ ತಡೆಗಟ್ಟಲು ಸಹಾಯವಾಗುತ್ತದೆ. ಲಸಿಕೆ ಹಾಕುವ ಸಿಬ್ಬಂದಿಗಳು ನಿಗದಿಪಡಿಸಿದ ಗ್ರಾಮಗಳಲ್ಲಿ ಪಲ್ಸ್ ಪೋಲಿಯೊ ಮಾದರಿಯಲ್ಲಿ ಬೆಳಿಗ್ಗೆ 6 ಗಂಟೆಗೆ ಮನೆ ಮನೆಗೆ ತೆರಳಿ ಲಸಿಕಾ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಲಸಿಕೆ ಔಷಧಿಯನ್ನು (ವ್ಯಾಕ್ಸಿಲೇಟರ್) ನಿಗಧಿತ ಕೋಲ್ಡ್ನಲ್ಲಿ ಇರುವಂತೆ ಜಾಗೃತಿ ವಹಿಸಬೇಕು ಮತ್ತು ಶುದ್ಧವಾಗಿರಬೇಕು. ಈ ಲಸಿಕೆ ರೋಗ ನಿರೋಧ ಶಕ್ತಿ ಹೆಚ್ಚಿಸಬೇಕು. ಲಸಿಕೆ ನೀಡಿದ ಸಂದರ್ಭದಲ್ಲಿ ಅಲರ್ಜಿ ಅಥವಾ ಇತರೆ ತುರ್ತು ಪರಿಸ್ಥಿತಿ ನಿಭಾಯಿಸಲು ತುರ್ತು ಔಷಧಿಗಳನ್ನು ಜೊತೆಗೆ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ ಕಚೇರಿ ಹಾಗೂ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಈ ಕಾರ್ಯಕ್ರಮದ ಮಾಹಿತಿಯ ಬ್ಯಾನರ್ಗಳನ್ನು ಹಾಕಬೇಕು. ಈ ಕಾರ್ಯಕ್ಕೆ ತೆರಳುವ ವಾಹನಗಳಿಗೂ ಸಹ ಲಸಿಕಾ ಕಾರ್ಯಕ್ರಮ ಬ್ಯಾನರ್ ಹಾಕಬೇಕು. ಪ್ರತಿ ದಿನ ಎಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಹಾಲುಕೊಡುವ ರಾಸುಗಳು 44,500 ಎಂದು ಕೆ.ಎಂ.ಎಫ್.ಅಧಿಕಾರಿಗಳು ತಿಳಿಸಿದಾಗ, ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಇದು ತುಂಬಾ ಕಡಿಮೆಯಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳ ಸಾಕಾಣಿಕೆಯಾಗಬೇಕು. ಹಾಲು ಕೊಡುವ ರಾಸುಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕೆ.ಎಂ.ಎಫ್.ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪಶುಪಾಲನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಉಪನಿರ್ದೇಶಕ ಡಾ.ರಾಜು ಕೂಲೇರ ಅವರು ಮಾತನಾಡಿ, ಜಿಲ್ಲೆಯ ಹಾವೇರಿ ತಾಲೂಕಿನಲ್ಲಿ 48,392, ಹಿರೇಕೆರೂರು ತಾಲೂಕಿನಲ್ಲಿ 63,406, ಹಾನಗಲ್ ತಾಲೂಕಿನಲ್ಲಿ 58,500, ರಾಣೇಬೆನ್ನೂರು ತಾಲೂಕಿನಲ್ಲಿ 55,758, ಶಿಗ್ಗಾಂವ ತಾಲೂಕಿನಲ್ಲಿ 40,962, ಬ್ಯಾಡಗಿ 33,434 ಹಾಗೂ ಸವಣೂರ ತಾಲೂಕಿನಲ್ಲಿ 29,230 ಸೇರಿ ಒಟ್ಟು 3,29,682 ದನ, ಎಮ್ಮೆ ಮತ್ತು ಹಂದಿಗಳಿಗೆ ಲಸಿಕೆ ಹಾಕಲಾಗುತ್ತದೆ. ಜಿಲ್ಲೆಗೆ ಅಗತ್ಯ ಪ್ರಮಾಣದ ಲಸಿಕೆ ಕೆಂದ್ರ ಸರ್ಕಾರದಿಂದ ಈಗಾಗಲೇ( 320000 ಡೋಸ್) ಸರಬರಾಜಾಗಿರುತ್ತದೆ. ಒಟ್ಟು 40 ಲಸಿಕಾ ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಕನಿಷ್ಠ ಒಬ್ಬ ಪಶುವ್ಶೆದ್ಯರು, 5 ರಿಂದ 6 ಜನ ಅರೆತಾಂತ್ರಿಕ ಸಿಬ್ಬಂದಿಗಳಿದ್ದಾರೆ. ಈ ತಂಡಗಳು ನಿಶ್ಚಿತ ದಿನಾಂಕಕ್ಕೆ ನಿಗದಿಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿ ಬೆಳಿಗ್ಗೆ 6 ರಿಂದ 11 ಗಂಟೆವರೆಗೆ ಲಸಿಕೆ ಕಾರ್ಯ ಪೂರೈಸುತ್ತಾರೆ ಎಂದು ಹೇಳಿದರು.
ಈ ಕಾರ್ಯಕ್ರಮದ ಮಾಹಿತಿಗಾಗಿ ಬ್ಯಾನರ್ಸ್, ಪೋಸ್ಟರ್ ಹಾಗೂ ಕರಪತ್ರಗಳನ್ನು ಸಹ ಮುದ್ರಿಸಲಾಗಿದೆ ಹಾಗೂ ಆಯಾ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಸಾಕಷ್ಟು ಪ್ರಚಾರ ಕೈಗೊಳ್ಳಲಾಗುತ್ತಿದೆ. ಇಲಾಖೆಯ ಏಳು ಮತ್ತು ಹಾಲು ಒಕ್ಕೂಟದ 33 ವಾಹನಗಳನ್ನು ಈ ಕಾರ್ಯಕ್ಕೆ ಒದಗಿಸಲಾಗಿದೆ. ಲಸಿಕೆ ಹಾಕುವ ಗ್ರಾಮಗಳ ಭೇಟಿಯ ದಿನಾಂಕವನ್ನು ಸಾಕಷ್ಟು ಮುಂಚಿತವಾಗಿ ತಿಳಿಯಪಡಿಸಿ ಪ್ರಚಾರ ಕೈಕೊಳ್ಳಲಾಗುವುದು. ಜಿಲ್ಲೆಯ ಆಯ್ದ ಹತ್ತು ಗ್ರಾಮಗಳಲ್ಲಿ ಗುರುತಿಸಲಾಗುವ 200 ದನ ಮತ್ತು ಎಮ್ಮೆಗಳಲ್ಲಿ ಲಸಿಕಾ ಕಾರ್ಯದ ಪ್ರಥಮ ದಿನದಂದು ಮತ್ತು ಲಸಿಕೆ ಹಾಕಲಾದ 28 ನೇ ದಿನದಂದು ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವ್ಯದು ಎಂದು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ನಗರಸಭಾ ಆಯುಕ್ತರು, ಪುರಸಭಾ ಅಧಿಕಾರಿಗಳು ಹಾಗೂ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು, ಸಹಾಯಕ ಉಪನಿರ್ದೇಶಕರು, ಪಶುವೈದ್ಯಾಧಿಕಾರಿಗಳು, ಸ್ಥಳೀಯ ಗ್ರಾಮಪಂಚಾಯತ ಹಾಗೂ ಹಾಲು ಉತ್ಪಾದಕರ ಸಹಾಕಾರಿ ಸಂಘ, ಇತರೆ ಸ್ಥಳೀಯ ಸಂಸ್ಥೆಗಳ ಅಗತ್ಯ ಸಹಕಾರ ಅಗತ್ಯವಾಗಿದೆ. ಜೊತೆಗೆ ಜಿಲ್ಲೆಯ ರೈತ ಬಾಂಧವರು ತಮ್ಮ ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿಕೊಂಡರು. ಸಭೆಯಲ್ಲಿ ತಾಲೂಕಾ ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.