ತುಮಕೂರು
ತುಮಕೂರು ಕ್ಷೇತ್ರವು ದೇಶದಲ್ಲಿಯೇ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಇಂದಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.ಈ ಲೋಕಸಭಾ ಚುನಾವಣೆ ಒಂದು ಯುದ್ಧವಿದ್ದಂತೆ, ಆ ಯುದ್ದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಂಡನಾಯಕರಾಗಿದ್ದಾರೆ. ಬಿಜೆಪಿಗೆ ಮತ ಹಾಕುವ ಮೂಲಕ ಮೋದಿಯವರ ಕೈ ಬಲಪಡಿಸಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತುಮಕೂರಿನಲ್ಲಿನ ಜಿ.ಎಸ್.ಬಸವರಾಜುರವರು ಬೆಳಗಾದರೆ ಇಲ್ಲಿಯೇ ಸಿಗುತ್ತಾರೆ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಡುತ್ತಾರೆ. ಅಂತಹವರಿಗೆ ಮತ ನೀಡಬೇಕೇ ಹೊರತು ಬೇರೆ ಜಿಲ್ಲೆಯವರಿಗಲ್ಲ. ದೇವೇಗೌಡರು ಗೆದ್ದರೆ ಅವರನ್ನು ಸಂಪರ್ಕಿಸಲು ಆಗುತ್ತದೆಯೇ? ಅದನ್ನು ಅರಿತು ಜಿಲ್ಲೆಯ ಜನತೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಗೆಲ್ಲಿಸಬೇಕು ಎಂದರು
ದೇಶಕ್ಕೆ ದಂಡನಾಯಕನ ಅವಶ್ಯಕತೆ ಇದೆ. ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಆಗ ದೇಶ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ತುಮಕೂರು ಜಿಲ್ಲೆಗೆ ಹೇಮಾವತಿ ವಿಚಾರದಲ್ಲಿ ಬಹಳಷ್ಟು ಅನ್ಯಾಯವಾಗಿದೆ. ಕಳೆದ ವರ್ಷ ಮಳೆ ಬಂದು ಜಲಾಶಯ ತುಂಬಿದರೂ ತುಮಕೂರಿಗೆ ನೀರು ಬಿಡಲಿಲ್ಲ. ಸುಖಾಸುಮ್ಮನೆ ಸಮುದ್ರಪಾಲಾಯಿತು. ಅಧಿಕಾರದಲ್ಲಿದ್ದಾಗಲೇ ದೇವೇಗೌಡರು ಏನು ಮಾಡಲಿಲ್ಲ. ಈಗ ಚುನಾವಣಾ ಗಿಮಿಕ್ ಆಗಿ ತುಮಕೂರಿಗೆ ನೀರಾವರಿ ಸೌಲಭ್ಯ ತರುತ್ತೇವೆ. ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ ಎಂದು ಭಾಷಣಗಳನ್ನು ಮಾಡುತ್ತಿದ್ದಾರೆ ಎಂದರು.
ಅಲ್ಲದೆ ಇದೀಗ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಾ, ತುಮಕೂರಿನ ಸಜ್ಜನ ರಾಜಕಾರಣಿಯಾದ ಎಸ್‍ಪಿ ಮುದ್ದಹನುಮೆಗೌಡರಿಗೆ ಟಿಕೆಟ್ ತಪ್ಪಿಸಿ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರಲ್ಲದೆ, ಈ ಕ್ಷೇತ್ರದಲ್ಲಿ ಮೋದಿ ಅಲೆ ಇದೆ. ಯುವ ಮತದಾರರು ಮೋದಿ ಕಡೆ ಇದ್ದಾರೆ, ಸದೃಢ ದೇಶವನ್ನು ಕಟ್ಟಲು ಮೋದಿ ಅಧಿಕಾರಕ್ಕೆ ಬರಬೇಕು. ಇದು ಭಾವೈಕ್ಯತೆ ಹಾಗೂ ಜಾತ್ಯಾತೀತ ಚುನಾವಣೆಯಾಗಿದೆ. ಮೋದಿ ಯೋಜನೆಗಳು ಜನರಿಗೆ ಉಪಯೋಗವಾಗಿದ್ದು ಎಲ್ಲಾ ಜನಾಂಗದವರು ಮೋದಿಯವರಿಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ಮಾತನಾಡಿ, ದೇವೇಗೌಡರಿಗೆ ಯಾವ ನೈತಿಕತೆ ಇದೆ ಎಂದು ಇಲ್ಲಿ ಬಂದು ಸ್ಪರ್ಧಿಸಿ ಮತ ಕೇಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲಾಗುತ್ತಿಲ್ಲ. ಮಹಿಳೆಯರಿಗೆ 6 ಸಾವಿರ ಮಾಸಾಶನ, ವೃದ್ಧರಿಗೆ ಪಿಂಚಣಿ ಸೌಲಭ್ಯ, ಕಾರ್ಮಿಕರಿಗೆ ಹೆಚ್ಚಿನ ಮಾಸಾಶನ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ನೀಡಿದ್ದರು.
ಅದರಲ್ಲಿ ಎಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ. ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಕುಮಾರಣ್ಣ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡುವ ಸ್ಥಿತಿ ಬಂದಿದೆ. ಇಂತಹದರಲ್ಲಿ ದೇವೇಗೌಡರಿಗೆ ಮತ ನೀಡಬೇಕಾ ಎಂದು ಪ್ರಶ್ನಿಸಿದರಲ್ಲದೆ, ಹಾಸನ ರಾಜಕಾರಣದಿಂದ ತುಮಕೂರಿಗೆ ನೀರೇ ಬಿಟ್ಟಿಲ್ಲ, ಹೀಗಿರುವಾಗ ಜಿಲ್ಲೆಯ ಸಮಸ್ಯೆಯನ್ನು ಬಗೆಹರಿಸುವವರು ಯಾರು? ದೇವೇಗೌಡರಿಗೆ ವಯಸ್ಸಾಗಿದೆ. ಈ ವಯಸ್ಸಲ್ಲಿ ಅವರು ಏನು ಕೆಲಸ ಮಾಡುವರು, ನೀರು ಬೇಡ ಎನ್ನುವುದಾದರೆ ಜೆಡಿಎಸ್‍ಗೆ ಬೆಂಬಲಿಸಿ, ಇಲ್ಲಾ ನೀರು ಬೇಕು ನಮ್ಮ ಜಿಲ್ಲೆ ಅಭಿವೃದ್ಧಿ ಆಗಬೇಕು ಎನ್ನುವುದಾದರೆ ಜಿ.ಎಸ್.ಬಸವರಾಜುರವರಿಗೆ ಮತಹಾಕಿ ಎಂದು ಮನವಿ ಮಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮೇಲ್ವರ್ಗ, ಕೆಳವರ್ಗ ಎಂದು ಬೇಧ ಭಾವ ಮಾಡದೆ ಎಲ್ಲವರ್ಗಗಳಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ತಂದಿದ್ದಾರೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗವು ಕೂಡ ಬಿಜೆಪಿಗೆ ಬೆಂಬಲಿಸಲಿದ್ದು, ಈ ಬಾರಿ ಜಿ.ಎಸ್.ಬಸವರಾಜು ಅವರು ಗೆಲ್ಲಲಿದ್ದಾರೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ರೈತ ಮುಖಂಡ ಶಿವಪ್ರಸಾದ್, ಮಾಜಿ ಸಚಿವ ಸೊಗಡು ಶಿವಣ್ಣ, ಮುಖಂಡ ಬಿ.ಕೆ.ಮಂಜುನಾಥ್, ಷಣ್ಮುಖಪ್ಪ, ಗೋಪಾಲಗೌಡ, ರಮೇಶ್ ಸೇರಿದಂತೆ ಇತರರಿದ್ದರು.
ಪತ್ರಿಕಾಗೋಷ್ಠಿ ನಂತರ ಕಾಂಗ್ರೆಸ್‍ನಲ್ಲಿದ್ದ ಜಕಣಾಚಾರಿ ಕಾಂಗ್ರೆಸ್‍ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರೆ, ಸಿರಾದ ಎಂ.ಚಿದಾನಂದ ಗೌಡ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರಿಗೆ ಬಿಜೆಪಿ ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಚಿದಾನಂದಗೌಡ ನೇತ್ವರದಲ್ಲಿ ಅವರ ಬೆಂಬಲಿಗರು ಕೂಡ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.