ಕೊಡಿಗೇನಹಳ್ಳಿ :
ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ರಾಜಾರೋಷವಾಗಿ ಪಿಡಿಓ ನಿಯಮಗಳನ್ನು ಗಾಳಿಗೆ ತೂರಿ ಭ್ರಷ್ಟ್ಟಾಚಾರ ನಡೆಸುತ್ತಿದ್ದಾರೆ. ಶಾಲೆಗಳ ಅನುದಾನ, ಕಂಪ್ಯೂಟರ್ ಖರೀದಿ, ಸ್ಯಾನಿಟೈಜರ್, ಬ್ಲೀಚಿಂಗ್ ಪೌಡರ್ ಖರೀದಿ, ಮೊಬೈಲ್ ಫೋನ್ ಖರೀದಿ ಮತ್ತು ಎಸ್.ಸಿ., ಎಸ್.ಟಿ ಕಾಲನಿಗಳ ಅಭಿವೃಧ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬರುತ್ತಿದೆ.
ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿಯಲ್ಲಿ 2020-21ನೆ ಸಾಲಿನಲ್ಲಿನ 15ನೆ ಹಣಕಾಸಿನಲ್ಲಿ ಕ್ರಿಯಾಯೋಜನೆ ಇಲ್ಲದೆ, ಬೇಕಾಬಿಟ್ಟಿಯಾಗಿ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಸಾರ್ವಜನಿಕರು ಜುಲೈ 30 ರಂದು ಸಿ.ಎಸ್ ತುಮಕೂರು ಹಾಗೂ ಸಿಇಓ ಮಧುಗಿರಿರವರಲ್ಲಿ ದೂರು ಸಲ್ಲಿಸಿದ್ದಾರೆ. ಪಾರದರ್ಶಕವಾಗಿ ತನಿಖೆಯಾಗಬೇಕು, ಪಿಡಿಓ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದೆ 15 ದಿನಕ್ಕೊಮ್ಮೆ ಹಾಜರಾಗುತ್ತಿದ್ದಾರೆ. ಸರ್ಕಾರ ನೀಡಿರುವ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಶಾಲೆಗಳಿಗೆ ಶೇ. 2 ಅನುದಾನದಲ್ಲಿ 1,34,271/- ರೂ, ಸ್ಯಾನಿಟೈಜರ್, ಬ್ಲೀಚಿಂಗ್ ಪೌಡರ್ ಖರೀದಿಗೆ 7,79,901/- ರೂ, ಕಂಪ್ಯೂಟರ್ ಖರೀದಿ ಮಾಡದೆ 1,43,539/- ರೂ. ಅಕ್ರಮ ನಡೆದಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಈ ಕುರಿತು ಗ್ರಾಪಂ ಸದಸ್ಯ ನಂಜಪ್ಪ ಮಾತನಾಡಿ, ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಸಾರ್ವಜನಿಕರಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃಧ್ಧಿ ವಿಚಾರವಾಗಿ ನಾನು ಏನಾದರೂ ಪ್ರಶ್ನಿಸಿದರೆ, ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದರೂ ಕೂಡ ನನಗೇ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನಾಗಿ ಸಾರ್ವಜನಿಕರ ಶ್ರೇಯಸ್ಸಿಗೆ ಮಾಹಿತಿ ಕೇಳಿದರೂ ಸೌಜನ್ಯವಾಗಿ ಉತ್ತರಿಸುವುದಿಲವ್ಯಿಲ್ಲಿನ ಗ್ರಾಪಂನಲ್ಲಿ 2019-20 ಮತ್ತು 2020-21 ನೆ ಸಾಲಿನ ಅನುದಾನದಲ್ಲಿ ಕನಿಷ್ಠ ಸುಮಾರು 25 ರಿಂದ 30 ಲಕ್ಷ ರೂ.ಗಳ ಅವ್ಯವಹಾರ ನಡೆದಿದೆ. ಈ ಕುರಿತು ಸಂಪೂರ್ಣ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಪಂಗಳು ಸರಕಾರದ ನಿಯಮಾನುಸಾರ ಕಾರ್ಯ ನಿರ್ವಹಿಸಲು, ಭ್ರಷ್ಟ ಮುಕ್ತ ಗ್ರಾಪಂ ರೂಪಿಸಲು ಸಿಇಓ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗ್ರಾಪಂ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸದಸ್ಯರುಗಳಾದ ಮಂಜುನಾಥ್, ರಮೇಶ್ ಮತ್ತು ಸುರೇಶ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
