ಯುವಕರು ನೌಕರಿ ಬದಲು ರೈತರಾಗಲು ಮುಂದೆ ಬರಬೇಕಿದೆ-ಎಂ.ಶಿವರುದ್ರಗೌಡ

ಬಳ್ಳಾರಿ

         ಯುವಕರು ವಿದ್ಯೆ ಕಲಿತು ನೌಕರಿ ಹಿಡಿಯುವ ಹಂಬಲ ಬಿಟ್ಟು ಶಿಕ್ಷಣವು ತಮಗೆ ನೀಡಿದ ಜ್ಞಾನ ಸಂಪತ್ತಿನಿಂದ ರೈತರಾಗಲು ಮುಂದೆ ಬರಬೇಕಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಶಿವರುದ್ರಗೌಡ ಹೇಳಿದರು. ತಾಲೂಕಿನ ಸಿರಿವಾರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಶಿವಕುಮಾರ ಯುವಕ ಸಂಘ, ಶ್ರೀ ಬಸವೇಶ್ವರ ಯುವಕ ಸಂಘ ಮತ್ತು ಶ್ರೀ ಗುರು ಪುಟ್ಟರಾಜ ಯುವಕ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸಿರಿವಾರ ಗ್ರಾಮ ಸಿರಿ-ಸಂಪತ್ತಿನಿಂದ ಕೂಡಿದ ಗ್ರಾಮವಾಗಿದೆ.

          ಕಪ್ಪಗಲ್ಲು-ಸಿರಿವಾರ ಗ್ರಾಮಗಳು ಒಂದೇರೀತಿಯ ಸಿರಿ-ಸಂಪತ್ತು ಹೊಂದಿವೆ. ಈ ಗ್ರಾಮಗಳಲ್ಲಿ ಶಿಕ್ಷಣ, ಕ್ರೀಡೆ, ದೇಶ ಭಕ್ತಿ ಹಾಗೂ ನಾಡ ಭಕ್ತಿ, ಕಲೆ, ಸಾಹಿತ್ಯ, ಸಂಸ್ಕತಿಯಲ್ಲಿ ನಮ್ಮ ಯುವಕರು ಈ ನಾಡಿಗೆ, ಈ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದೇರೀತಿ, ಎಲ್ಲ ಕ್ಷೇತ್ರಗಳಲ್ಲೂ ದುಡಿಯುವ ಯುವಕರಿಗೆ ನಾವು ಎಂದಿಗೂ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಪ್ರೋತ್ಸಾಹಿಸಿದರು. ಪೊಲೀಸ್ ಅಧಿಕಾರಿ ವಸಂತ್‍ಕುಮಾರ್ ಮಾತನಾಡಿ, ಬಡವರ ಮನೆ ಊಟ ಚೆಂದ ಎನ್ನುವಂತೆ ಸಿರಿವಾರ-ಕಪ್ಪಗಲ್ಲು ಗ್ರಾಮದ ಜನರು ಪ್ರೀತಿ-ಸೌಹಾರ್ದತೆಗೆ ಮಾದರಿಯಾಗಿದ್ದಾರೆ. ಹಳ್ಳಿಯಲ್ಲಿ ಇಂದಿಗೂ ಈ ವಾತ್ಸಲ್ಯಭರಿತ ಗುಣ ಹೊಂದಿರುವ ಜನರು ಸಿಗುತ್ತಾರೆ. 

         ಆದರೆ ಪಟ್ಟಣದಲ್ಲಿ ಇಂತಹವರು ಸಿಗುವುದು ದುರ್ಲಭ ಎಂದರು. ಸಿರಿವಾರ ಗ್ರಾಮದ ಯುವಕರ ಸಾಮಾಜಿಕ ಕಳಕಳಿ ನಿಜಕ್ಕೂ ಇತರರಿಗೆ ಮಾದರಿಯಾಗಿದೆ ಎಂದರು. ಶಿಕ್ಷಕ ಮೆಹತಾಬ್ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ವಿವಿಧ ಯುವ ಸಂಘಟನೆಗಳು ಹಾಗೂ ಯುವಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

        ನಾವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಶ್ರದ್ಧೆ ಇರಬೇಕು. ಮನೋರಂಜನೆ, ಸಾಂಸ್ಕತಿಕ ಚಟುವಟಿಕೆಗಳು ಇದ್ದಲ್ಲಿ ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಲಿದೆ. ನಂಬಿಕೆ ಶೇ 10 ರಷ್ಟು ಇದ್ದರೆ ಪ್ರಯತ್ನ ಶೇ 90 ರಷ್ಟು ಇರಬೇಕು ಎಂದರು. ಗ್ರಾಮದವರೇ ಆದ ಸಹ ಪ್ರಾಧ್ಯಾಪಕ ನಾಗನಗೌಡ ಕೋಟೆ ಮಾತನಾಡಿ, ಬಾಲ್ಯದ ದಿನಗಳನ್ನು ಸ್ಮರಿಸಿದರು. ತಮ್ಮ ಗ್ರಾಮದ ಹಿರಿಯರು ತಮಗೆ ನೀಡಿದ ಸಂಸ್ಕತಿ ಮತ್ತು ಸಂಸ್ಕಾರಗಳಿಂದಾಗಿ ಇಂದು ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಲಯದಲ್ಲಿ ನೌಕರಿ ಮಾಡಲು ಸಾಧ್ಯವಾಗಿದೆ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಂಡರು.

      ಗ್ರಾಮದ ಹಿರಿಯ ಮಹಿಳೆ ಅಂಗಡಿ ನೀಲಮ್ಮ ಮಾತನಾಡಿ, ಜೀವನದುದ್ದಕ್ಕೂ ನಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರೆ ಯಾವುದೇ ಶುಗರ್, ಬಿಪಿ ಬರುವುದಿಲ್ಲ ಎಂದರು. ಇದೇವೇಳೆ ದಿವ್ಯಾಂಗ ಕ್ಷೇತ್ರದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ 54 ರನ್ ಸಿಡಿಸಿ ಭಾರತಕ್ಕೆ ಕೀರ್ತಿ ತಂದ ತಿಪೇಸ್ವಾಮಿ, ಥೈಲಂಡ್ ನಲ್ಲಿ ನಡೆದ ಥ್ರೋಬಾಲ್ ನಲ್ಲಿ ಭಾರತದಿಂದ ಸ್ಪರ್ಧಿಸಿ ಕೀರ್ತಿ ಬೆಳಗಿದ ಎಸ್‍ಡಿಎಂ ಶಿವಕುಮಾರಸ್ವಾಮಿ, ನೃತ್ಯದಲ್ಲಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಪಿ.ಸಹನಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕೋಟೆ ನಾಗನಗೌಡ, ಅಂಗಡಿ ನೀಲಮ್ಮ, ಜಿಎನ್ ಅರಳಿ, ಹೆಚ್ ಎಂ ದಯಾನಂದಸ್ವಾಮಿ, ಶ್ರೀಧರಗಡ್ಡೆ ಸಿದ್ಧಬಸಪ್ಪ, ಎಂ.ವಸಂತಕುಮಾರ್, ಬಿ.ಚಂದ್ರಶೇಖರ್ ಆಚಾರ್, ಕೋಟಿ ಪೊಂಪಣ್ಣ, ಕರ್ಚೇಡು ಮರಿಯಪ್ಪ, ನರೇಶ್ ಸೋನಿ, ಜಗ್ಗಣ್ಣನವರ ಸಿದ್ಧಬಸಪ್ಪ, ಎ.ಎರ್ರಿಸ್ವಾಮಿ, ಮಾರೆಣ್ಣ ಅವರನ್ನು ಸನ್ಮಾನಿಸಲಾಯಿತು.

          ಬಳಿಕ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು. ಇದಕ್ಕೂ ಮುನ್ನ ಎ.ತಿಪ್ಪೇಸ್ವಾಮಿ ಮತ್ತು ಶಿವಕುಮಾರಸ್ವಾಮಿ ಅವರಿಗೆ ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಚನ್ನ ಮಲ್ಲಯ್ಯಸ್ವಾಮಿ, ಪೊಂಪಾಪತಿ ಮತ್ತು ಬೆಣಕಲ್ ತಾತನವರು ಸಾನಿಧ್ಯವಹಿಸಿದ್ದರು. ಸಂಘಟನೆಗಳ ಮುಖಂಡರಾದ ಕೋಟೆ ಬದ್ರಿನಾಥ, ಕೆ.ಮಲ್ಲನಗೌಡ ಇನ್ನಿತರರು ಇದ್ದರು. ನಿಖಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಮಹೇಶ್ ವಂದಿಸಿ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link