ರಾಣಿಬೆನ್ನೂರು:
ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶ ಕಂಡ ಅಪ್ರತಿಮ ರಾಜಕೀಯ ಮುತ್ಸದ್ದಿ ನಾಯಕರಾಗಿದ್ದರು. ದೇಶದ ರಕ್ಷಣೆ ಮತ್ತು ಸಮಗ್ರ ಅಭಿವೃದ್ದಿಯ ಕನಸು ಕಂಡ ಏಕೈಕ ನಾಯಕರಾಗಿದ್ದರು ಎಂದು ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಕರೂರು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಯುವ ಬ್ರಿಗೇಡ್ ವತಿಯಿಂದ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಭಾವಪೂರ್ಣ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಮಹಾನ್ ಮುತ್ಸದ್ದಿ ನಾಯಕನನ್ನು ಕಳೆದುಕೊಂಡಿರುವ ಭಾರತ ಮಾತೆಯ ಮಕ್ಕಳಲ್ಲಿ ಅನಾಥಪ್ರಜ್ಞೆ ಮೂಡಿದೆ ಎಂದರು.
ಭಾರತ ದೇಶ ಹಿಂದಿನ ಇತಿಹಾಸದಿಂದಲೂ ನೂರಾರು ಮಹಾನ ನಾಯಕರನ್ನು ಕಂಡಿದೆ. ಆದರೆ ದೂರ ದೃಷ್ಟಿಯ ಯೋಜನೆಗಳನ್ನು ರೂಪಿಸುವ ಮತ್ತು ಅದನ್ನು ಸಮರ್ಥವಾಗಿ ಜಾರಿಗೊಳಿಸುವ ನಾಯಕರಾಗಿದ್ದರು, ತಮ್ಮ ಜೀವಿತಾವಧಿಯಲ್ಲಿ ಅನೇಕ ಏಳು ಬೀಳುಗಳನ್ನು ಕಂಡು ಅನುಭವಿಸಿದ್ದ ಅಟಲ್‍ಜಿ ಅವರು ತಾಳ್ಮೆಗೆ ಹೆಸರಾದವರು, ಇಂದಿನ ಯುವಕರು ಅಂತಹ ಮಾದರಿ ನಾಯಕರ ಅನುಕರಣೆಯಲ್ಲಿ ಸಾಗಿದಾಗ ಮಾತ್ರ ಭಾರತ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುವುದು ಎಂದರು.
ಹರಿಹರ ಮಾಜಿ ಶಾಸಕ ಬಿ.ಪಿ.ಹರೀಶ ಮಾತನಾಡಿ, ಇಂದಿನ ಯುವಕರು ಮತ್ತು ಭವಿಷ್ಯದ ರಾಜಕಾರಣಿಗಳಿಗೆ ವಾಜಪೇಯಿ ಅವರ ಮುತ್ಸದ್ದಿತನದ ರಾಜಕೀಯ ಗುಣಧರ್ಮಗಳು ಮಾದರಿಯಾಗಿದೆ, ಅಂತಹ ಮಹಾನ್ ನಾಯಕರ ಜೀವನ ಮತ್ತು ಸಾಧನೆ ಅರಿತು ಕೊಳ್ಳಬೇಕಾದ ಅಗತ್ಯವಿದೆ ಎಂದರು.
ಗ್ರಾಪಂ ಅಧ್ಯಕ್ಷ ಹೊನ್ನಪ್ಪ ಮುಡದ್ಯಾವಣ್ಣನವರ, ತಾಪಂ ಸದಸ್ಯ ರಾಮಪ್ಪ ಬೆನ್ನೂರ, ಬಾಗಲಕೋಟೆಯ ಯುವ ಬ್ರಿಗೇಡ್ ಸಂಚಾಲಕ ಗಂಗಾಧರ ಹಿರೇಮಠ, ಅರುಣಕುಮಾರ ಪೂಜಾರ, ಡಾ.ಬಸವರಾಜ ಕೇಲಗಾರ, ಜಿಪಂ ಮಾಜಿ ಅದ್ಯಕ್ಷ ಶಂಕ್ರಣ್ಣ ಮಾತನವರ, ತಾಲೂಕಾ ಯುವ ಬ್ರಿಗೇಡನ ಪ್ರಕಾಶ ಹೊರಕೇರಿ, ಅಜ್ಜಪ್ಪ ಹುಣಸಿಕಟ್ಟಿ, ಪ್ರಭು ಕೊಲಾಟಿ, ಬಸವರಾಜ ಮುಕ್ತೇನಹಳ್ಳಿ, ನಾಗರಾಜ ಚಳಗೇರಿ, ಪಕ್ಕೀರೇಶ ಕೋಲಾಟಿ, ಹನುಮಂತಪ್ಪ ಹರನಗಿರಿ, ಮಂಜುನಾಥ ಹರನಗಿರಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ