ನವದೆಹಲಿ:
ಈಗಾಗಲೇ ಲಕ್ಷಾಂತರ ಜನರನ್ನು ಕಳೆದುಕೊಂಡು ಉಕ್ರೇನ್ ನಲುಗಿದೆ. ಹೀಗಾಗಿ ಉಕ್ರೇನ್ ವಿರುದ್ಧ ಹೋರಾಟ ತೀವ್ರಗೊಳಿಸಲು ಉಕ್ರೇನ್ ತೊಡೆತಟ್ಟಿದೆ. ಇದೇ ವೇಳೆ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್ ಅವರನ್ನ ವಜಾ ಮಾಡಲಾಗಿದೆ.
ಅವರ ಸ್ಥಾನಕ್ಕೆ ರುಸ್ಟೆಮ್ ಉಮೆರೋವ್ ನಾಮನಿರ್ದೇಶನ ಮಾಡಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆದೇಶಿಸಿದ್ದಾರೆ. ಇದು ಮೊದಲೇ ಕುದಿಯುತ್ತಿದ್ದ ಉಕ್ರೇನ್ ಕುಲುಮೆಗೆ ಪೆಟ್ರೋಲ್ ಸುರಿದಂತೆ ಆಗಿದೆ. ಈ ಕ್ರಮ ಮುಂದಿನ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿದೆ.
ದಿಢೀರ್ ರಕ್ಷಣಾ ಸಚಿವರ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ ರಕ್ಷಣಾ ಸಚಿವರನ್ನ ಬದಲಿಸಲು ನಿರ್ಧರಿಸಿದ್ದೇನೆ. ಮಿಲಿಟರಿ & ಸಮಾಜದ ಜೊತೆಗೆ ಉತ್ತಮ ಸಂವಹನದ ಹೊಸ ವಿಧಾನ ಬೇಕಿದೆ. ಹಾಗೇ ಇತರ ಸ್ವರೂಪಗಳ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಈ ಮೂಲಕ 19 ನೇ ತಿಂಗಳಿಗೆ ಕಾಲಿಟ್ಟಿರುವ ಉಕ್ರೇನ್ ಮೇಲಿನ ರಷ್ಯಾ ಯುದ್ಧ ದೊಡ್ಡ ತಿರುವು ಪಡೆದಂತಾಗಿದೆ. ಅಲ್ಲದೆ ಉಕ್ರೇನ್ ಬೇರೆ ಏನೋ ರಣತಂತ್ರವನ್ನ ರೂಪಿಸಿರುವ ಮುನ್ಸೂಚನೆ ಕೂಡ ಸಿಕ್ಕಿದೆ.
ಒಂದು ಕಡೆ ರಕ್ಷಣಾ ಸಚಿವರ ಬದಲಾವಣೆ ನಡೆದಿದ್ದರೆ, ಇನ್ನೊಂದ್ಕಡೆ ಉಕ್ರೇನ್ ವಿರುದ್ಧ ರಷ್ಯಾ ಭೀಕರ ದಾಳಿ ಮುಂದುವರಿಸಿದೆ. ಉಕ್ರೇನ್‌ನ ದಕ್ಷಿಣ ಒಡೆಸಾದ ಪ್ರದೇಶ ಗುರಿಯಾಗಿಸಿ ರಷ್ಯಾ ಡ್ರೋನ್ ದಾಳಿ ನಡೆಸಿದೆ. ದಾಳಿಯಲ್ಲಿ ನ್ಯಾಟೋ ಸದಸ್ಯ ರಾಷ್ಟ್ರ ರೊಮಾನಿಯಾದ ಗಡಿ ಸಮೀಪ ಇರುವ ಉಕ್ರೇನ್‌ನ ಡ್ಯಾನ್ಯೂಬ್ ಬಂದರಿಗೆ ಹಾನಿ ಆಗಿದೆ.
ರೊಮಾನಿಯಾ ಹಾಗೂ ಉಕ್ರೇನ್ ಪ್ರತ್ಯೇಕಿಸುವ ಡ್ಯಾನ್ಯೂಬ್ ನದಿ ಬಂದರಿನ ರೆನಿಯಲ್ಲಿದ್ದ ಇಂಧನ ಸಂಗ್ರಹಗಾರವನ್ನು ಟಾರ್ಗೆಟ್ ಮಾಡಿ ದಾಳಿ ನಡೆದಿದೆ ಎನ್ನಲಾಗಿದೆ. ಹಾಗೇ ಒಡೆಸಾ ಮೇಲೆ ಗುರಿಯಾಗಿಸಿದ್ದ 22 ಡ್ರೋನ್‌ಗಳನ್ನು ಹೊಡೆದು ಉರುಳಿಸಲಾಗಿದೆ ಎಂದು ಉಕ್ರೇನ್ ಪಡೆಗಳು ತಿಳಿಸಿವೆ.
ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಅದರಲ್ಲೂ ಉಕ್ರೇನ್‌ಗೆ ಇದೇ ಜಲಮಾರ್ಗದ ಮೂಲಕ ವ್ಯವಹಾರ ನಡೆಯುತ್ತಿತ್ತು. ಆದ್ರೆ ಕೆಲ ದಿನದ ಹಿಂದಷ್ಟೇ ರಷ್ಯಾ ಸೇನೆ ಇಲ್ಲಿ ಉಕ್ರೇನ್ ನೌಕೆಯನ್ನ ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತವು ಭಾಗಶಃ ತಪ್ಪಿದೆ. 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಈ ತನಕ ದಿನದಿನಕ್ಕೂ ಉಕ್ರೇನ್ ನರಳುತ್ತಿದೆ.
ಅಗತ್ಯ ಇರುವ ದಿನಬಳಕೆ ವಸ್ತು ತರಿಸಿಕೊಳ್ಳುವುದಕ್ಕು ಪರದಾಡುತ್ತಿದೆ ಉಕ್ರೇನ್. ಇದೇ ಸಂದರ್ಭದಲ್ಲಿ ಕಪ್ಪು ಸಮುದ್ರದ ಬಳಿ ಉಕ್ರೇನ್ ನೌಕೆ ಅಥವಾ ಬೋಟ್ ಕಾಣಿಸಿದರೆ ಸಾಕು ರಷ್ಯಾ ಮುಲಾಜು ನೋಡದೆ ಉಡೀಸ್ ಮಾಡುತ್ತಿದೆ. ಇದೀಗ ನ್ಯಾಟೋ ಸದಸ್ಯ ರಾಷ್ಟ್ರದ ಗಡಿ ಬಳಿಯೇ ದಾಳಿ ನಡೆದಿದೆ.
ಹೀಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದಿದೆ. ದಾಳಿಯ ಭೀಕರತೆಗೆ ಉಕ್ರೇನ್ ತತ್ತರಿಸಿ ಹೋಗಿದೆ. ಯಾವಾಗ ಯುದ್ಧ ನಿಲ್ಲುತ್ತದೆ? ಅಂತಾ ಜನರು ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ರಷ್ಯಾ ತನ್ನ ದಾಳಿಯನ್ನ ದಿನದಿಂದ ದಿನಕ್ಕೆ ಹೆಚ್ಚು ಮಾಡಿ, ಉಕ್ರೇನ್ ಎದೆಯಲ್ಲಿ ನಡುಕ ಹುಟ್ಟಿಸಿದೆ. ಹೀಗೆ ಇಬ್ಬರ ಈ ಜಗಳದಲ್ಲಿ ಬಲಿಯಾಗಿ ಜೀವ ಬಿಡುತ್ತಿರುವುದು ಮಾತ್ರ ಸಾಮಾನ್ಯ ಜನರು. ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಇನ್ನೂ ಅದೆಷ್ಟು ಜೀವಗಳು ಈ ಯುದ್ಧದ ಆಟಕ್ಕೆ ಬಲಿಯಾಗುತ್ತವೆ? ಅನ್ನೋದನ್ನು ಈಗ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ