ಬೆಂಗಳೂರು:
ರಾಜ್ಯ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎನ್ನುವ ಸುದ್ದಿಗಳ ನಡುವೆ ರಾಜ್ಯ ರಾಜಕಾರಣ ಇದೀಗ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರತ್ತ ಕೇಂದ್ರೀಕೃತವಾಗಿದೆ. ಒಂದೆರಡು ದಿನಗಳಲ್ಲಿ 15 ರಿಂದ 20 ಮಂದಿ ಕಾಂಗ್ರೆಸ್ – ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿಂದು ಗಹನವಾದ ಚರ್ಚೆ ನಡೆಯಿತು.ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊಣೆ ಹೊತ್ತಿರುವ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತಿತರರು ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಿದರು.ಪಕ್ಷದಲ್ಲಿ ಬಂಡಾಯ ಎದ್ದಿರುವ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಪ್ರಕರಣದ ಬಗ್ಗೆ ಗಂಭೀರವಾದ ಚರ್ಚೆ ನಡೆದಿದ್ದು, ಬೆಳಗಾವಿ ರಾಜಕಾರಣದ ಆಸ್ಪೋಟ ಪರಿಸ್ಥಿತಿಯನ್ನು ಶಮನಗೊಳಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರ ಹೆಗಲಿಗೆ ಹಾಕಲಾಗಿದೆ. ಸಿದ್ದರಾಮಯ್ಯ ಜಾರಕಿಹೊಳಿ ಸಹೋದರರ ಜತೆ ಚರ್ಚೆ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತರಲಿದ್ದಾರೆ ಎನ್ನುವ ವಿಶ್ವಾಸ ಪಕ್ಷದ ಹಿರಿಯ ನಾಯಕರದ್ದಾಗಿದೆ.
ಇದೇ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಬೆಳಗಾವಿ ರಾಜಕಾರಣದಲ್ಲಿ ಮೂಗು ತೂರಿಸದಂತೆ ಹೈಕಮಾಮಡ್ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಹ ಸ್ವತಃ ಸಿದ್ದರಾಮಯ್ಯ ವೇಣುಗೋಪಾಲ್ ಅವರಿಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.ಮೈತ್ರಿ ಪಕ್ಷದ ಕೆಲವು ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸುತ್ತಿರುವ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಸೆಳೆಯುವ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎನ್ನಲಾಗಿದೆ. ಬಿಜೆಪಿ ನಮ್ಮ ಪಕ್ಷದ ಶಾಸಕರನ್ನು ಮುಟ್ಟಿದರೆ ನಾವೂ ಸಹ ಬಿಸಿ ಮುಟ್ಟಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.ಸಚಿವ ಸಂಪುಟ ವಿಸ್ತರಣೆ, ತೆರವಾಗಿರುವ ಮೂರು ವಿಧಾನ ಪರಿಷತ್ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ, ನಿಗಮ ಮಂಡಳಿಗಳ ನೇಮಕ ಸೇರಿದಂತೆ, ಹಲವು ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ.ಸುದ್ದಿಗಾರರ ಜತೆ ಮಾತನಾಡಿದ ಕೆ.ಸಿ. ವೇಣುಗೋಪಾಲ್, ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ದುಡ್ಡಿನ ಹೊಳೆ ಹರಿಸಿದರೂ ಬಿಜೆಪಿಯ ಆಟ ನಡೆಯುವುದಿಲ್ಲ ಎಂದರು.
ಕೇಂದ್ರ ಸರ್ಕಾರದ ಐಟಿ, ಇಡಿಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರೂ ಬಿಜೆಪಿಯ ದುಡ್ಡಿನ ಆಟ ನಡೆಯುವುದಿಲ್ಲ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಬಿಜೆಪಿ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು. ಈಗಾಗಲೇ ಹೇಳಿರುವಂತೆ ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆ ನಡೆಯಲಿದ್ದು, ಮುಂದೂಡುವ ಪ್ರಶ್ನೆಯೇ ಇಲ್ಲ ಎಂದರು. ಜಾರಕಿಹೊಳಿ ಸಹೋದರರ ವಿಚಾರ ಸಮಸ್ಯೆಯೇ ಅಲ್ಲ. ಅದರಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಯಾವುದೇ ತೊಂದರೆಯೂ ಆಗುವುದಿಲ್ಲ ಎಂದು ವೇಣುಗೋಪಾಲ್ ಹೇಳಿದರು.