ರಾತ್ರಿ ಸುರಿದ ಭಾರೀ ಮಳೆ

ಹೊನ್ನಾಳಿ:


ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನಜಾವದವರೆಗೆ ಸುರಿದ ನಿರಂತರ ಮಳೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಏಳು ಮನೆಗಳು ಹಾನಿಗೊಳಗಾಗಿದ್ದು, ಒಟ್ಟು 4.60 ಲಕ್ಷ ರೂ.ಗಳಷ್ಟು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ತಾಲೂಕಿನ ಬೆನಕನಹಳ್ಳಿ ಗ್ರಾಮದ ಹಳದಪ್ಪ ಅವರ ಮನೆ ತೀವ್ರ ಹಾನಿಗೊಳಗಾಗಿದ್ದು, 2.50 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹೊನ್ನಾಳಿ ಪಟ್ಟಣದ ಒಂದು ಮನೆ ಭಾಗಶಃ ಹಾನಿಗೊಳಗಾಗಿದ್ದು, 50 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ. ತಾಲೂಕಿನ ಸುಂಕದಕಟ್ಟೆ ಗ್ರಾಮದ ಎರಡು ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, 80 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ.

ತಾಲೂಕಿನ ಎಚ್. ಗೋಪಗೊಂಡನಹಳ್ಳಿ ಗ್ರಾಮದ ಒಂದು ಮನೆ ಭಾಗಶಃ ಹಾನಿಗೊಳಗಾಗಿದ್ದು, 40 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ. ತಾಲೂಕಿನ ಬಿದರಗಡ್ಡೆ ಗ್ರಾಮದ ಒಂದು ಮನೆ ಭಾಗಶಃ ಹಾನಿಗೊಳಗಾಗಿದ್ದು, 40 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ. ತಾಲೂಕಿನ ದೊಡ್ಡೆರೇಹಳ್ಳಿ ಗ್ರಾಮದ ಒಂದು ಮನೆ ಭಾಗಶಃ ಹಾನಿಗೊಳಗಾಗಿದ್ದು, 40 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಕಂದಾಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಭಾರೀ ಮಳೆ:
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಾದ್ಯಂತ ಗುರುವಾರ ರಾತ್ರಿ 8.50ರಿಂದ ಶುಕ್ರವಾರ ಬೆಳಗಿನಜಾವ 4ರವರೆಗೂ ಬಿಟ್ಟೂಬಿಡದೇ ಭಾರೀ ಮಳೆ ಸುರಿಯಿತು. ಒಟ್ಟು 362.2 ಮಿಮೀ. ಮಳೆ ಸುರಿದಿದೆ. ವಿವಿಧೆಡೆ ಸುರಿದಿರುವ ಮಳೆ ವಿವರ ಇಂತಿದೆ:
ಹೊನ್ನಾಳಿ-108 ಮಿಮೀ.
ಸವಳಂಗ-63.2 ಮಿಮೀ.
ಬೆಳಗುತ್ತಿ-59.8 ಮಿಮೀ.
ಗೋವಿನಕೋವಿ-54.8 ಮಿಮೀ.
ಹರಳಹಳ್ಳಿ-35.6 ಮಿಮೀ.
ಸಾಸ್ವೆಹಳ್ಳಿ-25.4 ಮಿಮೀ.
ಕುಂದೂರು-15.4 ಮಿಮೀ.
ಹೊನ್ನಾಳಿಯ ತುಂಗಭದ್ರಾ ನದಿ ನೀರಿನ ಮಟ್ಟ ಬುಧವಾರ 5.82 ಮೀ. ಇತ್ತು.
ನೆಲಕಚ್ಚಿದ ಮೆಕ್ಕೆಜೋಳ:
ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಕೊಯ್ಲಿಗೆ ಬಂದಿರುವ ಮೆಕ್ಕೆಜೋಳ ಭಾಗಶಃ ನೆಲಕಚ್ಚಿತ್ತು. ಹತ್ತಿ, ಶೇಂಗಾ, ತೊಗರಿ, ಹೆಸರು ಮತ್ತಿತರ ಬೆಳೆಗಳೂ ಹಾನಿಗೀಡಾಗಿದ್ದವು. ಆ ಹಾನಿಯಿಂದ ರೈತರು ಸುಧಾರಿಸಿಕೊಳ್ಳುವ ಮುನ್ನವೇ ಮತ್ತೆ ಅಕ್ಟೋಬರ್ ತಿಂಗಳ ನಾಲ್ಕನೇ ವಾರದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ನೆಲಕಚ್ಚಿದೆ. ಸಾವಿರಾರು ರೂ.ಗಳ ಸಾಲ ಮಾಡಿ ಬಿತ್ತನೆ ಬೀಜ-ರಸಗೊಬ್ಬರ ಖರೀದಿಸಿ ಬೆಳೆಗಳನ್ನು ಬೆಳೆದಿರುವ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ದಿಕ್ಕುತೋಚದಂತಾಗಿದ್ದಾರೆ.


ಜುಲೈ ತಿಂಗಳ ಎರಡು-ಮೂರನೇ ವಾರದಲ್ಲಿಯೂ ವಿಪರೀತ ಮಳೆ ಸುರಿದ ಕಾರಣ ರಾಜ್ಯದ ಬಹುತೇಕ ಅಣೆಕಟ್ಟುಗಳಿಗೆ ಅಧಿಕ ಪ್ರಮಾಣದ ನೀರು ಹರಿದಿತ್ತು.ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹೊನ್ನಾಳಿ ತಾಲೂಕು ವಿಜಯಪುರ(ಚಿಕ್ಕಬಾಸೂರು ತಾಂಡಾ)ಗ್ರಾಮದ ರೈತ ಎಚ್. ಬಸವರಾಜ್ ಅವರ ಹೊಲದಲ್ಲಿನ ಮೆಕ್ಕೆಜೋಳ ನೆಲಕಚ್ಚಿರುವ ದೃಶ್ಯ.

Recent Articles

spot_img

Related Stories

Share via
Copy link
Powered by Social Snap