ದಾವಣಗೆರೆ:
ಮಹಿಳೆ ಎಲ್ಲವನ್ನೂ ಸಾಧಿಸುವ ಸಾಮಥ್ರ್ಯಹೊಂದಿದ್ದರೂ ಸಹ ಆಕೆಯ ಮೇಲೆ ಮನೆ, ಕೆಲಸದ ಸ್ಥಳಗಳಲ್ಲಿ ಹಾಗೂ ನೈಸರ್ಗಿಕ ಸ್ಥಳಗಳಲ್ಲಿ ದೌರ್ಜನ್ಯ, ಶೋಷಣೆ ನಡೆಯುತ್ತಿದೆ ಎಂದು 2ನೇ ಹೆಚ್ಚುವರಿ ಮತ್ತು ಸಷೆನ್ಸ್ ನ್ಯಾಯಾಧೀಶರಾದ ಶ್ರೀಮತಿ ನಾಗಶ್ರೀ ವಿಷಾದ ವ್ಯಕ್ತಪಡಿಸಿದರು.
ನಗರದ ಆರ್.ಎಲ್.ಕಾನೂನು ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಶೋಷಣೆಗಳನ್ನು ತಡೆಯಲು ಸರ್ಕಾರಗಳು ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಸಹ ಶೋಷಣೆ ದಿನೇ, ದಿನೇ ಹೆಚ್ಚುತ್ತಲೇ ಇದೆ. ಆದ್ದರಿಂದ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಮಹಿಳೆಯರಿಗೆ ಕಾನೂನಿನ ಅರಿವು ಇಲ್ಲದೇ ಇರುವುದೇ ಈ ದೌರ್ಜನ್ಯಗಳಿಗೆ ಕಾರಣವಾಗಿದೆ. ಆದ್ದರಿಂದ ಮಹಿಳೆಯರು ಕಾನೂನು ಅರಿವುಯ ಪಡೆದರೆ, ತಮ್ಮನ್ನು ತಾವು ಸ್ವಂತ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಮಹಿಳೆಯರ ಮೇಲೆ ನಡೆಯುವ ಶೋಷಣೆಗೂ ನಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹಿಂದಿನ ಹೆಣ್ಣುಮಕ್ಕಳಂತೆ ಈಗಿನ ಮಹಿಳೆಯರು ಭಯಪಡುವವರಲ್ಲ. ಬದಲಿಗೆ ಧೈರ್ಯವಂತರಾಗಿದ್ದಾರೆ. ಸ್ವಯಂ ನಿರ್ಧಾರ ಕೈಗೊಳ್ಳುವ ಶಕ್ತಿಯುತರು ಆಗಿದ್ದಾರೆ. ಆದರೆ, ಅನುಭವ ಇಲ್ಲವಾಗಿದೆ. ಮಹಿಳೆಯರು ಸ್ಪಷ್ಟ ಗುರಿ ಇಟ್ಟುಕೊಳ್ಳುವ ಮೂಲಕ ಅದನ್ನು ಸಾಧಿಸುವ ಸದೃಢತೆ ಹೊಂದಬೇಕು ಎಂದರು.
ಮಹಿಳೆಯರು ದೌರ್ಬಲ್ಯವನ್ನೇ ಶಕ್ತಿಯನ್ನಾಗಿ ಮಾಡಿಕೊಳ್ಳಬೇಕು. ಸದೃಢ ನಿರ್ಧಾರ ಕೈಗೊಳ್ಳಬೇಕು. ಕಾರ್ಯಪರತೆಯನ್ನು ರೂಢಿಸಿಕೊಳ್ಳಬೇಕು. ಅದೃಷ್ಟಕ್ಕಾಗಿ ಕಾಯದೇ, ಸತತ ಪರಿಶ್ರಮದ ಮೂಲಕ ಗುರಿ ತಲುಪಲು ಮುಂದಾಗಬೇಕು. ಗುರಿ ಸಾಧನೆಗೆ ಎಂತಹದ್ದೇ ಸವಾಲು ಸ್ವೀಕರಿಸಲು ಸಿದ್ಧರಿರಬೇಕು. ಸಮಯ ಒಂದನ್ನು ಬಿಟ್ಟು ಎಲ್ಲರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಇವೆಲ್ಲವನ್ನೂ ಮೈಗೂಡಿಸಿಕೊಳ್ಳುವುದರಿಂದ ಮಹಿಳೆಯರು ಸಾಧಕಿಯರಾಗಲು ಸಾಧ್ಯವಿದೆ ಎಂದರು.ಹಿಂದೆಲ್ಲಾ ಹೆಣ್ಣುಮಕ್ಕಳು ಹುಟ್ಟಿದಾಕ್ಷಣ ಪೋಷಕರು ಮದುವೆಯ ಬಗ್ಗೆ ಯೋಚಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಮಹಿಳೆಯರಿಗಾಗಿ ಸಾಕಷ್ಟು ಸೌಲಭ್ಯಗಳಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿದ್ದಾಳೆ ಎಂದು ಹೇಳಿದರು.
2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಇ.ಚಂದ್ರಕಲಾ ಮಾತನಾಡಿ, ಮಹಿಳಾ ಶೋಷಣೆ ಗರ್ಭಾವಸ್ಥೆಯಿಂದಲೂ ಆರಂಭವಾಗಿ, ಸಾಯುವ ವರೆಗೂ ಮುಂದುವರೆಯುತ್ತದೆ. ಈ ಶೋಷಣೆಯಿಂದ ಹೊರ ಬರಲು ಶಿಕ್ಷಣ ಒಂದೇ ಅಸ್ತ್ರವಾಗಿದ್ದು, ಹೆಣ್ಣುಮಕ್ಕಳಿಗೆ ಪೋಷಕರು ಶಿಕ್ಷಣ ಕೊಡಿಸಲು ಮುಂದಾಗಬೇಕು. ಶಿಕ್ಷಣ ಮಹಿಳೆಯರನ್ನು ಗಟ್ಟಿಯನ್ನಾಗಿ ಎಂತಹ ಸಮಸ್ಯೆಯನ್ನೂ ಎದುರಿಸುವ ಗುಣ ಬೆಳೆಸಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ರೆಡ್ಡಿ ವಹಿಸಿದ್ದರು. ವೇದಿಕೆಯಲ್ಲಿ ರಶ್ಮಿ ಮಹಿಳಾ ವಸತಿ ಶಾಲೆಯ ಟ್ರಸ್ಟಿ ಪ್ರೇಮಾ ನಾಗರಾಜ್ ಹಾಜರಿದ್ದರು. ಪಂಕಜಾ ಸ್ವಾಗತಿಸಿದರು. ಧರಣಿ ಪಾಟೀಲ್ ನಿರೂಪಿಸಿದರು.
