ರಾಸುಗಳಿಗೆ ಮತ್ತೆ ಮಕ್ಕರಿಸಿದ ಜರಸಲು ರೋಗ

ತುಮಕೂರು:

     ಜಿಲ್ಲೆಯಲ್ಲಿ ಕುರಿ – ಮೇಕೆಗಳ ಸಾವು   ಕುರಿ-ಮೇಕೆಗಳ ಸಾವು  ಸಾಕಣೆದಾರರಲ್ಲಿ ಹೆಚ್ಚಿದ ಆತಂಕ 

ಕಳೆದ ವರ್ಷ ಕುರಿ, ಮೇಕೆಗಳನ್ನು ಬಲಿ ತೆಗೆದುಕೊಂಡಿದ್ದ ಕಾಲು ಕೊಳೆತ ರೋಗ ಮತ್ತೆ ವಕ್ಕರಿಸಿಕೊಂಡಿದ್ದು, ಕುರಿ, ಮೇಕೆ ಸಾಕಾಣಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಬಾರಿ ನಾನಾ ರೋಗಗಳು ಸಾಕು ಪ್ರಾಣಿಗಳಲ್ಲಿ ಕಂಡುಬರುತ್ತಿವೆ. ಒಂದು ಕಡೆ ಜರಸಲು ರೋಗ, ಮತ್ತೊಂದು ಕಡೆ ನೀಲಿ ನಾಲಿಗೆ ರೋಗ… ಹೀಗೆ ಒಂದರ ಹಿಂದೆ ಮತ್ತೊಂದು ಎಂಬಂತೆ ರೋಗರುಜಿನಗಳು ಕುರಿ, ಮೇಕೆ, ದನಗಳಿಗೆ ಅಂಟಿಕೊಳ್ಳುತ್ತಿದ್ದು, ಪಶು ಸಾಕಾಣೆದಾರರು ಅವುಗಳನ್ನು ಉಳಿಸಿಕೊಳ್ಳಲು ಸಾಹಸಪಡುತ್ತಿದ್ದಾರೆ.

ಮೊನ್ನೆಯಷ್ಟೇ ಒಂದೇ ದಿನ ನೀಲಿ ನಾಲಗೆ ರೋಗಕ್ಕೆ ಒಬ್ಬ ಕುರಿಗಾಹಿಯ 15 ಕುರಿಗಳು ಸಾವನ್ನಪ್ಪಿವೆ. ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹೋಬಳಿ ಗೆದ್ದಲೇಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ರೋಗ ಕಾಣಿಸಿಕೊಂಡಿದ್ದು, 15 ಕುರಿಗಳು ಸಾವನ್ನಪ್ಪಿರುವುದಲ್ಲದೆ, ಇನ್ನೂ ಹೆಚ್ಚಿನ ಕುರಿಗಳಿಗೆ ರೋಗಬಾಧೆ ವ್ಯಾಪಿಸಿದೆ. ಇವುಗಳನ್ನೇ ನಂಬಿ ಕಾಯಕ ಮಾಡುತ್ತಿದ್ದ ಕುರಿಗಾಹಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಒಂದೂವರೆ ತಿಂಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದ ಕಾಲು ಕೊಳೆತ ರೋಗ ಹಾಗೂ ನೀಲಿ ನಾಲಿಗೆ ರೋಗ ಕ್ರಮೇಣ ಜಿಲ್ಲೆಗೂ ಕಾಲಿಟ್ಟಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಶಿರಾ ಮತ್ತು ಪಾವಗಡ ತಾಲ್ಲೂಕುಗಳಲ್ಲಿ ಈಗಾಗಲೇ ನೂರಾರು ಕುರಿ ಮತ್ತು ಮೇಕೆಗಳು ವಿವಿಧ ಕಾಯಿಲೆಗಳಿಗೆ ಬಲಿಯಾಗಿವೆ. ರೋಗದ ತೀವ್ರತೆ ಅರಿತು ಪಶು ವೈದ್ಯ ಇಲಾಖೆಯು ಎಲ್ಲೆಲ್ಲಿ ರೋಗ ಹರಡುತ್ತಿದೆಯೋ ಅಂತಹ ಕಡೆಗಳಲ್ಲಿ ಲಸಿಕೆ ಹಾಕಲು ಮುಂದಾಗಿದೆ.

ತುಮಕೂರು ಜಿಲ್ಲೆಯಲ್ಲಿ ಹದಿನೇಳುವರೆ ಲಕ್ಷ ಕುರಿ ಮತ್ತು ಮೇಕೆಗಳು ಇರುವ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಇದೆ. ಕುರಿ ಮತ್ತು ಮೇಕೆ ಸಾಕಾಣಿಕೆ ಈಗ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ತೋಟದ ಮನೆಯಲ್ಲಿರುವವರು, ಗ್ರಾಮದೊಳಗೆ ಇರುವ ಇತರೆ ಮೇಲ್ವರ್ಗದ ವರ್ಗಗಳೂ ಸಹ ಕೃಷಿ ಚಟುವಟಿಕೆ ಜೊತೆ ಕುರಿ, ಮೇಕೆಗಳನ್ನು ಸಾಕುತ್ತಿದ್ದಾರೆ. ಆದರೆ ಇವೆಲ್ಲ ಸಣ್ಣ ಪ್ರಮಾಣದಲ್ಲಿವೆ.

ಒಂದೆರಡು ಕುರಿ, ಮೇಕೆಗಳನ್ನು ಕೃಷಿ ಚಟುವಟಿಕೆಯ ಜೊತೆ ಸಾಕುತ್ತಿರುವವರಿಗೆ ಅದೇನು ದೊಡ್ಡ ನಷ್ಟವಲ್ಲ. ಆದರೆ ಇದನ್ನೇ ಒಂದು ಕಾಯಕವನ್ನಾಗಿ ಮಾಡಿಕೊಂಡಿರುವ ವರ್ಗಗಳಿಗೆ ಇದರಿಂದಾಗುವ ಹಾನಿ ಬಹುದೊಡ್ಡದ್ದು. ನೂರಾರು ಕುರಿಗಳನ್ನು ಸಾಕಿಕೊಂಡು ರೊಪ್ಪ ಅಥವಾ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿಕೊಂಡಿರುವವರಿಗೆ ಒಮ್ಮೆಲೆ ಹತ್ತಾರು ಕುರಿಗಳು ರೋಗರುಜಿನಗಳಿಗೆ ಒಳಗಾದರೆ ಅವರ ಕರುಳು ಕಿತ್ತು ಬಂದಂತಾಗುತ್ತದೆ.

ಹಿಂದೆಲ್ಲ ಮಳೆಯಿಲ್ಲದೆ, ಮೇವಿಲ್ಲದೆ ಬಿಸಿಲು ಹೆಚ್ಚಳವಾಗಿ ರೋಗಕ್ಕೆ ಈ ಜಾನುವಾರುಗಳು ಬಲಿಯಾಗುತ್ತಿದ್ದವು. ಈ ವರ್ಷ ವಿಪರೀತ ಮಳೆಯಾಗಿ ಅದೂ ಸಹ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ನಿರಂತರ ಮಳೆ ಬಂದು, ಮಳೆಯಲ್ಲಿ ನೆನೆದಿರುವುದರಿಂದ ಹಾಗೂ ತೇವಾಂಶವಿರುವ ನೆಲದಲ್ಲಿ ಓಡಾಡುತ್ತಿರುವುದರಿಂದ ರೋಗ ಬೇಗನೆ ವ್ಯಾಪಿಸುತ್ತಿದೆ.

ವೇವಾಂಶವಿರುವ ನೆಲದಲ್ಲಿ ವಾಸಿಸುವ ರೋಗಾಣುಗಳು ಕುರಿ ಮತ್ತು ಮೇಕೆಗಳ ಗೊರಸಿನ ನಡುವೆ ಅಥವಾ ಕಾಲಿನಲ್ಲಿ ಇರುವ ಗಾಯಗಳ ಮೂಲಕ ದೇಹ ಪ್ರವೇಶಿಸುತ್ತದೆ. ಕಾಲು ಕೊಳೆತ ರೋಗ ದನಗಳನ್ನೂ ಬಿಡುವುದಿಲ್ಲ. ಸ್ಪೀರೋಪೋರಸ್ ನೆಕ್ರೋಫೋರಸ್ ಎಂಬ ಸೂಕ್ಷ್ಮ ಜೀವಿ ಈ ರೋಗಕ್ಕೆ ಕಾರಣ. ಹೊರ ನೋಟಕ್ಕೆ ಈ ಜೀವಾಣು ಕಂಡುಬರುವುದಿಲ್ಲ. ಆದರೆ ಕಾಲು ಊದಿಕೊಳ್ಳತೊಡಗಿದಾಗ ಹಳದಿ ಬಣ್ಣದ ಕೀವು ಹೊರಬಂದು ಗೊರಸಿನ ಸುತ್ತ ಕೀವು ಸೋರಲಾರಂಭಿಸುತ್ತದೆ.

ಈ ರೋಗ ತೀವ್ರತೆಯಾದಾಗ ದೇಹಕ್ಕೆ ವ್ಯಾಪಿಸಿ ರಾಸುಗಳು ಸಾವನ್ನಪ್ಪುವ ಸಂದರ್ಭಗಳು ಇವೆ. ಆದಕಾರಣ ಕೂಡಲೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎನ್ನುತ್ತಾರೆ ತಜ್ಞರು.
ಇನ್ನು ನೀಲಿ ನಾಲಿಗೆ ರೋಗವೂ ಸಹ ಇದೇ ರೀತಿ ಅಪಾಯ ತಂದೋಡ್ಡುತ್ತಿದೆ. ಕುರಿ, ಮೇಕೆಗಳಿಗೆ ಮೂಗಿನಿಂದ ದ್ರವ ಸುರಿಯಲಾರಂಭಿಸಿ ರಾಸುಗಳು ಕೆಲವೇ ದಿನಗಳಲ್ಲಿ ಮಂಕಾಗುತ್ತವೆ. ನಿತ್ರಾಣಗೊಂಡು ಸತ್ತು ಹೋಗುತ್ತವೆ. ಕೋವಿಡ್ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಇಂತಹ ವಿವಿಧ ರೋಗಗಳಿಗೆ ಲಸಿಕೆಯೇ ಸರಬರಾಜು ಆಗಿರಲಿಲ್ಲ. ಈ ವರ್ಷ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆಯಾದರೂ ನಿರೀಕ್ಷೆಗೆ ತಕ್ಕ ಪೂರೈಕೆಯಾಗಿಲ್ಲ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ವಿವಿಧ ರೋಗಗಳು ಅಂಟುತ್ತಿರುವ ಕಾರಣ ಬೇಡಿಕೆಗೆ ತಕ್ಕಂತೆ ಔಷಧ ಪೂರೈಕೆ ಮಾಡಬೇಕಾದ ಅನಿವಾರ್ಯತೆ ಇದೆ. ದುರಂತವೆಂದರೆ ಜಾನುವಾರುಗಳು ಹೀಗೆ ನೂರಾರು ಸಂಖ್ಯೆಯಲ್ಲಿ ಮರಣ ಹೊಂದುತ್ತಿದ್ದರೂ ರಾಜಕಾರಣಿಗಳಿಗೆ ಆ ಬಗ್ಗೆ ಗಮನ ಇಲ್ಲದಿರುವುದು.

ಸತತ ಮಳೆಯಿಂದಾಗಿ ರಾಗಿ ಹಾನಿಯಾಗಿದೆ. ಶೇಂಗಾ ಕೈ ಹಿಡಿದಿಲ್ಲ. ಒಟ್ಟಾರೆ ಕೃಷಿ ಈ ಬಾರಿಯೂ ರೈತನ ಮುಖವನ್ನು ಅರಳಿಸಿಲ್ಲ. ಇಂತಹ ಸಂಕಷ್ಟದ ನಡುವೆ ಮತ್ತೊಂದು ಬರೆ ಎಂಬಂತೆ ಸಾಕು ಪ್ರಾಣಿಗಳಿಗೆ ವಿವಿಧ ರೋಗಗಳು ವ್ಯಾಪಿಸುತ್ತಿದ್ದು, ಕೂಡಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ರೋಗ ಹತೋಟಿಗೆ ತರುವ ಅಗತ್ಯವಿದೆ. ಬೇಡಿಕೆಗೆ ಅನುಗುಣವಾಗಿ ಸರ್ಕಾರ ಲಸಿಕೆ ಪೂರೈಸಬೇಕಿದೆ.

15 ಸಾವಿರ ಲಸಿಕೆ ನೀಡಲಾಗಿದೆ

ಜಿಲ್ಲೆಯಲ್ಲಿ 17,20,000 ಕುರಿ ಮೇಕೆಗಳಿವೆ. ಶಿರಾ, ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಪಾವಗಡ ತಾಲ್ಲೂಕಿನ ಹಲವೆಡೆ ನೀಲಿ ನಾಲಿಗೆ ರೋಗ, ಕಾಲು ಕೊಳೆತ ರೋಗ ಬಂದಿರುವ ವರದಿಗಳಿವೆ. ಎಲ್ಲೆಲ್ಲಿ ಈ ರೋಗ ಕಾಣಿಸಿಕೊಂಡಿದೆಯೋ ಅಂತಹ ಕಡೆಗಳಲ್ಲಿ ಲಸಿಕೆ ಹಾಕುವ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 15000 ಕುರಿಗಳಿಗೆ ವ್ಯಾಸಿನೇಷನ್ ಮಾಡಲಾಗಿದೆ. ಇನ್ನೂ ಹೆಚ್ಚಿನ ಲಸಿಕೆಯ ಅಗತ್ಯವಿದ್ದು, ಅದನ್ನು ತರಿಸಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಬಂದ ತಕ್ಷಣ ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆಗಳಲ್ಲಿ ಲಸಿಕೆ ಹಾಕಲಾಗುವುದು. ನಿರಂತರ ಮಳೆಯ ಪರಿಣಾಮ ತೇವಾಂಶದ ವಾತಾವರಣ ಇರುವುದರಿಂದ ರೋಗ ಲಕ್ಷಣ ಕಂಡುಬಂದ ಕೂಡಲೇ ಕಾಲುಗಳನ್ನು ತೊಳೆದು ನೋವು ನಿವಾರಕ ಔಷಧ ಹಚ್ಚಬೇಕು. ಕಾಲು ಕೊರೆತ ರೋಗಕ್ಕೆ ಪ್ರತ್ಯೇಕ ಲಸಿಕೆ ಇಲ್ಲ. ಹೀಗಾಗಿ ಕಾಲು ಸ್ವಚ್ಛಗೊಳಿಸಿ ಔಷಧ ಹಚ್ಚುವ ಮೂಲಕವೇ ನಿಯಂತ್ರಣಕ್ಕೆ ತರಬೇಕು. ಈ ಬಗ್ಗೆ ಹೆಚ್ಚು ಎಚ್ಚರ ವಹಿಸುವುದು ಅಗತ್ಯ.
-ಡಾ.ಜಯಣ್ಣ, ಉಪನಿರ್ದೇಶಕರು, ಪಶುವೈದ್ಯಕೀಯ ಇಲಾಖೆ.

ಬಾಯಿ-ಮೂಗು ಸ್ವಚ್ಛಗೊಳಿಸಿ

ಕುರಿ ಮತ್ತು ಮೇಕೆಗಳಿಗೆ ನೀಲಿ ನಾಲಿಗೆ ರೋಗ ವ್ಯಾಪಿಸುವ ಲಕ್ಷಣಗಳು ಗೊತ್ತಾದ ಕೂಡಲೇ ಮೂಗಿಗೆ ಬೆಣ್ಣೆಯಲ್ಲಿ ಅರಿಶಿನ, ಉಪ್ಪು, ಅಡಿಗೆ ಸೋಡ ಮಿಶ್ರಣ ಮಾಡಿ ಹಚ್ಚಬೇಕು. ಸೋಡ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಬಾಯಿ ಮತ್ತು ಮೂಗನ್ನು ಸ್ವಚ್ಛಗೊಳಿಸಿದ ನಂತರ ಈ ಮಿಶ್ರಣವನ್ನು ಲೇಪನ ಮಾಡಬೇಕು. ಹೀಗೆ ಮಾಡಿದರೆ ರಾಸುಗಳು ಗುಣಮುಖವಾಗುತ್ತವೆ. ಇದರ ಜೊತೆಗೆ ಕುರಿ ರೊಪ್ಪಗಳಲ್ಲಿ ಹಾಗೂ ಕೊಟ್ಟಿಗೆಗಳಲ್ಲಿ ಬೆಳಗಿನ ಹೊತ್ತು ಮತ್ತು ಸಂಜೆಯ ವೇಳೆ ಬೇವಿನ ಎಲೆಯ ಹೊಗೆ ಹಾಕಬೇಕು.
-ಡಾ. ಕೆ.ನಾಗಣ್ಣ, ಸಹಾಯಕ ನಿರ್ದೇಶಕರು, ಉಣ್ಣೆ ಮತ್ತು ಕುರಿ ಅಭಿವೃದ್ಧಿ ನಿಗಮ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap