ಅಭಿವೃದ್ಧಿಗೆ ಶ್ರಮಿಸಲು ಉಚಿತ ಬೈಕ್ ಕೊಡುಗೆಯಾಗಿ ನೀಡಿದ 29ನೇ ವಾರ್ಡನ ಮತದಾರರು

ಚಳ್ಳಕೆರೆ

             ಸಾಮಾನ್ಯವಾಗಿ ನಗರಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಹಣಕೊಟ್ಟು ಮತದಾರರಿಂದ ಮತ ಪಡೆದು ಆಯ್ಕೆಯಾಗುವವರ ಸಂಖ್ಯೆ ಹೆಚ್ಚಿದೆ. ಆದರೆ, ನಗರದ ನಗರಸಭಾ ಚುನಾವಣೆಯಲ್ಲಿ ಸಾರ್ವಜನಿಕರೇ ಹಣವನ್ನು ಸಂಗ್ರಹಿಸಿ ತಮ್ಮ ವಾರ್ಡ್‍ನ ಸಮಸ್ಯೆಗೆ ಸ್ಪಂದಿಸ ಬಲ್ಲ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರಲ್ಲದೆ ಅವರು ವಾರ್ಡ್‍ನಲ್ಲಿ ಓಡಾಡಿ ಜನರ ಕಷ್ಟಗಳಿಗೆ ಸ್ಪಂದಿಸಲು ಉಚಿತವಾಗಿ ಹೊಂಡಾ ಕಂಪನಿಯ ಬೈಕ್‍ನ್ನು ಕೊಡುಗೆಯಾಗಿ ನೀಡಿದ್ಧಾರೆ.

             ನಗರದ 29ನೇ ವಾರ್ಡ್‍ನ ಜೆಡಿಎಸ್ ಸದಸ್ಯರಾಗಿ ಆಯ್ಕೆಯಾದ ಎಚ್.ಪ್ರಶಾಂತ್‍ಕುಮಾರ್(ಪಚ್ಚಿ) ಈ ಉಡುಗೊರೆಯನ್ನು ತನ್ನ ಕ್ಷೇತ್ರದ ಮತದಾರರಿಂದಲೇ ಶುಕ್ರವಾರ ಪಡೆದಿದ್ಧಾರೆ. ಚುನಾವಣೆಯಲ್ಲಿ ಹಣವಿದ್ದ ಅಭ್ಯರ್ಥಿಗಳನ್ನು ಸೋಲಿಸಿ ಉತ್ತಮ ಗುಣವುಳ್ಳ ಎಚ್.ಪ್ರಶಾಂತ್‍ಕುಮಾರರನ್ನು ಅಲ್ಲಿನ ಜನತೆ ಆಯ್ಕೆ ಮಾಡಿದ್ದು, ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ವಾರ್ಡ್‍ನ ಹಲವಾರು ಜನರು ಹಣ ಸಂಗ್ರಹಿಸಿ ತಮ್ಮ ನೆಚ್ಚಿನ ಸದಸ್ಯನಿಗೆ ಈ ಉಡುಗೊರೆಯನ್ನು ನೀಡಿದ್ಧಾರೆ. ಸಾಮಾನ್ಯವಾಗಿ ಯಾವುದೇ ನಗರಸಭಾ ಚುನಾವಣೆಯಲ್ಲಿ ಜಯಗಳಿಸಿ ಸದಸ್ಯರಿಗೆ ಈ ರೀತಿಯ ಉಡುಗೊರೆ ಸಿಗುವುದು ವಿರಳ.

             ಹೊಂಡಾ ಬೈಕನ್ನು ಸ್ವೀಕರಿಸಿ ಮಾತನಾಡಿದ ನೂತನ ಸದಸ್ಯ ಎಚ್.ಪ್ರಶಾಂತ್‍ಕುಮಾರ್(ಪಚ್ಚಿ), ಈ ಭಾಗದ ಜನರ ವಿಶ್ವಾಸ ಬೆಲೆಕಟ್ಟಲಾಗದು. ಚುನಾವಣೆಯ ಸಂದರ್ಭದಲ್ಲಿ ನನಗೆ ಹಣವನ್ನು ಸಂಗ್ರಹಿಸಿಕೊಟ್ಟ ಜನರು ಗೆದ್ದ ಮೇಲು ಸಹ ನನ್ನ ಮೇಲೆ ಅಪಾರವಾದ ವಿಶ್ವಾಸವಿಟ್ಟುಕೊಂಡು ಈ ಬೈಕ್ ನೀಡಿದ್ಧಾರೆ. ನಾನು ಸಹ ಈ ಭಾಗದ ಜನರ ವಿಶ್ವಾಸಕ್ಕೆ ಚಿರಋಣಿಯಾಗಿದ್ದು ವಾರ್ಡ್‍ನ ಅಭಿವೃದ್ಧಿಗೆ ಇನ್ನೂ ಹೆಚ್ಚು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ. ನಗರಸಭಾ ಅನುದಾನದಲ್ಲಿ ವಾರ್ಡ್‍ಗಳಿಗೆ ಬರುವ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ತಿಳಿಸಿದರು. ನನ್ನ ವಾರ್ಡ್‍ನ ಅಭಿವೃದ್ಧಿಯೇ ನನ್ನ ಪರಮ ಗುರಿ.
ಸಾಮಾನ್ಯ ನಿವೃತ್ತ ಶಿಕ್ಷಕನ ಮಗನಾದ ನಾನು ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ್ದು, ನಗರದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿದ್ದು, ಈ ವಾರ್ಡ್‍ನ ಜನರ ಒತ್ತಾಯರ ಮೇರೆಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದೆ.

           ಎಲ್ಲರ ಸಹಕಾರದಿಂದ ಗೆಲುವು ಸಹ ಸಾಧಿಸಿರುವೆ. ವಾರ್ಡ್‍ನ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವೆ. ನನ್ನ ಕಾರ್ಯಕ್ಕೆ ಮತ್ತಷ್ಟು ಹೆಚ್ಚು ವೇಗವನ್ನು ತುಂಬಲು ತಾವು ಬೈಕ್ ನೀಡಿದ್ದು, ಅದನ್ನು ಸಂಪೂರ್ಣವಾಗಿ ವಾರ್ಡ್‍ಗಳ ಸಮಸ್ಯೆಗಳ ನಿವಾರಣೆಗೆ ಉಪಯೋಗಿಸುವೆ ಎಂದರು.ಈ ಸಂದರ್ಭದಲ್ಲಿ ನಾಗರೆಡ್ಡಿ, ಸಾಗರ್, ನೂರುಲ್ಲಾ, ಗೋಪಿನಾಥ ಮುಂತಾದವರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link