ತುರುವೇಕೆರೆ
ರೈತ ತಾನು ಬೆಳೆದ ಬೆಳೆಗಳಿಗೆ ತಾನೇ ಬೆಲೆ ನಿಗದಿ ಪಡಿಸುವಂತಾದರೆ ಮಾತ್ರ ರೈತ ಅಭಿವೃದ್ದಿ ಹೊಂದಲಿದ್ದಾನೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮುನಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಹಾಗೂ ಅಂಗಡಿ ಮಳಿಗೆಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಳ್ಳಿ ಗಾಡಿನ ರೈತರ ಆರ್ಥಿಕ ಸ್ಥಿತಿ ಉತ್ತಮವಾಗಿ ಸ್ವಾವಲಂಬಿಯಾಗಿ ಬದುಕುವಂತಾದರೆ ಮಾತ್ರ ಭಾರತ ದೇಶ ಮುಂದುವರೆದಿದೆ ಎನ್ನಬಹುದಾಗಿದೆ. ಇನ್ನೂ ರೈತರು ಸಂಕಷ್ಟದಲ್ಲಿದ್ದು, ರೈತರು ಸ್ವಾಭಿಮಾನದಿಂದ ಬಾಳುವಂತಾಗುವವರೆಗೂ ಪ್ರೋತ್ಸಾಹ, ನೆರವು ನೀಡಬೇಕಿದೆ. ನಮ್ಮ ಡಿಸಿಸಿ ಬ್ಯಾಂಕ್ ಸಣ್ಣ ರೈತರಿಂದ ಹಿಡಿದು ಎಲ್ಲ ರೈತರಿಗೂ ಸಾಲ ನೀಡುವಂತ ಸರಳೀಕರಣ ವ್ಯವಸ್ಥೆಯನ್ನು ಮಾಡಿದ ಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕ್ಯಾಶ್ – ಕ್ಯಾಸ್ಟ್ ಇಲ್ಲದೆ ಅಧಿಕಾರ ಕಷ್ಟ : ಹಣ, ಜಾತಿ ಇಲ್ಲದೆ ಅಧಿಕಾರ ಬರುವುದು ಇಂದಿನ ದಿನಗಳಲ್ಲಿ ಬಹಳ ಕಷ್ಟ. ನಾನು ಸಣ್ಣ ಹಳ್ಳಿಯ ಸಹಕಾರ ಸಂಘ ಮೂಲಕ ರಾಜಕೀಯಕ್ಕೆ ಬಂದು ಕ್ಯಾಶ್ – ಕ್ಯಾಸ್ಟ್ ಇಲ್ಲದೆ ಶಾಸಕ, ಎಂ.ಎಲ್.ಸಿ, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿದ್ದೇನೆ. ಸೋಲು ಗೆಲುವು ಮಾಮೂಲು. ರಾಜಕೀಯಕ್ಕೆ ಹೆಚ್ಚು ಒತ್ತು ನೀಡದೆ ಸಹಕಾರ ಆಂದೋಲನದ ಮೂಲಕ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೇನೆ ಎಂದರು.
ಕನ್ನಡ ಭವನಕ್ಕೆ ಹಣ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾದ ಮೇಲೆ ಕನ್ನಡ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ.ಗಳನ್ನು ಅಪೆಕ್ಸ್ ಬ್ಯಾಂಕ್‍ನಿಂದ ನೀಡಲಾಗಿದೆ. ತುರುವೇಕೆರೆ ಕನ್ನಡ ಭವನಕ್ಕೆ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ದೇವರಾಜು, ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್ ಅಧ್ಯಕ್ಷ ಟಿ.ಸಿ.ರಾಜು ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಸದಸ್ಯ ನಂಜೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಕೃಷ್ಣಮೂರ್ತಿ, ಸಹಕಾರ ಸಂಘಗಳ ಉಪ ನಿಬಂಧಕ ರಾಜು, ಸಹಕಾರಿ ಅಭಿವೃದ್ದಿ ಅಧಿಕಾರಿ ಕಾವಲೇಗೌಡ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಹೆಚ್.ಸಿ. ಗೌಡ, ಆಡಳಿತ ಮಂಡಳಿ ಸದಸ್ಯರಾದ ಸರಸ್ವತಮ್ಮ, ರತ್ನಮ್ಮ, ವೀರೇಶ್, ಗಂಗಾಧರ್, ಲಿಂಗರಾಜು, ಶಿವರಾಜು, ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಡ್ಡೆಗೌಡ ಸೇರಿದಂತೆ ಸದಸ್ಯರುಗಳು ಇದ್ದರು








