ಬೆಂಗಳೂರು:
ಬೆಂಗಳೂರಿನಲ್ಲಿ ನಡೆದ ರೌಡಿಶೀಟರ್, ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಶಾಸಕ ಬೈರತಿ ಬಸವರಾಜ್ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ. ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬೈರತಿ ಬಸವರಾಜ್ ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.
ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ನೋಟಿಸ್‌ನಂತೆ ಇಂದು ಬೆಳಗ್ಗೆ 11:30ಕ್ಕೆ ವಿಚಾರಣೆಗೆ ಹಾಜರಾಗಲಿ. ಪೊಲೀಸರು ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಬಿಎನ್ಎಸ್ 35(3, 4, 5) ಅಡಿಯಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಕೈಗೊಳ್ಳಬೇಕೆಂದು ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರ ಪೀಠದಿಂದ ಆದೇಶಿಸಲಾಗಿದೆ.
ಬೆಂಗಳೂರಿನ ಹಲಸೂರು ಬಳಿಯಲ್ಲಿ ರೌಡಿ ಶೀಟರ್ ಬಿಕ್ಲು ಶಿವ ಆಲಿಯಾಸ್ ಶಿವಕುಮಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಶಿವನ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿರುವ ಜಗ್ಗನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ತಮಿಳುನಾಡಿನಲ್ಲಿ ಅರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಅಲ್ಲಿ ಬೀಡು ಬಿಟ್ಟಿದ್ದಾರೆ. ಈ ನಡುವೆ ಕಸ್ಟಡಿಗೆ ಪಡೆದಿರುವ ಬಂಧಿತ ಐದು ಮಂದಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಈ ಸಂಬಂಧ ಬಿಜೆಪಿ ಶಾಸಕ ಬೈರತಿ ಬಸವರಾಜ್ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ನೋಟೀಸ್ ನೀಡಿದ ಬೆನ್ನಲ್ಲೇ ಶಾಸಕ ಬೈರತಿ ಬಸವರಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ಎಫ್‌ಐಆರ್‌ನಲ್ಲಿನ ಹೆಸರು ತೆಗೆಯಲು ಕೋರಿ ಅರ್ಜಿ ಸಲ್ಲಿಸಲಾಗಿದೆ. ಶಾಸಕ ಬೈರತಿ ಬಸವರಾಜು ಹೆಸರನ್ನೇ ದೂರುದಾರರು ಹೇಳಿಲ್ಲ. ಹೀಗೆಂದು ಕೊಲೆಯಾದ ವ್ಯಕ್ತಿಯ ತಾಯಿ ಸ್ಪಷ್ಟಪಡಿಸಿದ್ದಾರೆ. ಆದರೂ ಎಫ್‌ಐಆರ್‌ನಲ್ಲಿ ಬೈರತಿ ಬಸವರಾಜು ಹೆಸರನ್ನು ಸೇರಿಸಲಾಗಿದೆ ಎಂದು ಬೈರತಿ ಕಡೆಯ ವಕೀಲರು ವಾದ ಮಾಡಿದ್ದರು.
