ಶಿಥಿಲಾವಸ್ಥೆ ತಲುಪಿದ ತಾಲೂಕಿನ 297 ಸರಕಾರಿ ಶಾಲಾಕೊಠಡಿಗಳು

ಶಾಲೆಗೆ ಮಕ್ಕಳನ್ನ ಕಳುಹಿಸಲು ಪಾಲಕರ ಹಿಂದೇಟು

ಖಾನಾಪುರ:

    ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಶಾಲೆಗಳನ್ನು ಉಳಿಸಿ ಎಂದೆಲ್ಲ ಹೇಳುತ್ತಾರೆ. ಆದರೆ, ಶಾಲೆಗಳನ್ನೇ ಉದ್ಧಾರ ಮಾಡದೇ ಮಕ್ಕಳನ್ನು ಕಳುಹಿಸಿ ಎಂದರೆ ಪಾಲಕರಾದರೂ ಹೇಗೆ ಕಳಿಸ್ಯಾರು…

    ದಿ.29ರಿಂದ ಶಾಲೆಗಳು ಪ್ರಾರಂಭವಾಗುತ್ತವೆ. ಆದರೆ, ಇದಕ್ಕೂ ಪೂರ್ವದಲ್ಲಿಯೇ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಗೆ ಕಾಯಕಲ್ಪ ಕಲ್ಪಿಸಬೇಕಾಗಿದ್ದ ಶಿಕ್ಷಣ ಇಲಾಖೆ ಕೈಚೆಲ್ಲಿ ಕುಳಿತಿರುವುದು ಶಿಕ್ಷಣ ಪ್ರೇಮಿಗಳಿಗೆ ಮಾತ್ರವಲ್ಲದೇ ಕನ್ನಡ ಶಾಲೆ ಉಳಿವಿಗಾಗಿ ಧ್ವನಿ ಎತ್ತುವ ಪ್ರತಿಯೊಬ್ಬರಿಗೆ ಬೇಸರ ಮೂಡಿಸಿದೆ.ಖಾನಾಪುರ ತಾಲೂಕಿನ 1171 ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕೊಠಡಿಗಳ ಪೈಕಿ ಬರೋಬ್ಬರಿ 297 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.

   ಪ್ರತಿ ವರ್ಷ ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಈ ಮಾತುಗಳು ಸರ್ವೇ ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ, ಅವುಗಳಿಗೆ ಶಾಶ್ವತ ಕಾಯಕಲ್ಪ ಕಲ್ಪಿಸಬೇಕು ಎಂಬ ಕಿಂಚಿತ್ತು ಇಚ್ಛಾಶಕ್ತಿ ಮಾತ್ರ ಸ್ಥಳೀಯ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ನೋವಿನ ಸಂಗತಿ ಎನ್ನುತ್ತದೆ ಪೋಷಕ ವಲಯ.

ಮುರುಕು ಜಂತಿ, ಹುಳುಕು ತೊಲೆ, ಬಿರುಕು ಬಿಟ್ಟ ಗೋಡೆಗಳು

    ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿ ಸಾಕಷ್ಟು ಶಾಲೆಗಳು ಸುಮಾರು 30 ರಿಂದ 50 ವರ್ಷಗಳಷ್ಟು ಹಳೆಯ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲ ಶಾಲೆಗಳ ಗೋಡೆಗಳು ಬಿರುಕು ಬಿಟ್ಟಿರುವುದು ಒಂದೆಡೆಯಾದರೆ, ಮತ್ತೆ ಕೆಲ ಗ್ರಾಮಗಳಲ್ಲಿ ಮೇಲ್ಛಾವಣಿಗೆ ಹಾಕಿರುವ ತೊಲೆ, ಜಂತಿಗಳು ಮುರಿದು ಹೋಗಿವೆ. ಹೆಂಚುಗಳು ಇಲ್ಲವಾಗಿದ್ದು, ಬಿಸಿಲಿನಲ್ಲಿ ಒಣಗುವ ಮಳೆಯಲ್ಲಿ ನೆನೆಯುತ್ತಾ ಪಾಠ ಕೇಳುವ ಮಕ್ಕಳ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಮಳೆಯಲ್ಲಿ ಸೋರುವ ಕೊಠಡಿಗಳಲ್ಲಿ ಶಾಲಾ ದಾಖಲಾತಿಗಳನ್ನು ಸಂರಕ್ಷಿಸುವುದೇ ಶಿಕ್ಷಕರಿಗೆ ಬಹುದೊಡ್ಡ ಸವಾಲಾಗಿದೆ.

ನೆಪಮಾತ್ರಕ್ಕೆ ರಿಪೇರಿ:

    ಅಸಮಾಧಾನ ಚುನಾವಣೆ ಸಮಯದಲ್ಲಿ ಶಾಲಾ ಕೊಠಡಿಗಳು ದುರಸ್ತಿಗೊಂಡಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಮತದಾನ ನಡೆಯುವ ಒಂದೆರಡು ಕೊಠಡಿಗಳ ಹೆಂಚುಗಳನ್ನು ಸರಿ ಮಾಡಿ ಸಣ್ಣ ಪುಟ್ಟ ರಿಪೇರಿ ಮಾಡಿಸಿ ಚುನಾವಣೆ ಮುಗಿಸಿಕೊಳ್ಳಲಾಗಿದೆ. ಈ ರಿಪೇರಿ ಶಾಲಾ ಕೊಠಡಿಗಳ ಶಾಶ್ವತ ಸಮಸ್ಯೆಗೆ ಪರಿಹಾರ ಕಲ್ಪಿಸುವಂತದಲ್ಲ ಎಂಬುದು ಪೋಷಕರ ವಿವರಣೆಯಾಗಿದೆ. ನೆಪಮಾತ್ರದ ದುರಸ್ತಿಯನ್ನು ತೋರಿಸುತ್ತಿರುವ ಶಿಕ್ಷಣ ಇಲಾಖೆಯ ಕ್ರಮದ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಖಾನಾಪುರ ತಾಲೂಕು ಹಿಂದುಳಿದ ತಾಲ್ಲೂಕು ಇಲ್ಲಿನ ಪಾಲಕರಿಗೆ ತಮ್ಮ ಮಕ್ಕಳನ್ನ ಡೊನೆಶನ್ ಕೊಟ್ಟು ಖಾಸಗಿ ಶಾಲೆಗಳಿಗೆ ಕಳುಹಿಸುವಷ್ಟು ಆರ್ಥಿಕ ಪ್ರಭಲರಾಗಿಲ್ಲ ಆದ್ದರಿಂದ ಇಲ್ಲಿನ ಪಾಲಕರು ಸರಕಾರಿ ಶಾಲೆಗಳ ಮೇಲೆ ಅವಲಂಬಿತರಾಗಿದ್ದು ಆದರೆ ಇಲ್ಲಿನ ಸರಕಾರಿ ಶಾಲೆಗಳ ಪರಿಸ್ಥಿತಿ ನೋಡಿ ತಾಲೂಕಿನ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇನ್ನಾದರೂ ಅಧಿಕಾರಿಗಳು,ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು – ವಿಠ್ಠಲ ಹಿಂಡಲಕರ,ಪ್ರಧಾನ ಕಾರ್ಯದರ್ಶಿ ಕರವೇ ಖಾನಾಪುರ   ಈಗಾಗಲೇ ಮೇಲಾಧಿಕಾರಿಗಳಿಗೆ ಶಾಲಾ ಕೊಠಡಿಗಳ ಕ್ರಿಯಾಯೋಜನೆ ಸಲ್ಲಿಸಲಾಗಿದೆ ಅದರ ಪೈಕಿ ದುರಸ್ತಿಗೆಂದು 54.24 ಲಕ್ಷ ಮಂಜೂರಾಗಿದ್ದು ಇದರಲ್ಲಿ ಒಟ್ಟು33 ಕೊಠಡಿಗಳನ್ನ ದುರಸ್ತಿ ಮಾಡಲಾಗುತ್ತಿದೆ.-ರಾಜಶ್ರೀ ಕುಡಚಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾನಾಪುರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap