ಲಕ್ನೋ:
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ಉತ್ತರಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಪ್ರತಿಪಕ್ಷದಿಂದ ಈವರೆಗೂ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ.
ಮೇ 6 ಕ್ಕೆ ಲಕ್ನೋದಲ್ಲಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 18 ಕೊನೇ ದಿನ. ಆದರೂ ಇನ್ನೂ ಅಭ್ಯರ್ಥಿಗಳನ್ನೇ ಘೋಷಿಸಿಲ್ಲ.
ಲಕ್ನೋ ಬಿಜೆಪಿಯ ಭದ್ರಕೋಟೆ. ಹಾಗೆ ಮಾಡಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. 1991ರಿಂದ 2004ರವರೆಗೂ ಲಕ್ನೋದಿಂದ ಸ್ಪರ್ಧಿಸಿ ಸತತವಾಗಿ ಜಯ ಸಾಧಿಸಿ 2009ರವರೆಗೂ ಸಂಸದರಾಗಿದ್ದರು. 2014ರ ಚುನಾವಣೆಯಲ್ಲಿ ಲಕ್ನೋದಿಂದ ರಾಜ್ ನಾಥ್ ಸಿಂಗ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ರಾಜನಾಥ್ ಸಿಂಗ್ ಅವರು ಇಂದು ಭರ್ಜರಿ ರೋಡ್ ಶೋ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರವೂ ಅವರಿಗೆ ತಮ್ಮ ಪ್ರತಿಸ್ಪರ್ಧಿ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ! ಯಾಕಂದ್ರೆ ಕಾಂಗ್ರೆಸ್ ಆಗಲೀ, ಅಥವಾ ಬೇರೆ ಪಕ್ಷಗಳಾಗಲೀ ಅವರ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ! ನಾಮಪತ್ರ ಸಲ್ಲಿಕೆಗೆ ಎರಡು ದಿನ ಮಾತ್ರ ಬಾಕಿ ಉಳಿದಿದ್ದು ಸಿಂಗ್ ಗೆ ಪ್ರತಿಸ್ಫರ್ಧಿಯಾಗಿ ಯಾರು ಕಣಕ್ಕಿಳಿಯುವರೋ ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ