ವಕೀಲರು ಕಲಿಕಾ ಪ್ರವೃತ್ತಿ ಹೊಂದಿರಬೇಕು: ಬಾದಾಮಿಕರ್

ಚಿಕ್ಕನಾಯಕನಹಳ್ಳಿ

                     ವಕೀಲರಾಗಲಿ, ನ್ಯಾಯಾಧೀಶರಾಗಲಿ ಕಲಿಕಾ ಪ್ರವೃತ್ತಿಯನ್ನು ಹೊಂದಿರಬೇಕು, ಕಾನೂನಿನಲ್ಲಿ ಬದಲಾವಣೆಗಳು ಪ್ರಕೃತಿಯ ನಿಯಮದಂತೆ ಬದಲಾಗುತ್ತಾ ಹೋಗುತ್ತಿವೆ. ಹೊಸ ಹೊಸ ಕಾನೂನು ಬರುತ್ತಿವೆ. ಅವುಗಳನ್ನು ತಿಳಿಯಲು ಹಿರಿಯರ ಮಾರ್ಗದರ್ಶನ ಅತ್ಯವಶ್ಯಕ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ಹೇಳಿದರು.

                      ಪಟ್ಟಣದಲ್ಲಿರುವ ನ್ಯಾಯಾಲಯದ ಆವರಣದಲ್ಲಿ ವಕೀಲರ ಭವನದ ಶಂಕುಸ್ಥಾಪನೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, 44 ವರ್ಷಗಳ ಬಹುದಿನದ ಬೇಡಿಕೆಯಾದ ವಕೀಲರ ಭವನ ನಿರ್ಮಾಣ ಕಾರ್ಯಕ್ಕೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. ಇದು ನಿಮ್ಮ ಸ್ವಂತ ಕಟ್ಟಡವಾಗಲಿದೆ. ಸರ್ವೋಚ್ಚ ನ್ಯಾಯಾಲಯ ನಿರ್ದೇಶನದ ಮೇರೆಗೆ ಮೂಲಭೂತ ಸೌಲಭ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿರ್ಮಿಸಿ ಕೊಡಲಾಗುತ್ತಿದೆ. ಅದಕ್ಕಾಗಿ ಕಟ್ಟಡಕ್ಕೆ ಉತ್ತಮವಾದ ಗುಣಮಟ್ಟದ ರೂಪ ಕೊಡಬೇಕಾದ ಜವಾಬ್ದಾರಿ ಇಲ್ಲಿನ ವಕೀಲರ ಮೇಲಿದೆ ಎಂದರು.

                       ಇಲ್ಲಿನ ನ್ಯಾಯಾಲಯದಲ್ಲಿ ಹಿರಿಯ ವಕೀಲರೆ ಹೆಚ್ಚಿದ್ದೀರಿ. ಸ್ಥಳೀಯವಾಗಿ 80ಕ್ಕೂ ಹೆಚ್ಚು ವಕೀಲರಿದ್ದು ಕೇವಲ 40 ಮಂದಿ ಮಾತ್ರ ವೃತ್ತಿ ಮಾಡಿಕೊಂಡಿದ್ದಾರೆ. ವಕೀಲರು ಗೊತ್ತಿಲ್ಲದ ವಿಷಯದ ಬಗ್ಗೆ ತಿಳಿದಿರುವಂತೆ ಯಾರೂ ವರ್ತಿಸಬಾರದು. ಹಿರಿಯರ ಮಾರ್ಗದರ್ಶನದೊಂದಿಗೆ ವಿಚಾರ ಅರಿಯಿರಿ ಎಂದ ಅವರು, ಇಲ್ಲಿನ ಗ್ರಂಥಾಲಯವನ್ನು ಸರಿಯಾದ ರೀತಿಯಲ್ಲಿ ಬಳಸಿ, ನ್ಯಾಯಾಧೀಶರ ಪರೀಕ್ಷೆಯಲ್ಲಿ ಸ್ಥಳೀಯ ವಕೀಲರು ಹೆಚ್ಚು ಸಂಖ್ಯೆಯಲ್ಲಿ ಬರುವಂತೆ ಆಶಿಸುತ್ತೇನೆ ಎಂದರು.

                        ವಕೀಲರ ಸಂಘದ ಅಧ್ಯಕ್ಷ ಎಂ.ಮಹಾಲಿಂಗಪ್ಪ ಮಾತನಾಡಿ, ವಕೀಲರ ಭವನಕ್ಕೆ ಅನುದಾನ ನೀಡಿದ ಸಚಿವರನ್ನು ಪ್ರಶಂಸಿಸಿದರು. ಕಟ್ಟಡಕ್ಕೆ ಬೇಕಾದ ಇನ್ನೂ ಹೆಚ್ಚಿನ ಅನುದಾನವನ್ನು ಸ್ಥಳೀಯ ಪ್ರತಿನಿಧಿಗಳಿಂದ ಪಡೆಯಲಾಗುವುದು ಎಂದರು.
ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್‍ಕುಮಾರ್.ಡಿ.ವಡಿಗೇರಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರಮೀಳಾ, ಅಪರ ಸಿವಿಲ್ ನ್ಯಾಯಾಧೀಶ ಎನ್.ಕೃಷ್ಣಮೂರ್ತಿ, ವಕೀಲ ಸಂಘದ ಕಾರ್ಯದರ್ಶಿ ಎಸ್.ಹೆಚ್.ಚಂದ್ರಶೇಖರಯ್ಯ, ಮಹಲಿಂಗಯ್ಯ, ಎಂ.ಬಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link