ದಾವಣಗೆರೆ:
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀವಾಲ್ಮೀಕಿ ಗುರುಪೀಠದಲ್ಲಿ ಫೆ.8 ಹಾಗೂ 9ರಂದು ಮಹರ್ಷಿ ಶ್ರೀವಾಲ್ಮೀಕಿ ಜಾತ್ರೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ತಾಲೂಕುವಾರು ಪ್ರವಾಸ ಕೈಗೊಂಡು ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಹೆಚ್.ಓಬಳಪ್ಪ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಹರ್ಷಿ ವಾಲ್ಮೀಕಿ ಜಾತ್ರೋತ್ಸವದ ಪ್ರಯುಕ್ತ ತಾಲೂಕುವಾರು ಪ್ರವಾಸ ಕೈಗೊಂಡು, ಜಾತ್ರೆಗಾಗಿ ದೇಣಿಗೆ ಸಂಗ್ರಹಿಸುವುದರ ಜೊತೆಗೆ ಸಮಾಜದ ಸಂಘಟನೆ ಮಾಡಲಾಗುತ್ತಿದೆ ಎಂದರು.
ಶ್ರೀವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿಯವರು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಮೂಲಕ ಜಾತ್ರೋತ್ಸವದ ಬಗ್ಗೆ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಾಜ್ಯದಲ್ಲಿ ನಾಯಕ ವಾಲ್ಮೀಕಿ ಸಮುದಾಯವು ಸುಮಾರು 60ರಿಂದ 70 ಲಕ್ಷ ಜನಸಂಖ್ಯೆ ಹೊಂದಿದ್ದು, ಜಾತ್ರೆಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಜಾತ್ರೆಯಲ್ಲಿ ಯಾವುದೇ ರೀತಿಯ ರಥೋತ್ಸವ ನಡೆಯುವುದಿಲ್ಲ. ತರಳುಬಾಳು ಹುಣ್ಣಿಮೆ ರೀತಿಯಲ್ಲಿ ವಿಚಾರ ಮಂಥನ ನಡೆಯಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸಮಾಜದ ಸಂಸದರು, ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ಕೇಂದ್ರದಿಂದ ಹಾಗೂ ರಾಜ್ಯ ಸರ್ಕಾರದಿಂದ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಗೌರವ ಅಧ್ಯಕ್ಷ ಎ.ಮುರುಗೇಂದ್ರಪ್ಪ ದೊಡ್ಡಮನೆ, ಅಧ್ಯಕ್ಷ ಎಂ.ಬಿ.ಹಾಲಪ್ಪ, ಸತೀಶ್, ತಿಮ್ಮಣ್ಣ, ಆಂಜಿನಪ್ಪ, ಹನುಮಂತಪ್ಪ, ನಾಗಣ್ಣ, ಈರಪ್ಪ, ಶಿವಮೂರ್ತಪ್ಪ ಮತ್ತಿತರರು ಹಾಜರಿದ್ದರು.