ಹರಪನಹಳ್ಳಿ,
ಕರ್ನಾಟಕದಲ್ಲಿನ ಇರುವ ಮೀಸಲು ಪೊಲೀಸ್ ಪಡೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ ಆರ್ ಪಿ ಅಪರ ಪೊಲೀಸ್ ಮಹಾ ನಿರ್ದಶಕ ಬಾಸ್ಕರರಾವ್ ತಿಳಿಸಿದ್ದಾರೆ.
ಅವರು ತಾಲೂಕಿನ ಅನಂತನಹಳ್ಳಿ ಬಳಿ ಇರುವ ಭಾರತೀಯ ಮೀಸಲು ಪೊಲೀಸ್ ಪಡೆಯ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸಿದ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಮುನಿರಾಬಾದ, ವಿಜಯಪುರದಲ್ಲಿ ಈಗಾಗಲೇ ಭಾರತೀಯಮೀಸಲು ಪೊಲೀಸ್ ಪಡೆ ಇದ್ದು, ಹರಪನಹಳ್ಳಿಯಲ್ಲಿ ಆಗುತ್ತಿರುವುದು ಮೂರನೇ ಬಾರತೀಯ ಮೀಸಲು ಪೊಲೀಸ್ ಪಡೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕರ್ನಾಟಕ ಪೊಲೀಸ್ ಮೀಸಲು ಪಡೆಗಳು 12 ಇದ್ದು, ಮೂರು ಭಾರತೀಯ ಪೊಲೀಸ್ ಮೀಸಲು ಪಡೆ ಸೇರಿದಂತೆ ಎಲ್ಲಾ ಮೀಸಲು ಪಡೆಗಳ ಕುಂದು ಕೊರತೆ ನಿವಾರಿಸಲಾಗುವುದು ಎಂದು ಹೇಳಿದರು.
ಈ ವರ್ಷ ಕೆಎಸ್ ಆರ್ ಪಿ ಯಿಂದ ಮೀಸಲು ಪೊಲೀಸ್ ಪಡೆಗಳ ಸ್ಥಳದಲ್ಲಿ 1.50 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ, ಕೆಎಸ್ ಆರ್ ಪಿ ತನ್ನ ಕರ್ತವ್ಯದ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡಲಿದೆ ಎಂದು ತಿಳಿಸಿದರು.
ಹರಪನಹಳ್ಳಿ ಬಳಿ ಭಾರತೀಯ ರಿಸರ್ವ ಪೊಲೀಸ್ ಬೆಟಾಲಿಯನ್ ಸ್ಥಾಪನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ ನಂತರ 151 ಎಕರೆ ಜಾಗವನ್ನು ಕಾಯ್ದಿರಿಸಿ ತಂತಿ ಬೇಲಿ ಹಾಕಲಾಗಿದೆ, ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ಥಾವನೆ ಹೋಗಿದ್ದು, ಅಲ್ಲಿಂದ ಅನುಮೋದನೆ ದೊರತೆ ಕೂಡಲೇ ಉಳಿದ ಕೆಲಸ ಕಾರ್ಯ ಕೈಗೊಳ್ಳಲಾಗುವುದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಎಲ್ಲಾ ಸಿದ್ದತೆ ಮಾಡಿದೆ ಎಂದು ಹೇಳಿದರು.
ಈ ಬೆಟಾಲಿಯನ್ ಸ್ಥಳದಲ್ಲಿ ತೋಟಗಾರಿಕಾ ಗಿಡಗಳನ್ನು ನೆಡಲು ಮುನಿರಾಬಾದ್ ತೋಟಗಾರಿಕಾ ವಿವಿ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ, ಅವರು ಇಲ್ಲಿಗೆ ಬಂದು ಗಿಡಗಳನ್ನು ನೆಡುವರು ಎಂದು ಮಾಹಿತಿ ನೀಡಿದರು. ಇಲ್ಲಿ ಸ್ಥಾಪನೆಯಾಗುವ ಭಾರತೀಯ ಮೀಸಲು ಪೊಲೀಸ್ ಪಡೆಯಲ್ಲಿ 1033 ಪೊಲೀಸರಿಗೆ ತರಬೇತಿ ಯನ್ನು 9 ತಿಂಗಳು ನೀಡಲಾಗುವುದು, ಎಂದರು.ಇಲ್ಲಿ ಕಟ್ಟಡ ನಿರ್ಮಾಣ ವಾಗುವವರೆಗೂ ಮುನಿರಾಬಾದ್ ನ ಮೀಸಲು ಪೊಲೀಸ್ ಪಡೆಯಿಂದ 15 ಜನ ಸಿಬ್ಬಂದಿ ಕಾವಲು ಇರುವರು, ಅವರು ಪ್ರತಿ 15 ದಿನಕ್ಕೊಮ್ಮೆ ಬದಲಾವಣೆಯಾಗುವರು ಎಂದು ಅವರು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್ , ಕೆಎಸ್ ಆರ್ ಪಿ ಮುನಿರಾಬಾದ್ ಕಮಾಂಡೆಂಟ್ ಡಾ.ರಾಮಕೃಷ್ಣ ಮುದ್ದೆಪಾಲ್ , ಸಹಾಯಕ ಕಮಾಂಡೆಂಟ್ ಪಿ.ಸಿ.ಪಾಟೀಲ್ , ತ್ಯಾಗ ಮಲ್ಲೇಶಪ್ಪ, ಡಿವೈಎಸ್ಪಿ ನಾಗೇಶ ಐತಾಳು, ಸಿಪಿಐ ಡಿ.ದುರುಗಪ್ಪ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.