ದಾವಣಗೆರೆ :
ಕುಡಿಯುವ ನೀರು ಬಿಡಲು ವಾಲ್ವ್ ತಿರುವುತ್ತಿದ್ದ ಪಾಲಿಕೆಯ ವಾಲ್ವ್ ಮನ್ ಮೇಲೆ ದಾಳಿ ನಡೆಸಿರುವ ಹಂದಿಯೊಂದು ಆತನ ತೊಡೆ, ಮರ್ಮಾಂಗವನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಇಲ್ಲಿನ ಜಾಲಿ ನಗರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಪಾಲಿಕೆಯ ವಾಲ್ವ್‍ಮನ್ ಎಚ್.ಎನ್.ಮಂಜುನಾಥ ಎಂಬುವರೇ ಹಂದಿ ದಾಳಿಯಿಂದ ತೀವ್ರ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ. ಮಂಜುನಾಥ ಎಂದಿನಂತೆ ಜಾಲಿ ನಗರದಲ್ಲಿ ನೀರು ಬಿಡಲೆಂದು ವಾಲ್ವ್ ತಿರುವುತ್ತಿದ್ದ ವೇಳೆ ಎರಗಿದ ಹಂದಿಯೊಂದು ಇವರ ತೊಡೆ, ಮರ್ಮಾಂಗಕ್ಕೆ ಬಾಯಿ ಹಾಕಿ ತೀವ್ರ ಗಾಯಗೊಳಿಸಿರುವುದು ನಾಗರೀಕರನ್ನು ಬೆಚ್ಚಿ ಬೀಳಿಸಿದೆ.
ಹಂದಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಮಂಜುನಾಥರನ್ನು ತಕ್ಷಣವೇ ಸ್ಥಳೀಯರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ವಾಲ್ವ್‍ಮನ್ ಆರೋಗ್ಯವನ್ನು ವಿಚಾರಿಸಲು ಪಾಲಿಕೆಯ ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಹಂದಿಗಳ ನಿರ್ಮೂಲನೆಗೆ ಮುಂದಾಗಬೇಕಾಗಿದ್ದ ಪಾಲಿಕೆಯ ವಾಲ್ವ್‍ಮನ್ ಅವರೇ ಹಂದಿಗಳ ದಾಳಿಗೆ ಒಳಗಾಗಿದ್ದು, ನಾಗರೀಕರಲ್ಲಿ ಹಂದಿಗಳ ಬಗ್ಗೆ ಮತ್ತಷ್ಟು ಭಯ ಮೂಡಿಸಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಹಂದಿಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.