ತುಮಕೂರು:
ನಗರದ ಬಾರ್ಲೇನ್ ರಸ್ತೆಯಲ್ಲಿ ಚುನಾವಣಾ ಅಭ್ಯರ್ಥಿಯ ವಿಜಯೋತ್ಸವ ನಡೆಯುವಾಗ ಆ ಗುಂಪಿನ ಮೇಲೆ ಯಾರೋ ಕೆಲವರು ಆಸಿಡ್ ರೂಪದ ರಾಸಾಯನಿಕ ಎರಚಿದ ಆತಂಕಕಾರಿ ಪ್ರಸಂಗ ಜರುಗಿದೆ.
ಸೋಮವಾರ ಮಧ್ಯಾಹ್ನ ಸುಮಾರು 1-30 ರಲ್ಲಿ ನಗರದ ಬಾರ್ಲೈನ್ ರಸ್ತೆಯಲ್ಲಿ ಮಾಜಿ ಶಾಸಕ ಎಸ್.ಷಫಿ ಅಹಮದ್ ಅವರ ಮನೆ ಬಳಿ 16 ನೇ ವಾರ್ಡ್ನ ವಿಜೇತ ಅಭ್ಯರ್ಥಿ ಕಾಂಗ್ರೆಸ್ನ ಇನಾಯತ್ ಉಲ್ಲಾಖಾನ್ ಅವರ ವಿಜಯೋತ್ಸವ ಸಾಗುತ್ತಿತ್ತು. ಸುಮಾರು 50 ಜನರು ಮೆರವಣಿಗೆಯಲ್ಲಿದ್ದು, ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಅದೇ ಹೊತ್ತಿಗೆ ಯಾರೋ ಕೆಲವರು ಪ್ಲಾಸ್ಟಿಕ್ ಬಾಟಲುಗಳಿಂದ ದ್ರವ ರೂಪದ ದ್ರಾವಣವನ್ನು ಎಲ್ಲರ ಮೇಲೆ ಎರಚಿದ್ದಾರೆ. ಅಲ್ಲೇನು ನಡೆಯುತ್ತಿದೆ ಎಂಬುದು ಗೊತ್ತಾಗುವಷ್ಟರಲ್ಲಿ ಸದರಿ ದ್ರಾವಣ ತಗುಲಿದ ವ್ಯಕ್ತಿಗಳಿಗೆ ತೀವ್ರ ದ್ರಾವಣ ತಗುಲಿದ ಭಾಗದಲ್ಲಿ ತೀವ್ರ ಉರಿ ಕಾಣಿಸಿದೆ. ಜೊತೆಗೆ ದ್ರಾವಣ ಬಿದ್ದ ಸ್ಥಳದಲ್ಲಿ ಹೊಗೆಯ ವಾತಾವರಣ ಉಂಟಾಗಿ ಉಸಿರಾಟಕ್ಕೂ ತೊಂದರೆ ಆಗಿದೆ. ತಕ್ಷಣವೇ ಇವರೆಲ್ಲರನ್ನೂ ನಗರದ ಕೋತಿ ತೋಪಿನಲ್ಲಿರುವ ಸರ್ಕಾರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಮತ್ತೆ ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಾದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾದವರಲ್ಲಿ ಶಹವಾಜ್ ಮತ್ತು ಇತರರು ಸೇರಿ ಸುಮಾರು 20 ಜನರು ಚಿಕಿತ್ಸೆ ಪಡೆದರು. ಮುಖ, ಕುತ್ತಿಗೆ, ಕಣ್ಣು, ಎದೆ ಭಾಗಗಳಿಗೆ ಸದರಿ ದ್ರಾವಣ ಸಿಡಿದಿದ್ದು, ಎಲ್ಲರಿಗೂ ವೈದ್ಯರು ಚಿಕಿತ್ಸೆ ನೀಡಿದರು. ಎಲ್ಲರೂ ತೀವ್ರ ಉರಿಯಾಗುತ್ತಿದೆಯೆಂದು ಹೇಳುತ್ತಿದ್ದರು. ಕಣ್ಣಿಗೆ ದ್ರಾವಣ ಬಿದ್ದವರು, ಕಣ್ಣು ತೆರೆಯಲಾಗದೆ ಸಂಕಟ ಅನುಭವಿಸುತ್ತಿದ್ದರು.
ಸುದ್ದಿ ತಿಳಿದೊಡನೆ ಮಾಜಿ ಶಾಸಕರಾದ ಎಸ್.ಷಫಿ ಅಹಮದ್ ಮತ್ತು ಡಾ. ಎಸ್.ರಫೀಕ್ ಅಹಮದ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ನೊಂದ ವ್ಯಕ್ತಿಗಳ ಆರೋಗ್ಯ ವಿಚಾರಿಸಿದರು. ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ವಿಜಯಲಕ್ಷ್ಮೀ ಮತ್ತು ಸಿಬ್ಬಂದಿ ಆಗಮಿಸಿ, ದೂರನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡರು. ಚುನಾವಣಾ ಲಿತಾಂಶ ಬಂದ ನಂತರದ ದ್ವೇಷದಿಂದ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
