ತುಮಕೂರು:
ಮದುವೆ ಸೀಸನ್ ಶುರುವಾಗಿದ್ದು, ಕೆಲ ತರಕಾರಿಗಳಿಗೆ ಬೇಡಿಕೆ ಹೆಚ್ಚಿ, ಬೆಲೆಗಳು ಗಗನ ಮುಟ್ಟಿವೆ. ಮಳೆ ಬೀಳುತ್ತಿರುವುದು ಸಹ ಕೆಲ ತರಕಾರಿ ಬೆಲೆಗಳ ತುಟ್ಟಿಗೆ ಕಾರಣವಾಗಿದೆ. ದೀಪಾವಳಿ ಹಬ್ಬದ ನಂತರ ಹೂವಿನ ಬೇಡಿಕೆ ತಗ್ಗಿದ್ದು ಎಲ್ಲಾ ಹೂವಿನ ಧಾಣೆಗಳು ಕುಸಿತ ಕಂಡಿವೆÉ. ಕೋಳಿ ಮಾಂಸ ಕೆಜಿಗೆ 10 ರೂ ನಷ್ಟು ಇಳಿಕೆಯಾಗಿದ್ದು, ಮೊಟ್ಟೆ ದರ ಕೊಂಚ ಏರಿಕೆಯಾಗಿದೆ. ಮಟನ್, ಮೀನಿನ ದರ ಯಥಾಸ್ಥಿತಿ ಮುಂದುವರಿದಿದೆ. ಖಾದ್ಯ ತೈಲದ ಬೆಲೆ ಇಳಿಕೆಯಾಗಿಲ್ಲ. ಕೆಲವು ಹಣ್ಣುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಹಣ್ಣುಗಳ ದರ ಯಥಾಸ್ಥಿತಿ ಮುಂದುವರಿದಿದೆ.
ನುಗ್ಗೆಕಾಯಿ, ಕ್ಯಾಪ್ಸಿಕಂಗೆ ಶುಕ್ರದೆಶೆ : ಮದುವೆ ಮನೆಯ ಅಡುಗೆಯಲ್ಲಿ ಬಳಸುವ ಕೆಲ ವಿಶೇಷ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲ ಕಾಯಿಪಲ್ಲೆಗಳ ಬೆಲೆಗಳು ದಿಢೀರನೆ ಏರಿಕೆಯಾಗಿವೆ. ಕಳೆದವಾರ 80-100 ರೂ ಇದ್ದ 1 ಕೆಜಿ ನುಗ್ಗೆಕಾಯಿ ಬೆಲೆ ಈ ವಾರ 200 ರೂ ಗೆ, 50-60 ರೂ ಇದ್ದ ನವಿಲುಕೋಸು ದುಪ್ಪಟ್ಟಾಗಿದ್ದು 100-120 ರೂ ಗೆ ಏರಿಕೆಯಾಗಿದೆ. ಕ್ಯಾಪ್ಸಿಕಂ ಕೂಡ ಈ ವಾರ ಕೆಜಿ 200 ರೂ ಗೆ ದಿಢೀರನೆ ಏರಿಕೆಯಾಗಿದೆ. ಕಳೆದ ವಾರ ಕೆಜಿ 120 ರೂ ನಂತೆ ದಾಖಲೆ ಬೆಲೆಗೆ ಮಾರಾಟವಾಗಿದ್ದ ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆ ಈ ವಾರ 60 ರೂ ಗೆ ಇಳಿದಿದೆ. ಮಿಕ್ಕಂತೆ ಇತರೆ ಸೊಪ್ಪಿನ ಬೆಲೆಗಳು 80-100 ರೂ ನಂತೆ ಮಾರಾಟವಾಗುತ್ತಿದ್ದು ಬೆಲೆಗಳು ಇಳಿದಿಲ್ಲ. ಏರಿಕೆಯಾಗಿದ್ದ ಟೊಮ್ಯಾಟೊ, ಈರುಳ್ಳಿ, ಬೀನ್ಸ್ ಬೆಲೆಗಳು ಈ ವಾರವೂ ಇಳಿದಿಲ್ಲ. ಟೊಮ್ಯಾಟೊ 40-60 ರೂ, ಈರುಳ್ಳಿ-40-50, ಬೀನ್ಸ್-50-60 ರೂ ನಂತೆ ಮಾರಾಟವಾಗುತ್ತಿವೆ.
ಏರಿಕೆಯತ್ತ ಕಲ್ಲಂಗಡಿ-ಕರಬೂಜ : ದುಬಾರಿಯಾಗಿದ್ದ ಏಲಕ್ಕಿ ಬಾಳೆಹಣ್ಣಿನ ದರ ಈ ವಾರವೂ ಇಳಿಯದೇ ಎಂದಿನಂತೆ ಕೆಜಿ 50-60 ರೂ ನಂತೆ ಮಾರಾಟವಾಗುತ್ತಿದೆ. ಕಲ್ಲಂಗಡಿ ಕೆಜಿ 40 ರೂ, ಕರಬೂಜ-60 ಗೆ ದಿಢೀರನೆ ಏರಿಕೆಯಾಗಿವೆ. ಮಿಕ್ಕಂತೆ ಇತರೆ ಹಣ್ಣುಗಳ ಬೆಲೆಗಳು ಕಳೆದ ವಾರದ ದರದಲ್ಲೆ ಮಾರಾಟವಾಗುತ್ತಿವೆ. ಸೀಸನ್ ಇಲ್ಲದೇ ಇರುವುದು ಹಾಗೂ ಮದುವೆಯಲ್ಲಿ ಫ್ರೂಟ್ ಸಲಾಡ್ಗೆ ಕಲ್ಲಂಗಡಿ-ಕರಬೂಜ ಹಣ್ಣುಗಳನ್ನು ಬಳಸುವುದರಿಂದ ಬೇಡಿಕೆ ಹೆಚ್ಚಿ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್ನ ಮಾಲೀಕ ವೆಂಕಟೇಶ್.
ತೊಗರಿಬೇಳೆ 5 ರೂ ಅಗ್ಗ : ದೀಪಾವಳಿ ಹಬ್ಬದ ನಂತರ ತೊಗರಿಬೇಳೆ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಕಳೆದವಾರ 100-105 ರೂ ಇದ್ದ ತೊಗರಿಬೇಳೆ ಈ ವಾರ 95-100 ರೂ ನಂತೆ ಮಾರಾಟವಾಗಿದೆ. ಹೊಸ ಬೇಳೆ ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಇಳಿಕೆಗೆ ಕಾರಣ ಎನ್ನುತ್ತಾರೆ ಮಂಡಿಪೇಟೆ ದಿನಸಿ ವರ್ತಕರು. ಇನ್ನೂ ಇಳಿಕೆಯಾಗುತ್ತದೆ ಎನ್ನಲಾಗುತ್ತಿದ್ದ ಅಡುಗೆ ಎಣ್ಣೆ ಬೆಲೆ ಈ ವಾರವೂ ಇಳಿಯದೇ ಎಂದಿನಂತೆ ಸೂರ್ಯಕಾಂತಿ ಎಣ್ಣೆ ಕೆಜಿ-140 ರೂ, ಶೇಂಗಾ ಎಣ್ಣೆ-145 ರೂ, ತಾಳೆಎಣ್ಣೆ-125 ರೂ ನಂತೆ ಮಾರಾಟವಾಗುತ್ತಿದೆ. ಮಿಕ್ಕಂತೆ ಇತರೆ ಬೇಳೆ-ಕಾಳುಗಳ ಬೆಲೆಯಲ್ಲಿ ಅಂತಹ ವ್ಯತ್ಯಾಸಗಳೇನೂ ಕಂಡುಬರದೇ ಯಥಾಸ್ಥಿತಿ ಮುಂದುವರಿದಿದೆ.
10 ರೂ ಇಳಿದ ಕೋಳಿ ಬೆಲೆ : ಕಳೆದ ವಾರ ಕೆಜಿ ಗೆ 160 ರೂ ಇದ್ದ ಕೋಳಿ ಮಾಂಸದ ಬೆಲೆ ಈ ವಾರ ಕೊಂಚ ಇಳಿದಿದೆ. ಬ್ರಾಯ್ಲರ್ ಕೋಳಿ ಕೆ.ಜಿ ರೂ 140, ಫಾರಮ್ 120, ನಾಟಿ ಕೋಳಿ 250-300ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮೀನು ಮತ್ತು ಮಟನ್ ಧಾರಣೆಗಳು ಯಥಾಸ್ಥಿತಿ ಮುಂದುವರಿದಿವೆ. ಮೊಟ್ಟೆ ಧಾರಣೆ ಕೊಂಚ ಏರಿಕೆಯಾಗಿದೆ. ಕೋವಿಡ್ ನಿಯಮಗಳು ಸರಳವಾಗಿದ್ದು, ಕೋಳಿ ಸಾಕಣಿಕೆ ಉದ್ಯಮ ಚೇತರಿಸಿಕೊಳ್ಳುತ್ತಿರುವುದು ಹಾಗೂ ಕೋವಿಡ್ ನಂತರದಲ್ಲಿ ನಗರ ಪ್ರದೇಶಗಳಿಂದ ಬಂದ ಯುವಕರು ಕೋಳಿ ಸಾಕಾಣಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು ಎಲ್ಲೆಡೆ ಜನ ಕೋಳಿ ಸಾಕಣಿಕೆಗೆ ಜನ ಮುಂದಾಗುತ್ತಿದ್ದಾರೆ ಹಾಗಾಗಿ ಕೋಳಿ ಬೆಲೆ ಕೊಂಚ ಇಳಿಕೆಯಾಗಿದೆ ಎನ್ನುತ್ತಾರೆ ಹುಳಿಯಾರಿನ ಕೋಳಿ ವ್ಯಾಪಾರಿ ಕರವೇ ಶ್ರೀನಿವಾಸ್.
ಬಟಾಣಿಗೆ ಬಂಪರ್ ಬೆಲೆ : ಹಿಗ್ಗಿದ ಶಿವಗಂಗೆಯ ರೈತ : ಹಸಿ ಬಟಾಣಿ ಕೆಜಿ 500 ರೂ ಗೆ ಮಾರಾಟವಾಗುವುದರ ಮೂಲಕ ಬೆಲೆ ಏರಿಕೆಯಲ್ಲಿ ದಾಖಲೆ ಸೃಷ್ಠಿಸಿದೆ. ಅಂತರಸನಹಳ್ಳಿ ಮಾರುಕಟ್ಟೆಯ ಇತಿಹಾಸದಲ್ಲೆ ತರಕಾರಿಯೊಂದು ಇಷ್ಟೊಂದು ದುಬಾರಿ ಬೆಲೆಗೆ ಏರಿದ್ದು ಇದೇ ಮೊದಲು ಎನ್ನಲಾಗಿದೆ. ಶನಿವಾರ ಶಿವಗಂಗೆಯಿಂದ ರೈತರೊಬ್ಬರು ಮಾರುಕಟ್ಟೆಗೆ ತಂದಿದ್ದ 1 ಕ್ವಿಂಟಾಲ್ ಹಸಿ ಬಟಾಣಿ ಬಂಪರ್ ಬೆಲೆಗೆ ಮಾರಾಟವಾಗಿದ್ದು, ಮಾಲು ತಂದಿದ್ದ ರೈತ ತನ್ನ ಜೀವಮಾನದಲ್ಲಿ ಈ ಬೆಲೆಯನ್ನು ಮತ್ತೆ ನೋಡುತ್ತೇನೊ ಇಲ್ಲವೊ ಎಂದು ಸಂಭ್ರಮಿಸಿದ್ದಾಗಿ ಮಾರುಕಟ್ಟೆಯ ವ್ಯಾಪಾರಿಗಳು ತಿಳಿಸಿದ್ದಾರೆ. ಇದು ಹಸಿಬಟಾಣಿಯ ಅನ್ಸೀಸನ್ ಕಾಲವಾಗಿದ್ದು, ಈ ರೈತ ತಂದಿದ್ದ ಮಾಲು ಬಿಟ್ಟರೇ ಬೇರೆ ಯಾವುದೇ ಹಸಿ ಬಟಾಣಿ ಮಾರುಕಟ್ಟೆಗೆ ಬಾರದಿರುವುದು ಹಾಗೂ ಮದುವೆ ಸೀಸನ್ ಇರುವುದರಿಂದ ಹಸಿ ಬಟಾಣಿಗೆ ಹೆಚ್ಚು ಬೇಡಿಕೆ ಉಂಟಾಗಿ ದಾಖಲೆ ಬೆಲೆ ಬಂದಿದ್ದು, ನನ್ನ 40 ವರ್ಷದ ವ್ಯಾಪಾರದ ಅನುಭವದಲ್ಲಿ ಹಸಿ ಬಟಾಣಿ ಇಷ್ಟೊಂದು ಬೆಲೆ ಏರಿದ್ದನ್ನು ಕಂಡಿಲ್ಲ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ತರಕಾರಿ ವ್ಯಾಪಾರಿ ವಾಸು.
ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)
ಸೇಬು 100-140
ದಾಳಿಂಬೆ 100-160
ಮೊಸಂಬಿ 50-80
ಕಿತ್ತಳೆ 40-60
ಸಪೋಟ 30-60
ಏಲಕ್ಕಿ ಬಾಳೆ 50-60
ಪಚ್ಚ ಬಾಳೆ 20-30
ಪಪ್ಪಾಯ 20
ಕಲ್ಲಂಗಡಿ 20
ಕರಬೂಜ 30
ಸೀಬೆ 60
ಪೈನಾಪಲ್ 50-60
ದ್ರಾಕ್ಷಿ 160
ತರಕಾರಿ (ಬೆಲೆ ಕೆ.ಜಿ ರೂ.)
(ಅಂತರಸನಹಳ್ಳಿ ಮಾರುಕÀಟ್ಟೆ)
ಟೊಮ್ಯಾಟೊ 40-60
ಈರುಳ್ಳಿ 40
ಆಲೂಗಡ್ಡೆ 30
ಬೀನ್ಸ್ 50
ಕ್ಯಾರೆಟ್ 40
ಬೀಟ್ರೂಟ್ 20
ಮೂಲಂಗಿ 40
ಗೆಡ್ಡೆಕೋಸು 100- 120
ನುಗ್ಗೆಕಾಯಿ 200
ಬದನೆಕಾಯಿ 30-50
ಎಲೆಕೋಸು 20
ಹೂಕೋಸು 1ಕ್ಕೆ 60
ಹಸಿ ಮೆಣಸಿನಕಾಯಿ 40
ಕ್ಯಾಪ್ಸಿಕಂ 200
ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ 140
ಫಾರಂ 120
ನಾಟಿ ಕೋಳಿ ಮಾಂಸ 250-300
ಮಟನ್ 600-650
ಮೀನು (ಸಾಮಾನ್ಯ) 150-200
ಮೊಟ್ಟೆ (1 ಡಜನ್) 60-65
ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ 15,500
ಗರಿಷ್ಠ 17,506
ಮಾದರಿ 17,200
ಒಟ್ಟು ಆವಕ–896.55 ಕ್ವಿಂಟಾಲ್
(2085 ಚೀಲ)
-ಚಿದಾನಂದ್ ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
