ಚಳ್ಳಕೆರೆ
ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮಾಜದಲ್ಲಿ ಹೆಚ್ಚು ಗೌರವವನ್ನು ಸಂಪಾದಿಸುವ ಹಂತ ತಲುಪಿದ್ದಾರೆ. ಅವರಲ್ಲಿ ವಿಶೇಷವಾದ ಶಕ್ತಿ ಮತ್ತು ಸಾಮಥ್ರ್ಯ ಎರಡೂ ಅಡಗಿದೆ. ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಸಾಮಥ್ರ್ಯವನ್ನು ಸಮಾಜದ ಏಳಿಗೆಗಾಗಿ ಮೀಸಲಿಟ್ಟರೆ ಅವರನ್ನು ಈ ಸಮಾಜ ಸದಾ ಗೌರವಿಸುತ್ತದೆ. ಹೊಸ ಹೊಸ ಚಿಂತನೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ವೃಂದ ಎಲ್ಲರನ್ನು ಜಾಗೃತಗೊಳಿಸಬೇಕಿದೆ. ವಿದ್ಯಾರ್ಥಿಗಳ ಏಳಿಗೆಯನ್ನು ಮತ್ತು ಪ್ರಭುದತ್ತೆಯನ್ನು ವ್ಯವಸ್ಥಿತವಾಗಿ ಕೊಂಡ್ಯೊಯಲು ಕಾನೂನು ಸಹ ಸಹಕಾರ ನೀಡುತ್ತದೆ ಎಂದು ಜೆಎಂಎಫ್‍ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಎಚ್‍ಪಿಪಿಸಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇಂದು ಕಾನೂನು ಸಮಾಜದಲ್ಲಿ ಸರ್ವವ್ಯಾಪಿಯಾಗಿ ಹರಡಿದೆ. ಕಾನೂನನ್ನು ಹೊರತು ಪಡಿಸಿ ಯಾವುದೇ ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ. ಕಾನೂನನ್ನು ಉತ್ತಮವಾಗಿ ಜಾರಿಗೊಳಿಸಲು ಕಾನೂನಿನ ಮಾತೃಸ್ವರೂಪವಾದ ಸಂವಿಧಾನವಿದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನ ಮತ್ತು ಕಾನೂನು ಗೌರವಿಸುವ ವಿಶ್ವಾಸವನ್ನು ಹೊಂದಿರಬೇಕಾಗುತ್ತದೆ. ಸಮಾಜದಲ್ಲಿ ಎಲ್ಲಾ ರೀತಿಯ ಸಮಾನತೆ ಮತ್ತು ಅಭಿವೃದ್ಧಿ ಪರ ಚಿಂತನೆಗಳಿಗೆ ಕಾನೂನಿನ ನೆರವು ಬೇಕು. ಕಾನೂನನ್ನು ಹೊರತು ಪಡಿಸಿ ಯಾವುದೇ ರೀತಿಯ ಬದಲಾವಣೆಯನ್ನು ಯಾವ ಕ್ಷೇತ್ರದಲ್ಲು ತರಲು ಸಾಧ್ಯವಿಲ್ಲವೆಂದರು.
ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷ ಸಾಧನೆಯನ್ನು ಮಾಡಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಈ ನಾಡಿನ ಆದಮ್ಯ ಶಕ್ತಿ. ನಿಮ್ಮಲ್ಲಿ ಅಡಗಿರುವ ಬುದ್ದಿ ಕೌಶಲ್ಯ ಮತ್ತು ಜ್ಞಾನವನ್ನು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿದಲ್ಲಿ ಮಾತ್ರ ಸಮಾಜದ ಅಮೂಲಾಗ್ರ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ಯಾವುದನ್ನೂ ಸಹ ಸಾಧಿಸಲು ಸಾಧ್ಯವಿಲ್ಲವೆಂಬ ಚಿಂತೆ ಎಂದೂ ವಿದ್ಯಾರ್ಥಿಗಳನ್ನು ಕಾಡಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಾಮಾಜಿಕ ಸ್ಥಿತಿಗತಿಯನ್ನು ಸಹ ಅರಿಯಬೇಕಾಗುತ್ತದೆ. ಇಂದಿನ ಯುವ ಜನಾಂಗದಲ್ಲಿ ವಿಶೇóಷವಾದ ಸಂಘಟನಾ ಚಾತುರ್ಯವಿದ್ದು, ಛಲದಿಂದ ಏನನ್ನೂ ಮಾತ್ರ ಸಾಧಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿದೆ. ನಮ್ಮ ಪೂರ್ವಜರು ನಮ್ಮ ಸಮಾಜದ ಮತ್ತು ಸಂಸ್ಕøತಿ ಬೆಳವಣಿಗೆಗೆ ಅವರದ್ದೇಯಾದ ಕೊಡುಗೆಯನ್ನು ನೀಡಿದ್ದು, ಈ ಪರಿಪಾಠವನ್ನು ವಿದ್ಯಾರ್ಥಿಗಳು ಮುಂದುವರೆಸಬೇಕು ಎಂದರು.
ಭಾರತ ಸಂವಿಧಾನ ಪ್ರಸ್ತುತತೆಯ ಬಗ್ಗೆ ಮಾತನಾಡಿದ ಪ್ರಾಧ್ಯಾಪಕಿ ಡಾ.ಸಿ.ವಿ.ಕವಿತಾ, ಸಂವಿಧಾನದ ಬಗ್ಗೆ ಅನೇಕ ರೀತಿಯ ಊಹಾಪೋಹಗಳು ಪ್ರಾರಂಭದಲ್ಲಿ ಇದ್ದವು. 1934ರಲ್ಲಿ ಎಂ.ಎನ್.ರಾಯ್ ಎಂಬುವವರು ಸಂವಿಧಾನದ ಅಗತ್ಯತೆಯನ್ನು ಪ್ರತಿಪಾದಿಸಿದರು. 1935ರಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. 1938ರಲ್ಲಿ ಅಂದಿನ ಬ್ರೀಟಿಷ್ ಸರ್ಕಾರ ಸಂವಿಧಾನ ಬಗ್ಗೆ ಒಲವು ತೋರಿತು. 1940ರಲ್ಲಿ ಬ್ರೀಟಿಷ್ ಸರ್ಕಾರ ಒಪ್ಪಿಗೆ ನೀಡಿತು. 1942ರಲ್ಲಿ ಸಮಿತಿ ರಚನೆಯ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. 1948ರಲ್ಲಿ ಕರಡು ಪ್ರತಿ ಸಿದ್ದ ಪಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಯಿತು. 1949 ಜ.29 ರಂದು ಸಂವಿಧಾನವನ್ನು ಸಿದ್ದಪಡಿಸಲಾಯಿತು. 1950 ಜ.26ರಂದು ನಮ್ಮ ರಾಷ್ಟ್ರ ಸಂವಿಧಾನವನ್ನು ಒಪ್ಪಿಕೊಂಡಿತು ಎಂದರು.
ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅಶ್ವತ್ಥನಾಯಕ ಮಾತನಾಡಿ, ವಿಶ್ವವೇ ಬೆರಗಾಗುವಂತಹ ಮತ್ತು ಆಚ್ಚರಿ ಪಡುವಂತಹ ಕ್ಷೇತ್ರವಾಗಿ ಚಳ್ಳಕೆರೆ ತಾಲ್ಲೂಕು ಹೊರ ಹೊಮ್ಮಲಿದೆ. ಸುಮಾರು 9 ಸಾವಿರ ಎಕರೆ ಪ್ರದೇಶಲ್ಲಿ 72 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರದ ಪ್ರತಿಷ್ಠಿತ ನಾಲ್ಕು ಯೋಜನೆಗಳು ಒಂದೇ ಕಡೆ ಕಾರ್ಯಾರಂಭ ಮಾಡಿದ್ದು, ಈ ಕ್ಷೇತ್ರ ವಿಶ್ವ ಭೂಪಟದಲ್ಲಿ ತನ್ನದೇಯಾದ ಸಾರ್ವಭೌಮತ್ವವನ್ನು ಪಡೆಯಲಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಸಹ ಇದರ ವಾಸ್ತವಾಂಶವನ್ನು ಅರಿಯಬೇಕು ಎಂದರು.
ವಕೀಲ ಎಸ್.ಡಿ. ಹನುಮಂತರಾಜು ಮಾತನಾಡಿ, ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿಗಳು ಹೆಚ್ಚಿದ್ದು, ಶೈಕ್ಷಣಿಕ ಪ್ರಗತಿಯೇ ಪ್ರತಿಯೊಬ್ಬರ ಗುರಿಯಾಗಬೇಕು. ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇಯಾದ ಜ್ಞಾನ ಸಂಪತ್ತನ್ನು ಹೊಂದಿರುತ್ತಾನೆ. ನಿಮ್ಮಲ್ಲಿರುವ ಎಲ್ಲಾ ಕಾರ್ಯಚಟುವಟಿಕೆಗಳು ಸಮಾಜದ ಪರಿವರ್ತನೆಗೆ ನಾಂದಿಯಾಗಬೇಕು. ದುಶ್ಚಟಗಳನ್ನು ದೂರವಿಟ್ಟು ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಜಿ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ವಯಂ ಚಿಂತನೆಗಳು ಹೆಚ್ಚಾಗಿದ್ದು, ಉತ್ತಮವಾದದ್ದು ಸ್ವೀಕರಿಸುವ ಮನೋಭಾವ ಎಲ್ಲಾ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮವನ್ನು ಪ್ರಾಧ್ಯಾಪಕ ಶಿವಲಿಂಗಪ್ಪ ನಿರೂಪಿಸಿದರು
