ವಿಧಾನಪರಿಷತ್ ಚುನಾವಣೆ: ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರ

ತುಮಕೂರು:

ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಮೂರು ಪಕ್ಷದ ಅಭ್ಯರ್ಥಿಗಳು ಯುವಕರಿದ್ದು, ಮೇಲ್ಮನೆಯ ಸ್ಪರ್ಧೆಯ ಕುರಿತಂತೆ ಪ್ರಜಾಪ್ರಗತಿಗೆ ನೀಡಿದ ಪಂಚಪ್ರಶ್ನೆ ಸಂದರ್ಶನದಲ್ಲಿ, ಚುನಾವಣೆ ಅಖಾಡದಲ್ಲಿ ಕೇಳಿಬರುತ್ತಿರುವ ಟೀಕೆಟಿಪ್ಪಣಿ, ತಮ್ಮ ಮುಂದಿನ ಕಾರ್ಯ ಯೋಜನೆಗಳು ನೇರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ : ಆರ್.ರಾಜೇಂದ್ರ

ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಾಂಗ್ರೆಸ್ಸಿಗರೇ ಸೋಲಿಸಿರುತ್ತಾರೆನ್ನುವ ಎದುರಾಳಿಗಳ ಆರೋಪ ನಿಜವೇ?
ಖಂಡಿತಾ ಸುಳ್ಳು. ಎದುರಾಳಿ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರ ಅಖಾಡದಲ್ಲಿ ಯಾವುದೇ ವಿಷಯಗಳಿಲ್ಲ. ಗ್ರಾಮಗಳ ಅಭಿವೃದ್ಧಿಯನ್ನು ಮಾಡಿಲ್ಲ. ಹಾಗಾಗಿ ಪ್ರಸಕ್ತ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೆಲ್ಲರೂ ಒಗ್ಗಟ್ಟಾಗಿ ಗೆಲುವಿಗಾಗಿ ಹೋರಾಡುತ್ತಿರುವುದು ಬಿಜೆಪಿ-ಜೆಡಿಎಸ್ ನಾಯಕರ ಕಣ್ಣುಕುಕ್ಕುವಂತೆ ಮಾಡಿದ್ದು, ಈ ರೀತಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ನಾಯಕರೆಲ್ಲರು ಒಗ್ಗಟ್ಟಾಗಿ ಪ್ರಚಾರ ಮಾಡುತ್ತಾ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಹೆಚ್ಚು ಲೀಡ್ ಕೊಡಿಸಬೇಕೆಂದು ಕೆಲಸ ಮಾಡುತ್ತಿದ್ದಾರೆ.

ವಿಧಾನಪರಿಷತ್ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಪೂರಕವಾದ ಅಂಶಗಳೇನು?

ಕಳೆದ ಬಾರಿ ಸೋತರೂ ಮನೆಯಲ್ಲಿ ಕೈ ಕಟ್ಟಿ ಕೂರದೆ ನಿರಂತರ ಜನರ ಸೇವೆ, ಗ್ರಾಪಂ ಸದಸ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿರುವುದು ಈ ಬಾರಿ ಗೆಲುವನ್ನು ತಂದುಕೊಡಲಿದೆ. ಅಲ್ಲದೇ ದೇಶ, ರಾಜ್ಯದಲ್ಲಿರುವ ಆಡಳಿತಾರೂಢ ಬಿಜೆಪಿ ವಿರೋಧಿ ಅಲೆ, ಗ್ರಾಪಂ ಅನುದಾನವನ್ನು ಕಡಿತ ಮಾಡಿರುವುದು ಎಲ್ಲೆಡೆ ಬಿಜೆಪಿಗೆ ವ್ಯತಿರಿಕ್ತ ವಾತಾವರಣ ನಿರ್ಮಿಸಿದೆ. ಇನ್ನೂ ಜೆಡಿಎಸ್ ನಾಯಕರು ಚುನಾವಣೆ ಸಂದರ್ಭಕ್ಕಷ್ಟೆ ಗ್ರಾಮಗಳತ್ತ ಮುಖಮಾಡಿರುವುದನ್ನು ಮತದಾರರೇ ಪ್ರಶ್ನಿಸುತ್ತಿದ್ದಾರೆ.

ಬಿಜೆಪಿ- ಜೆಡಿಎಸ್ ಒಳಮೈತ್ರಿ ಕುರಿತು ಏನು ಹೇಳುವಿರಿ?

ತುಮಕೂರು ಸೇರಿದಂತೆ ಜೆಡಿಎಸ್ ಸ್ಪರ್ಧಿಸಿರುವ ಆರು ಕ್ಷೇತ್ರದಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ಅವರ ಪಕ್ಷದ ವರಿಷ್ಠರೇ ಸ್ಪಷ್ಟಪಡಿಸಿದ್ದಾರೆ.ಹಾಗಾಗಿ ತುಮಕೂರು ಜಿಲ್ಲೆಯಲ್ಲಿ ಅಂತಹ ಮೈತ್ರಿ ಇಲ್ಲವೆಂದು ಭಾವಿಸಿರುವೆ. ಆದರೆ ಎರಡು ಪಕ್ಷಗಳ ಒಳ ಒಪ್ಪಂದಗಳು ಏನಿದೆಯೋ ತಿಳಿದಿಲ್ಲ. ಕಾಂಗ್ರೆಸ್ ಮಾತ್ರ ತನ್ನ ತತ್ವಸಿದ್ಧಾಂತಿಯಡಿಯೇ ಏಕಾಂಗಿಯಾಗಿಯೇ ಹೋರಾಟಮಾಡುತ್ತಿದೆ.

ಮತದಾರರು ಯಾವ ಕಾರಣಕ್ಕೆ ನಿಮ್ಮನ್ನು ಆಯ್ಕೆ ಮಾಡಬೇಕು? ಕಳೆದ ಬಾರಿ ಸೋಲಿನ ಅನುಕಂಪ ಕೆಲಸ ಮಾಡುತ್ತದೆಯೇ?
ಸೋಲಿನ ಅನುಕಂಪ ಇದೆ. ಆದರೆ ನಾವು ಮಾಡಿರುವ ಸೇವಾ ಕೆಲಸಗಳು ನಮ್ಮನ್ನು ಕೈ ಹಿಡಿಯುತ್ತವೆ ಎಂಬ ವಿಶ್ವಾಸ ನನ್ನದು. ಯುವಕನಾಗಿದ್ದು, ಜಿಲ್ಲೆಯ ಜನರೊಂದಿಗೆ ಸ್ಥಳೀಯ ಸಂಸ್ಥೆ ಸದಸ್ಯರೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿರುವೆ.

ಜೆಡಿಎಸ್ ಅಭ್ಯರ್ಥಿ ಕೆಎಎಸ್ ಅಧಿಕಾರಿಯಾಗಿದ್ದವರು. ಸ್ವಂತ ಸಮಾಜ, ಜಿಲ್ಲೆಗೆ ಅವರ ಕೊಡುಗೆ ಏನೂ ಇಲ್ಲ. ದ್ವೇಷದ ರಾಜಕಾರಣಕ್ಕೆ ಅವರನ್ನು ಸ್ಪರ್ಧೆಗಿಳಿಸಲಾಗಿದೆ. ಇನ್ನೂ ಬಿಜೆಪಿ ಅಭ್ಯರ್ಥಿ ಹೊರಗಿನವರು. ಆಯ್ಕೆ ಮಾಡಿದರೂ ಜಿಲ್ಲೆಯ ಜನರ ಕೈಗೆ ಸಿಗೋಲ್ಲ. ಇಂತಹವರನ್ನು ಮತದಾರರು ಯಾಕೆ ತಾನೇ ಗೆಲ್ಲಿಸುತ್ತಾರೆ.

ಆಯ್ಕೆಯಾದರೆ ನಿಮ್ಮ ಮುಂದಿನ ಕಾರ್ಯ ಯೋಜನೆಗಳೇನು?
ಗ್ರಾಪಂ ಪಂಚಾಯಿತಿ ಸದಸ್ಯರಿಗೆ ಅವರದ್ದೇ ಆದ ನೋವಿದೆ. ಕಡಿಮೆ ಗೌರವಧನ ಭತ್ಯೆ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆ, ವಸತಿ ಯೋಜನೆಗಳ ಮಂದಗತಿಯ ಬಗ್ಗೆ ಧ್ವನಿ ಎತ್ತುವವರು ಇಲ್ಲವಾಗಿದೆ, ನಾನು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಪಂಚಾಯ್ತಿಗಳಿಗೆ ಶಕ್ತಿ ತುಂಬುವ ಜೊತೆಗೆ ಮೇಲ್ಮನೆಯಲ್ಲಿ ಸದಸ್ಯರ ಪರವಾಗಿ ಸದಾ ಧ್ವನಿ ಎತ್ತುವೆ.

ಬಿಜೆಪಿ

ಬಿಜೆಪಿ: ಎನ್.ಲೋಕೇಶ್‍ಗೌಡ

1.ವಿಧಾನ ಪರಿಷತ್ ಚುನಾವಣೆ ನಿಮ್ಮ ಗೆಲುವಿಗೆ ಪೂರಕ ಸಂಗತಿಗಳೇನು ?
ಪೂರಕ ಸಂಗತಿಗಳೆಂದರೆ ಬಿಜೆಪಿ ಪಕ್ಷದ ಅಭ್ಯರ್ಥಿ ಎಂಬುದು ಮೊದಲು , ನಂತರ ಜಿಲ್ಲೆಯಲ್ಲಿರುವ ಹೆಚ್ಚಿನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ಹಾಗೂ ತುಮಕೂರಿನಲ್ಲಿರುವ ನಮ್ಮ ಬಿಜೆಪಿ ಸಂಘಟನೆ , ಪಕ್ಷದ ಹಿರಿಯರ ಬೆಂಬಲ ಮತ್ತು ಕಾರ್ಯಕರ್ತರ ಸಹಕಾರದಿಂದ ಈ ಬಾರಿ ಗೆಲುವು ಸಾಧಿಸುವ ವಿಶ್ವಾಸವಿದೆ. ಸಿರಾ ಉಪಚುನಾವಣೆ ಫಲಿತಾಂಶ ಮೇಲ್ಮನೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲೂ ಮರುಕಳಿಸಲಿದೆ.

2.ಹೊರಗಿನ ಅಭ್ಯರ್ಥಿ ಯೆಂದು ಎದುರಾಳಿಗಳು ಆರೋಪಿಸುತ್ತಿದ್ದಾರೆ . ನೀವು ಏನು ಹೇಳುವಿರಿ?

ನಾನೇನು ಹೊರಗಿನವನಲ್ಲ , ಕೆಲವು ವರ್ಷಗಳಕಾಲ ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲಿದ್ದೆ ಅಷ್ಟೇ . ನಾನು ಮೂಲ ತುಮಕೂರು ಜಿಲ್ಲೆಯವನೇ. ತುಮಕೂರು ನಗರದಲ್ಲಿ ನನ್ನ ಸ್ವಂತ ನೆಲೆಇದೆ. ಇಲ್ಲಿಯೇ ವಾಸಿಸುತ್ತೇನೆ. ಸದಾ ಜನರಿಗೆ ಸಿಗುತ್ತೇನೆ. ಜಿಲ್ಲೆಯ ಮತದಾರರು ಪ್ರಬುದ್ಧರಾಗಿದ್ದು, ವಿನಯವಂತ, ತಮ್ಮ ಸಮಸ್ಯೆಗಳಿಗೆ ಪಕ್ಷಾತೀತವಾಗಿ ದ್ವೇಷ ರಾಗವಿಲ್ಲದೆ ಸ್ಪಂದಿಸುವವರನ್ನು ಆಯ್ಕೆ ಮಾಡಲಿದ್ದಾರೆ.

3.ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯರಾಗಿ ಆಯ್ಕೆ ಯಾದರೆ ನಿಮ್ಮ ಮುಂದಿನ ಕಾರ್ಯ ಯೋಜನೆ ಗಳೇನು ?

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ . ಜಿಲ್ಲೆಯಲ್ಲಿ ಸಂಸದರು , ಐದು ಜನ ಶಾಸಕರು , ಇಬ್ಬರು ವಿಧಾನ ಪರಿಷತ್ ಸದಸ್ಯರು ಇರುವುದರಿಂದ ಅವರೆಲ್ಲರ ಸಹಕಾರದೊಂದಿಗೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು . ನಮ್ಮ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗಳ ಕೆಲಸಗಳನ್ನು ಮಾಡುತ್ತೇನೆ . ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಧಿಕಾರಿಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನನ್ನ ಪರಿದಿಗೆ ಬರುವ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ತುಮಕೂರಿನ ಅಭಿವೃದ್ಧಿಗೆ ಎಲ್ಲರ ಜೊತೆ ಕಟಿಬದ್ಧವಾಗಿ ನಿಲ್ಲುತ್ತೇನೆಂದು ಈ ಒಂದು ಸಂದರ್ಭದಲ್ಲಿ ಸಂಕಲ್ಪ ಮಾಡುತ್ತೇನೆ ನಮ್ಮ ಬಿಜೆಪಿ ಸರ್ಕಾರವೇ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದು , ಎಲ್ಲಾ ಗ್ರಾಮ ಪಂಚಾಯಿಗಳಿಗೆ ಇಂಟರ್‍ನೆಟ್ ಸಂಪರ್ಕ ಕಲ್ಪಿಸಿ ಅನುದಾನ ನೇರವಾಗಿ ಕೊಡುವ ವ್ಯವಸ್ಥೆ ಮಾಡಿದೆ.

4. ನಿಮ್ಮ ನೇರ ಪ್ರತಿಸ್ಪರ್ಧಿ ಯಾರು ? ಎದುರಾಳಿ ಅಭ್ಯರ್ಥಿ ಗಳ ಬಗ್ಗೆ ಏನು ಹೇಳುವಿರಿ ?

ನೇರ ಸ್ಪರ್ಧಿ ಅಂತ ಏನು ಇಲ್ಲ ಜೆಡಿಎಸ್ , ಕಾಂಗ್ರೆಸ್ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಸರಿಸಮನಾದ ಸ್ಪರ್ಧಿಗಳೇ , ಎರಡೂ ಪಕ್ಷದವರೂ ಬಲಾಢರೇ ಎದುರಾಳಿಗಳ ಬಗ್ಗೆ ಯಾವುದೇ ಟೀಕೆ ಮಾಡುವುದಿಲ್ಲ . ನನ್ನ ಶಕ್ತಿ ನನ್ನ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರು

5. ಮತದಾರರು ಯಾವ ಕಾರಣಕ್ಕೆ ನಿಮ್ಮನ್ನು ಆಯ್ಕೆ ಮಾಡಬೇಕು ?
ಭಾರತೀಯ ಜನತಾ ಪಾರ್ಟಿ ದೇಶದಲ್ಲಿ , ಅಭಿವೃದ್ಧಿಯನ್ನು ಮೂಲ ಮಂತ್ರವಾಗಿಸಿಕೊಂಡು ಕೆಲಸ ಮಾಡುತ್ತಿರುವ ಪಕ್ಷ , ನಮ್ಮ ನಾಯಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಡೀ ದೇಶವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ . ನಾನು ಸಹ ಅವರ ಹಾದಿಯಲ್ಲೇ ಸಾಗುತ್ತಾ ಬಂದಿದ್ದೇನೆ ಮುಂದೇಯೂ ಸಹ ಸಾಗ್ತಿನಿ . ಬಿಬಿಎಂಪಿ ಸದಸ್ಯನಾಗಿ ಅನುಭವವಿದ್ದು ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆ, ಅನುದಾನವನ್ನು ಹೇಗೆ ತಂದು ಅಭಿವೃದ್ಧಿ ಮಾಡಬೇಕೆಂಬ ಹಲವು ಕಾರ್ಯಯೋಜನೆ ನನ್ನ ಬಳಿ ಇದೆ.

ಜೆಡಿಎಸ್: ಆರ್.ಅನಿಲ್‍ಕುಮಾರ್

1. ಕೆಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲಲು ಕಾರಣವೇನು?
ನಾನು ಚುನಾವಣೆ ಸ್ಪರ್ಧೆಗೋಸ್ಕರ ಹುದ್ದೆಗೆ ರಾಜೀನಾಮೆ ನೀಡಲಿಲ್ಲ. ವೈಯುಕ್ತಿಕ ಕಾರಣ, ಕೃಷಿ ಪೂರಕ ಉದ್ಯಮ ಹಾಗೂ ಸಮಾಜಸೇವೆ ಮಾಡಬೇಕೆಂದು ಬಯಸಿ 3 ತಿಂಗಳ ಮುಂಚೆಯೇ ಸ್ವಯಂ ನಿವೃತ್ತಿಗೆ ಅರ್ಜಿಸಲ್ಲಿಸಿದ್ದೆ. ಸರಕಾರ ನನ್ನ ರಾಜೀನಾಮೆಯನ್ನು ಅಂಗೀಕರಿಸಿದೆ.

ಇದೇ ಸಂದರ್ಭದಲ್ಲಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ನನ್ನ ಸಮಾಜಸೇವೆಯ ತುಡಿತ, ಆಡಳಿತದ ಅನುಭವವನ್ನು ಗುರುತಿಸಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಮಂತ್ರಿಸಿ ಟಿಕೆಟ್ ನೀಡಿ ಆಶೀರ್ವದಿಸಿದ್ದಾರೆ. ನನ್ನ ಸ್ಪರ್ಧೆಗೆ ಜಿಲ್ಲೆಯ ಎಲ್ಲಾ ಜೆಡಿಎಸ್ ಮುಖಂಡರು, ಪಕ್ಷ ಬೆಂಬಲಿತ ಗ್ರಾಪಂ, ನಗರಸ್ಥಳೀಯ ಸಂಸ್ಥೆ ಸದಸ್ಯರು ಸಹಮತ ವ್ಯಕ್ತಪಡಿಸಿದ್ದು, ಗೆಲ್ಲಿಸಲು ಸಂಕಲ್ಪ ತೊಟ್ಟಿದ್ದಾರೆ.

2.ಬಿಜೆಪಿ- ಜೆಡಿಎಸ್ ಒಳ ಮೈತ್ರಿಯಾಗಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಏನು ಹೇಳುವಿರಿ?

ಖಂಡಿತಾ ಸುಳ್ಳು. ನಮ್ಮ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ಮಂಗಳವಾರ ಸ್ಪಷ್ಟನೆ ನೀಡಿದ್ದು, ತುಮಕೂರು ಸೇರಿದಂತೆ ಜೆಡಿಎಸ್ ಸ್ಪರ್ಧಿಸಿರುವ ಆರು ಕ್ಷೇತ್ರಗಳಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಅಲ್ಲದೇ ಕಳೆದ ಎರಡು ಅವಧಿಯಿಂದಲೇ ತುಮಕೂರು ಕ್ಷೇತ್ರದಲ್ಲಿ ಮೇಲ್ಮನೆ ಸದಸ್ಯರಾಗಿ ಜೆಡಿಎಸ್ ಅಭ್ಯರ್ಥಿಯೇ ಆಯ್ಕೆಯಾಗಿದ್ದು, ಗ್ರಾಮ ಪಂಚಾಯಿತಿಯಲ್ಲೂ ಸಹ ಜೆಡಿಎಸ್ ಬೆಂಬಲಿತ ಸದಸ್ಯರ ಸಂಖ್ಯೆಯೇ ಅಧಿಕವಾಗಿದೆ. ಆಕಾರಣಕ್ಕೆ ಯಾವ ಪಕ್ಷದೊಂದಿಗೂ ಮೈತ್ರಿ, ಒಳಮೈತ್ರಿಯ ಅವಶ್ಯಕತೆ ಜೆಡಿಎಸ್‍ಗಿಲ್ಲ.

3.ವಿಧಾನಪರಿಷತ್ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಪೂರಕವಾದ ಅಂಶಗಳೇನು?

ಜೆಡಿಎಸ್ ಪಕ್ಷ ರೈತರ ಪರವಾದ ಪಕ್ಷ. ಗ್ರಾಮೀಣ ರೈತರ ಸಾಲಮನ್ನಾ ಸೇರಿದಂತೆ ರೈತ ಪರವಾಗಿ ಹಲವು ಯೋಜನೆಗಳನ್ನು ದೇವೇಗೌಡರು, ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಜಾರಿಗೊಳಿಸಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಹಿಂದುಳಿದವರಿಗೆ ಮೀಸಲು ಕಲ್ಪಿಸಿದವರು ದೇವೇಗೌಡರು. ಪರಿಶಿಷ್ಟಪಂಗಡಕ್ಕೆ ಸೇರಿದ ನನಗೆ ಟಿಕೆಟ್ ಕೊಟ್ಟಿರುವುದು ಪಕ್ಷದ ಜಾತ್ಯಾತೀತ ನಿಲುವಿಗೆ ಸಂಕೇತ.

ಎಲ್ಲಾ ಜಾತಿ ಪಂಗಡದವರು ನನ್ನ ಬೆಂಬಲಕ್ಕೆ ನಿಂತಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿಗಳಾದವರಿಗೆ ಜಿಲ್ಲೆಯಲ್ಲಾದ ಕುತಂತ್ರದ ಸೋಲು ನನ್ನನ್ನು ಗೆಲ್ಲಿಸಬೇಕೆಂಬ ಛಲವನ್ನು ಜೆಡಿಎಸ್ ಬೆಂಬಲಿತರಲ್ಲಿ ಮೂಡಿಸಿದೆ.

4.ನಿಮ್ಮ ನೇರ ಪ್ರತಿಸ್ಪರ್ಧಿ ಯಾರು? ಎದುರಾಳಿ ಅಭ್ಯರ್ಥಿಗಳ ಕುರಿತು ನಿಮ್ಮ ಅಭಿಪ್ರಾಯವೇನು?
ಚುನಾವಣಾ ಅಖಾಡದಲ್ಲಿರುವ ಆರು ಮಂದಿಯೂ ಸ್ಪರ್ಧಿಗಳೇ. ಕಾಂಗ್ರೆಸ್, ಬಿಜೆಪಿ ಇಬ್ಬರು ಪ್ರಬಲ ಅಭ್ಯರ್ಥಿಗಳಾಗಿದ್ದು, ಎದುರಾಳಿ ಅಭ್ಯರ್ಥಿಗಳ ಬಗ್ಗೆ ಟೀಕಿಸುವುದಿಲ್ಲ. ಮೇಲ್ಮನೆಯಲ್ಲಿ ನಿಮ್ಮ ಪರ ಧ್ವನಿಯಾಗುವ ಕೆಲಸ ಮಾಡುವ ವ್ಯಕ್ತಿಗೆ ಮತ ಕೊಡಿ ಎಂದಷ್ಟೇ ಕೋರಿಕೊಳ್ಳುತ್ತೇನೆ.

5. ಮೇಲ್ಮನೆ ಸದಸ್ಯರಾದರೆ ನಿಮ್ಮ ಮುಂದಿನ ಕಾರ್ಯ ಯೋಜನೆಗಳೇನು?
ಅಧಿಕಾರ ಚಲಾಯಿಸಲು ವಿಧಾನಪರಿಷತ್ ಸದಸ್ಯರಾಗಲು ಸ್ಪರ್ಧಿಸಿಲ್ಲ. ಅಧಿಕಾರಯುತ ಹುದ್ದೆಯನ್ನೇ ತ್ಯಜಿಸಿರುವವನು ನಾನು. ಆದರೆ ಕೆಎಎಸ್ ಅಧಿಕಾರಿಯಾಗಿ ಆಡಳಿತದಲ್ಲಿ ಗಳಿಸಿರುವ ಅನುಭವ ಗ್ರಾಮ ಪಂಚಾಯಿತಿಗಳ ಬಲವರ್ದನೆ ಮಾಡಲು ನನಗೆ ಪೂರಕವಾಗಲಿದೆ. ಸರಕಾರದವಿವಿಧ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳು, ನಗರಸಂಸ್ಥೆಗಳಿಗೆ ಬರಬೇಕಾದ ಅನುದಾನ ಒದಗಿಸಿಕೊಡುವ ಜೊತೆಗೆ ಸದಸ್ಯರ ಅಹವಾಲುಗಳಿಗೆ ಸದಾ ಸ್ಪಂದಿಸುವೆ.
ನಿರೂಪಣೆ-ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link