ಬಿಎಸ್‍ಎನ್‍ಎಲ್ ಕಂಪನಿಗೆ 4 ಜಿ ಸೇವೆ ವಿಸ್ತರಣೆಗೆ ಒತ್ತಾಯ

0
20

ತುಮಕೂರು:

         ಬಿ.ಎಸ್.ಎನ್.ಎಲ್. ಕಂಪನಿಗೆ ಕೇಂದ್ರ ಸರ್ಕಾರವು 4 ಜಿ ಸೇವೆಗಳನ್ನು ಕೊಡಬೇಕು. ಎಲ್ಲ ಖಾಸಗಿ ಕಂಪನಿಗಳು ಇಂದು 4 ಜಿ ಸೇವೆಯನ್ನು ಕೊಡುತ್ತಿವೆ. ಬಿ.ಎಸ್.ಎನ್.ಎಲ್.ಗೆ ಈವರೆಗೂ ಕೊಟ್ಟಿರುವುದಿಲ್ಲ ಎಂದು ಬಿ.ಎಸ್.ಎನ್.ಎಲ್. ನೌಕರರ ಒಕ್ಕೂಟ ತಿಳಿಸಿದ್ದು, ಕೇಂದ್ರ ಸರ್ಕಾರ ಕೂಡಲೇ ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದೆ.

         24.2.2018 ರಂದು ನಡೆದ ಸಭೆಯಲ್ಲಿ ಕೇಂದ್ರ ಸಂಪರ್ಕ ಮಂತ್ರಿಯವರು 4 ಜಿ ತರಂಗಗಳನ್ನು ಬಿ.ಎಸ್.ಎನ್.ಎಲ್. ಸಂಸ್ಥೆಗೆ ಕೊಡಲು ದೂರ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಇದುವರೆಗೂ ಅದು ಕಾರ್ಯಗತವಾಗಿಲ್ಲ ಎಂದು ಸಂಘಟನೆ ತಿಳಿಸಿದೆ.

         1.1.2017 ರಿಂದ ಜಾರಿಯಾಗಬೇಕಿರುವ 3ನೇ ವೇತನ ಪರಿಷ್ಕರಣೆ ಜಾರಿಯಾಗದೆ ನೌಕರರು ಮಾನಸಿಕವಾಗಿ ಕುಗ್ಗಿದ್ದಾರೆ. ಕಂಪನಿಯ ಬೆಳವಣಿಗೆಗೆ, ಲಾಭ ಮಾಡಲು ಸಹಕಾರಿಯಾಗುವ ಮೂಲಭೂತ ಸರಕು ಸಾಮಗ್ರಿಗಳನ್ನು ಕೇಂದ್ರ ಸರ್ಕಾರ ಬಿ.ಎಸ್.ಎನ್.ಎಲ್. ಕಂಪನಿಗೆ ಕೊಡದೆ ಕಂಪನಿ ನಷ್ಟದ ಹಾದಿಯನ್ನು ತುಳಿಯಬೇಕಿದೆಯೇ ಹೊರತು ನಷ್ಟಕ್ಕೆ ನೇರವಾಗಿ ನೌಕರರನ್ನು ಹೊಣೆ ಮಾಡಲು ಸಾಧ್ಯವಿಲ್ಲ.

        2007 ರಲ್ಲಿ ಜಾರಿಯಾದ ವೇತನ ಪರಿಷ್ಕರಣೆಯ ಸಮಯದಲ್ಲಿ ಪಿಂಚಣಿ ಪರಿಷ್ಕರಣೆಯಾಗಿತ್ತು. ನಂತರದಲ್ಲಿ ಜಾರಿಯಾದ 7ನೇ ವೇತನ ಆಯೋಗವು ಬಿ.ಎಸ್.ಎನ್.ಎಲ್. ನೌಕರರಿಗೆ ಔಧ್ಯೋಗಿಕ ತುಟ್ಟಿಭತ್ಯೆ ಸಿಗುವ ಕಾರಣದಿಂದಾಗಿ ಪಿಂಚಣಿಯನ್ನು ಪರಿಷ್ಕರಿಸಲಿಲ್ಲ. ದೂರ ಸಂಪರ್ಕ ಇಲಾಖೆಯಿಂದ ನಿವೃತ್ತರಾದ ಬಿ.ಎಸ್.ಎನ್.ಎಲ್. ನೌಕರರಿಗೆ ಈಗ 1.1.2017 ರಿಂದ ಪಿಂಚಣಿ ಪರಿಷ್ಕರಣೆ ಆಗಬೇಕಿದೆ ಎಂಬ ವಿಷಯವೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತುಮಕೂರಿನಲ್ಲಿ ಬಿ.ಎಸ್.ಎನ್.ಎಲ್.ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾ ಮಹಾಪ್ರಬಂಧಕರಿಗೆ ಮನವಿ ಸಲ್ಲಿಸಿದರು.

         ಆಲ್ ಯೂನಿಯನ್ಸ್ ಅಂಡ್ ಅಸೋಸಿಯೇಷನ್ಸ್ ಆಫ್ ಬಿ.ಎಸ್.ಎನ್.ಎಲ್. ತುಮಕೂರು ಜಿಲ್ಲಾ ಸಂಚಾಲಕ ಎಚ್.ನರೇಶ್‍ರೆಡ್ಡಿ ನೇತೃತ್ವದಲ್ಲಿ ಬಿ.ಎಸ್.ಎನ್.ಎಲ್.ನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಡಿ.ಸಿ. ಕಛೇರಿ ಎದುರು ಸಭೆ ನಡೆಸಿದರು. ಈ ಜಾಥಾದಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ.ರಾಜಕುಮಾರ್, ಬಿ.ಕೆ.ಉಮೇಶ್, ಎಸ್.ಭರತ್ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಫ್.ಟಿ.ಇ., ಎಸ್.ಎನ್.ಇ.ಎ., ಬಿ.ಎಸ್.ಎನ್.ಎಲ್. ಎಂಪ್ಲಾಯೀಸ್ ಯೂನಿಯನ್ ಸಂಘಟನೆಗಳು ಪಾಲ್ಗೊಂಡಿದ್ದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here