ವಿಮರ್ಶೆ ಮರೆತ ಯುವ ಸಮೂಹ ದೇಶಭಕ್ತಿ ಹೆಸರಲ್ಲಿ ತಪ್ಪು ದಾರಿ ತುಳಿಯುತ್ತಿದೆ : ನಟರಾಜ್ ಹುಳಿಯಾರ್

ಚಿಕ್ಕನಾಯಕನಹಳ್ಳಿ
                   ರಂಗಭೂಮಿಯಿಂದ ದೇಹ ಹಾಗೂ ಮನಸ್ಸಿಗೆ ರಿಲೀಫ್ ದೊರೆಯುತ್ತದೆ. ರಂಗಕಲಾವಿದನೂ ಒಬ್ಬ ಶಿಲ್ಪಿಯ ರೀತಿ ಮೈ-ಮನಸ್ಸು ದುಡಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಚಿಂತಕ ನಟರಾಜ್ ಹುಳಿಯಾರ್ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ, ಶನಿವಾರ ಕನ್ನಡ ರಂಗಭೂಮಿ ವಿಶ್ವ ರಂಗಭೂಮಿಯ ಜತೆಯಲ್ಲಿ, ನಾಟಕಗಳ ಅನುಸಂಧಾನ, ಸಾಧ್ಯತೆಗಳು, ಸವಾಲುಗಳ ಬಗೆಗಿನ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಸಿ ಅವರು ಮಾತನಾಡಿದರು.
                     ರಂಗಭೂಮಿ ಯಾವ ಮುಲಾಜಿಗೂ ದಕ್ಕದ ನವಿಲ ನರ್ತನ ಇದ್ದಂತೆ. ಪ್ರಭುತ್ವವನ್ನು ಪ್ರಶ್ನಿಸುವ ಕೆಲಸವನ್ನು ಸದಾ ಮಾಡುತ್ತಲೇ ಬರುತ್ತಿದೆ. ರಾಜಕಾರಣದ ಟೊಳ್ಳುಗಳನ್ನು ರಂಗಭೂಮಿ ಪ್ರಶ್ನಿಸುತ್ತಲೇ ಬರುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೀದಿ ನಾಟಕಗಳು ಸರ್ವಾಧಿಕಾರಿ ಧೋರಣೆಗಳನ್ನು ಪ್ರಶ್ನಿಸಿದ ರೀತಿಯನ್ನು ಯಾರೂ ಮರೆಯುವಂತಿಲ್ಲ. ನಂತರ ಬಂದ ತಮಾಷಾ ಪ್ರಕಾರ ಸಮಾಜದ ಪೊಳ್ಳುಗಳನ್ನು ಬಿಂಬಿಸಿದ ರೀತಿಯೂ ಅನನ್ಯವಾದುದು. ಭಾರತದಲ್ಲಿ ಚಿಗುರುತ್ತಿರುವ ನವ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸುವ ಸಾಧ್ಯತೆ ರಂಗಭೂಮಿಗೆ ಇದೆ. ರಂಗಭೂಮಿಯ ಸಾಧ್ಯತೆಗಳನ್ನು ಮರು ಚರ್ಚೆಗೆ ಒಳಪಡಿಸಲು ಸಕಾಲ ಇದಾಗಿದೆ ಎಂದರು.
ವಿಶ್ವ ರಂಗಭೂಮಿಯ ಜತೆಗೆ ಭಾರತ ಹಾಗೂ ಕರ್ನಾಟಕದ ರಂಗಭೂಮಿ ಸದಾ ಅನುಸಂಧಾನ ನಡೆಸುತ್ತಲೇ ಬರುತ್ತಿದೆ. ಯುರೋಪ್ ರಂಗಭೂಮಿಯಿಂದ ಕನ್ನಡಕ್ಕೆ ಅನೇಕ ಕೃತಿಗಳು ತರ್ಜುಮೆಗೊಂಡಿವೆ. ಬಸಪ್ಪಶಾಸ್ತ್ರೀ, ಬಿಎಂಶ್ರೀ, ಲಂಕೇಶ್, ಮಾಸ್ತಿ ಮುಂತಾದವರು ಗ್ರೀಕ್ ರಂಗ ಪ್ರಯೋಗಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿದವರಲ್ಲಿ ಮುಖ್ಯವಾದವರು ಎಂದರು.
                     ಗ್ರೀಕ್ ರಂಗಭೂಮಿಯ ಪ್ರಭಾವದಿಂದ ಷೇಕ್ಸ್‍ಪಿಯರ್, ಶ್ರೇಷ್ಠ ನಾಟಕಕಾರನಾಗಿ ರೂಪಗೊಂಡರು. ಅದೇ ರೀತಿ ಷೇಕ್ಸ್‍ಪಿಯರ್‍ನ ನಾಟಕಗಳ ಪ್ರಭಾವ ಭಾರತೀಯ ಹಾಗೂ ಕನ್ನಡದ ರಂಗಭೂಮಿಯ ಮೇಲೆ ಗಾಢವಾಗಿ ಇದೆ ಎಂದರು.
ಬಾವಿಕಟ್ಟೆಯಲ್ಲಿ ಹೆಂಗಸರು, ಬೀಡಿಕಟ್ಟೆಯಲ್ಲಿ ಗಂಡಸರು ಮಾತನಾಡುವ ಶೈಲಿಯನ್ನು ಫೇಸ್‍ಬುಕ್ ಅನುಕರಿಸುತ್ತಿದೆ. ಭಾಷೆ, ಆಲೋಚನೆಗೆ ಎಲ್ಲಿ ಕಡಿವಾಣ ಇರುವುದಿಲ್ಲವೋ, ಅದು ಪಶು ಸದೃಶ ಸಂಸ್ಕತಿಯನ್ನು ಸೃಷ್ಟಿಸುತ್ತದೆ. ಮಾನವೀಯತೆಯನ್ನು ಮರೆತ ಮೃಗೀಯ ಸಂಸ್ಕøತಿಯನ್ನು ಫೇಸ್‍ಬುಕ್ ವಿಸ್ತರಿಸುತ್ತಿದೆ. ಇದನ್ನು ವಿಮರ್ಶೆ ಮಾಡಲು ಹೋಗದ ಯುವ ಸಮೂಹ ಸಂಸ್ಕøತಿ ಹಾಗೂ ದೇಶಭಕ್ತಿಯ ಹೆಸರಿನಲ್ಲಿ ತಪ್ಪು ದಾರಿ ತುಳಿಯುತ್ತಿದೆ. ಫೇಸ್‍ಬುಕ್ ಹಾಗೂ ವಾಟ್ಸ್ ಆಪ್‍ಗಳಲ್ಲಿ ಮುಖಕ್ಕೆ ಮಸಿ ಬಳಿಯುವುದೇ ದೊಡ್ಡ ಕೆಲಸವಾಗಿದೆ. ಆಲೋಚನೆಗೆ ನಿಯಂತ್ರಣವಿಲ್ಲದೆ ಹೇಳುವುದು ಪ್ರಾಣಿಗಳು ಮಾಡುವ ಕೆಲಸ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಯೋಚಿಸದೆ ಬಾಯಿಗೆ ಬಂದದ್ದನ್ನು ಹೇಳುವ ಹಾಗೂ ಬೇರೆಯವರ ಆಲೋಚನೆಗೆ ದುಷ್ಟತನವನ್ನು ವರ್ಗಾಯಿಸುವ ಕೆಲಸ ನವ ಮಾಧ್ಯಮಗಳಲ್ಲಿ ನಡೆಯುತ್ತಿದೆ ಎಂದು ಚಿಂತಕ ನಟರಾಜ್ ಹುಳಿಯಾರ್ ಹೇಳಿದರು.
                    ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕನ್ನಡ ರಂಗಭೂಮಿ ಕ್ರಿಯಾಶೀಲ ಕಾರ್ಯಗಳಿಗೆ ಸದಾ ಸಿದ್ಧವಾಗಿದೆ. ಹಳ್ಳಿಗಳಲ್ಲಿ ಅನಕ್ಷರಸ್ಥರು ನಾಟಕಗಳನ್ನು ಆಸಕ್ತಿಯಿಂದ ಕಲಿತ ಕಾರಣದಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ರಂಗಕಲೆ ಜೀವಂತವಾಗಿದೆ. ರಂಗಕಲೆಯನ್ನು ವಿಮರ್ಶಾ ಮಾಧ್ಯಮವಾಗಿ ಬೆಳೆಸುವ ಕಾರ್ಯ ನಡೆಯಬೇಕು ಎಂದರು.
                    ರಂಗನಿರ್ದೇಶಕ-ಚಿಂತಕ ನಟರಾಜ್‍ಹೊನ್ನವಳ್ಳಿ ಮಾತನಾಡಿ, ಆಧುನಿಕ ರಂಗಭೂಮಿ-ಪಠ್ಯ ಸಿದ್ಧತೆ, ನಟನೆ, ತಾಲೀಮು, ಪ್ರಯೋಗ ವಿಷಯವಾಗಿ ಮಾತನಾಡಿ, ಕನ್ನಡ ರಂಗಭೂಮಿ ಅತಿಯಾದ ಸಾಹಿತ್ಯ ಹೊತ್ತುಕೊಂಡು ಭಾರವಾಗಿದೆ. ವಿನ್ಯಾಸ ಕೇಂದ್ರೀಕೃತವಾಗಿ ಅಲ್ಲದೆ ನಟ ಕೇಂದ್ರೀಕೃತವಾಗಿ ರಂಗಭೂಮಿಯನ್ನು ನೋಡಬೇಕು. ನಾಟ್ಯಶಾಸ್ತ್ರದ 37 ನೆ ಅಧ್ಯಾಯದಲ್ಲಿ ಹೆಚ್ಚು ಅಧ್ಯಾಯಗಳು ನಟನಿಗೆ ಸಂಬಂಧಿಸಿವೆ. ರಂಗಭೂಮಿಯನ್ನು ಮನರಂಜನೆಗೆ ಮಾತ್ರ ನೋಡದೆ, ಸಮಾಜದ ವಿಶ್ಲೇಷಣೆ ಮಾಡಲು ಉಪಯೋಗಿಸಬೇಕು. ಕನ್ನಡ ರಂಗಭೂಮಿಗೆ ತನ್ನದೇ ಮೀಮಾಂಸೆ ಸೃಷ್ಟಿಸುವ ಅಗತ್ಯ ಇದೆ. ರಂಗಭೂಮಿ ಕ್ಷಣಿಕ ಕಲೆ ಅಲ್ಲ ಎಂದರು.
ಲೇಖಕಿ ಡಾ.ಬಿ.ಎನ್.ಸುಮಿತ್ರಾಬಾಯಿ ರಂಗಭೂಮಿ ಮತ್ತು ಸ್ತ್ರೀ ಲೋಕ ವಿಚಾರವಾಗಿ ಮಾತನಾಡಿ, ರಂಗಭೂಮಿಯಲ್ಲಿ ಸ್ತ್ರೀಯನ್ನು ಎರಡನೇ ದರ್ಜೆಯ ಪ್ರಜೆಯನ್ನಾಗೆ ನೋಡಲಾಗಿದೆ. ಸ್ತ್ರೀ ಚಿಂತನೆ ಹಾಗೂ ಸ್ತ್ರೀ ಸಾಧ್ಯತೆಯನ್ನು ಹೇಳುವ ಕೃತಿಗಳನ್ನು ರಂಗಕ್ಕೆ ತರುವ ಪ್ರಯತ್ನ ಇನ್ನೂ ನಡೆಯಬೇಕಿದೆ. ಸ್ತ್ರೀ ತಲ್ಲಣಗಳು ಹಾಗೂ ಮಾತೃತ್ವದ ಅನಾವರಣ ರಂಗದಮೇಲೆ ಇನ್ನೂ ಅನಾವರಣಗೊಳ್ಳಬೇಕಿದೆ ಎಂದರು.
ನವೋದಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್, ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ನವೋದಯ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಶಿವಯೋಗಿ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link