ಬುಗುಡನಹಳ್ಳಿ: ಪೂರ್ಣ ಮಟ್ಟ ಭರ್ತಿಗೆ ಕೋರಿಕೆ
ತುಮಕೂರು
ವಿಶೇಷ ವರದಿ:ಆರ್.ಎಸ್.ಅಯ್ಯರ್
ತುಮಕೂರು ನಗರಕ್ಕೆ ಹೇಮಾವತಿ ನೀರನ್ನು ಪೂರೈಸುವ ಬುಗುಡನಹಳ್ಳಿಯ ‘ಹೇಮಾವತಿ ಜಲಸಂಗ್ರಹಾಗಾರ’ಕ್ಕೆ ಹೇಮಾವತಿ ನಾಲೆಯಿಂದ ಅ.1ರ ಸಂಜೆಯಿಂದ ಮತ್ತೆ ನೀರು ಹರಿಯತೊಡಗಿದೆ. ಇತ್ತೀಚೆಗೆ ಜಲಸಂಗ್ರಹಾಗಾರದಲ್ಲಿ ಹೂಳೆತ್ತುವ ಕಾರ್ಯ ಭಾಗಶಃ ಆಗಿದ್ದು, ಇದರಿಂದ ಈ ಬಾರಿ 42 ಎಂ.ಸಿ.ಎಫ್.ಟಿ.ಯಷ್ಟು ಪ್ರಮಾಣದ ನೀರು ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ. ಈ ಮಧ್ಯೆ ತುಮಕೂರು ಮಹಾನಗರ ಪಾಲಿಕೆಯು ಈ ವರ್ಷ ಜಲಸಂಗ್ರಹಾಗಾರವನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಿಕೊಂಡಿರುವ ಆಶಾದಾಯಕ ಬೆಳವಣಿಗೆಗಳು ನಡೆದಿವೆ.
ಸಂಪೂರ್ಣ ಖಾಲಿಯಾಗಿದ್ದ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಈ ಹಿಂದೆ ಹೇಮಾವತಿ ನೀರು ನಾಲೆಯ ಮೂಲಕ ಹರಿದುಬಂತು. ಅರ್ಧ ಭಾಗ ತುಂಬುವಷ್ಟರಲ್ಲಿ ನೀರನ್ನು ನಿಲುಗಡೆಗೊಳಿಸಿ, ಕುಣಿಗಲ್ ಕಡೆಗೆ ಹರಿಸಲಾಯಿತು. ಇತ್ತ ಬುಗುಡನಹಳ್ಳಿ-ನರಸಾಪುರ ಕೆರೆಯಿಂದ ಹೆಬ್ಬಾಕ ಕೆರೆಗೆ ನೀರನ್ನು ತುಂಬಿಸುವ ಕೆಲಸ ಆರಂಭಿಸಲಾಯಿತು. ಈಗಲೂ ಅದು ಮುಂದುವರೆದಿದೆ. ಇತ್ತ ನಾಲೆಯಲ್ಲೂ ನೀರು ಅತಿ ಕಡಿಮೆ ಪ್ರಮಾಣದಲ್ಲಿತ್ತು. ಮತ್ತೊಮ್ಮೆ ನಾಲೆಯಲ್ಲಿ ನೀರು ಹರಿದುಬರುವ ನಿರೀಕ್ಷೆ ಇತ್ತು. ಅದರಂತೆ ಅಕ್ಟೋಬರ್ 1 ರ ಸಂಜೆಯಿಂದ ಮತ್ತೆ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ನೀರನ್ನು ಹರಿಸಲಾಗುತ್ತಿದೆ. ಲೆಕ್ಕಾಚಾರದ ಪ್ರಕಾರ ಮುಂದಿನ 10 ದಿನಗಳ ಕಾಲ ನೀರು ಬರಬಹುದು. ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದಲ್ಲಿ ಭಾರಿ ಮಳೆಯ ಪರಿಣಾಮ ಅಧಿಕ ಪ್ರಮಾಣದಲ್ಲೇ ನೀರು ಇರುವುದರಿಂದ ಈ ಬಾರಿ ನಾಲೆಯಲ್ಲಿ ನೀರು ಹರಿಯಲು ತೊಡಕಾಗದು ಎಂದು ಭಾವಿಸಲಾಗಿದೆ.
ಹೆಚ್ಚುವರಿ ನೀರು ಸಂಗ್ರಹ
ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ವತಿಯಿಂದ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದ್ದು, ಆ ಕಾಮಗಾರಿ ಭಾಗಶಃ ನಡೆದಿದೆ. ಆದರೆ ಈಗ ಆಗಿರುವ ಹೂಳೆತ್ತುವ ಕಾರ್ಯದಿಂದ ಪ್ರಸ್ತುತ ಸುಮಾರು 42 ಎಂ.ಸಿ.ಎಫ್.ಟಿ.ಯಷ್ಟು ನೀರನ್ನು ಹೆಚ್ಚುವರಿಯಾಗಿ ಸಂಗ್ರಹಿಸಬಹುದಾಗಿದೆ ಎಂದು ಮಂಡಲಿ ಹೇಳಿದ್ದು, ಇದು ತುಮಕೂರು ನಗರದ ಪಾಲಿಗೆ ಆಶಾದಾಯಕ ವಿಷಯವೇ ಆಗಿದೆ.
ಚಿಕ್ಕಕೆರೆಯಲ್ಲಿ ಸರಾಸರಿ ಒಂದೂವರೆ ಮೀಟರ್ ಹಾಗೂ ದೊಡ್ಡಕೆರೆಯಲ್ಲಿ ಸರಾಸರಿ 3 ಮೀಟರ್ನಷ್ಟು ಆಳಗೊಳಿಸಲಾಗಿದೆ. ಹೂಳು ತೆಗೆದಿರುವ ಭಾಗದಲ್ಲಿ ಇಂಗುವಿಕೆಯನ್ನು ತಡೆಗಟ್ಟಲು, ಹೂಳು ತೆಗೆದಿರುವ ಸುಮಾರು 120 ಎಕರೆಯಲ್ಲಿ ಸುಮಾರು 51 ಎಕರೆಯಷ್ಟು ‘‘ಕ್ಲೇ ಬ್ಲಾಂಕೆಟ್’’ ನಿರ್ಮಿಸಲಾಗಿದೆ ಎಂದು ಸಹ ಮಂಡಲಿಯು ಹೇಳಿದೆ.
ಕೆರೆಯ ಏರಿಯಿಂದ 10 ಮೀಟರ್ ಬಿಟ್ಟು ಹೂಳನ್ನು ತೆಗೆದಿರುವುದರಿಂದ ಏರಿಗೆ ಯಾವುದೇ ತೊಂದರೆ ಇಲ್ಲ . ಕೆರೆಯ ಮುಖ್ಯ ಏರಿಯಲ್ಲಿದ್ದ 4 ಕಡೆ ಸೋರುವಿಕೆ ಜಾಗದಲ್ಲಿ ಕಪ್ಪು ಮಣ್ಣನ್ನು ಹಾಕಿ, ಬೆಂಟೋನೈಟ್ ಹಾಕಲಾಗಿದೆ. ಪಾಲಿಕೆಯ ವತಿಯಿಂದ ಮರಳಿನ ಚೀಲಗಳನ್ನು ಹಾಕಿರುವುದರಿಂದ ಕೆರೆಗೆ ನೀರನ್ನು ತುಂಬಿಸಬಹುದಾಗಿದೆ ಎಂದು ಮಂಡಲಿಯು ಸ್ಪಷ್ಟಪಡಿಸಿದೆ.
ಪೂರ್ಣ ಮಟ್ಟಕ್ಕೆ ತುಂಬಿಸಿ
ಮಂಡಲಿ ನೀಡಿರುವ ಈ ತಾಂತ್ರಿಕ ವರದಿ ಆಧರಿಸಿ ಹಾಗೂ ಸ್ಥಳಪರಿಶೀಲನೆ ನಡೆಸಿರುವ ತುಮಕೂರು ಮಹಾನಗರ ಪಾಲಿಕೆಯು, ಇದೀಗ ಬುಗುಡನಹಳ್ಳಿ ಜಲಸಂಗ್ರಹಾಗಾರ ಸುಸ್ಥಿತಿಯಲ್ಲಿರುವುದರಿಂದ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಹೇಮಾವತಿ ನೀರನ್ನು ಹರಿಸಿ, ಭರ್ತಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದೆ.
ಇವೆಲ್ಲ ಪ್ರಕ್ರಿಯೆಗಳ ನಡುವೆ ಅ. 1 ರಿಂದ ಹೇಮಾವತಿ ನಾಲೆಯಿಂದ ಮತ್ತೆ ನೀರು ಹರಿಯತೊಡಗಿದ್ದು, ಈ ಬಾರಿ ಜಲಸಂಗ್ರಹಾಗಾರ ಭರ್ತಿ ಆಗುವ ಭರವಸೆ ವ್ಯಕ್ತವಾಗಿದೆ.
ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಪ್ರಸ್ತುತ ನಾಲ್ಕೂವರೆಯಿಂದ 5 ಅಡಿಗಳಷ್ಟು ಪ್ರಮಾಣದ ನೀರು ಲಭ್ಯವಿದೆ. ಇದನ್ನು 12 ಅಡಿಗಳಿಗೆ ಏರಿಸಬೇಕೆಂಬುದು ಪಾಲಿಕೆಯ ಈಗಿನ ಬೇಡಿಕೆಯಾಗಿದೆ. ಬುಗುಡನಹಳ್ಳಿಯಲ್ಲಿ ಸಾಧಾರಣವಾಗಿ 240 ಎಂ.ಸಿ.ಎಫ್.ಟಿ.ಯಷ್ಟು ನೀರು ಸಂಗ್ರಹವಾಗುತ್ತಿದ್ದು, ಪ್ರಸ್ತುತ ಹೂಳೆತ್ತಿರುವುದರಿಂದ ಈ ಪ್ರಮಾಣ 282 ಎಂ.ಸಿ.ಎಫ್.ಟಿ.ಗೆ ಏರಿಕೆಯಾಗಲಿದೆ.
ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೊಂದಿಕೊಂಡಂತೆಯೇ ನರಸಾಪುರ ಕೆರೆ ಇದೆ. ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ನೀರು ಶೇಖರಣೆಯಾದಂತೆ ಆ ನೀರು ಅಕ್ವಾಡೆಕ್ಟ್ ಮೂಲಕ ನರಸಾಪುರ ಕೆರೆಯತ್ತ ಹರಿದುಬರುತ್ತದೆ. ನರಸಾಪುರ ಕೆರೆಯ ಅಂಚಿನಲ್ಲಿ ಪಂಪ್ಹೌಸ್ ಇದೆ. ಇಲ್ಲಿ 177 ಎಚ್.ಪಿ. ಸಾಮರ್ಥ್ಯದ ಎರಡು ಬೃಹತ್ ಮೋಟಾರ್-ಪಂಪುಗಳಿವೆ. ದಿನದ 24 ಗಂಟೆಗಳು ಹಾಗೂ ವಾರದ ಏಳೂ ದಿನಗಳು ಇವು ಚಾಲನೆಯಲ್ಲಿದ್ದು, ಇಲ್ಲಿಂದ 1.8 ಕಿ.ಮೀ. ದೂರದ ಹೆಬ್ಬಾಕ ಕೆರೆಗೆ ಪೈಪ್ ಮೂಲಕ ನೀರು ಪಂಪ್ ಆಗುತ್ತಿದೆ. ಅಲ್ಲೂ ನೀರನ್ನು ಸಂಗ್ರಹಿಸಿ ಇಡಲಾಗುತ್ತ್ತಿದೆ. ಹೆಬ್ಬಾಕ ಕೆರೆಯಿಂದ ಇದೇ ಪೈಪ್ ಮೂಲಕ ಗುರುತ್ವಾಕರ್ಷಣ ಬಲದಲ್ಲಿ ನರಸಾಪುರ ಕೆರೆಗೆ ನೀರನ್ನು ಬೇಕೆನಿಸಿದಾಗ ವಾಪಸ್ ಹರಿಸಿಕೊಳ್ಳಬಹುದಾಗಿದೆ. ಇವೆಲ್ಲ ಕಾರಣಗಳಿಂದ ಮುಂದಿನ ಏಳೆಂಟು ತಿಂಗಳುಗಳ ಕಾಲ ತುಮಕೂರು ನಗರದಲ್ಲಿ ನೀರನ ಸಮಸ್ಯೆ ಇರದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ಕುಪ್ಪೂರು ಬಳಿ ಜಾಕ್ವೆಲ್
ಇದರ ಮೂಲಕ ನಗರದ ಶಿರಾಗೇಟ್ ಹೊರವಲಯದ ಪಿ.ಎನ್.ಆರ್. ಪಾಳ್ಯದಲ್ಲಿರುವ ಶುದ್ಧ ನೀರಿನ ಯಂತ್ರಾಗಾರಕ್ಕೆ ಹೇಮಾವತಿ ನೀರು ಹರಿದುಬರುತ್ತದೆ. ಅಲ್ಲಿ ಶುದ್ಧೀಕರಣಗೊಂಡ ನೀರು ತುಮಕೂರು ನಗರಕ್ಕೆ ಸರಬರಾಜಾಗುತ್ತದೆ. ಬುಗುಡನಹಳ್ಳಿ ಜಲಸಂಗ್ರಹಾಗಾರದ ಬಳಿಯೇ ಬಹುತೇಕ ನಿರುಪಯುಕ್ತವಾಗಿದ್ದ ಶುದ್ಧ ನೀರಿನ ಯಂತ್ರಾಗಾರವನ್ನು ಇದೀಗ ಮತ್ತೊಮ್ಮೆ ಪುನರ್ ನವೀಕರಣಗೊಳಿಸಿ, ಚಾಲನೆಗೊಳಿಸಲಾಗಿದೆ. 240 ಎಚ್.ಪಿ. ಸಾಮರ್ಥ್ಯದ ಮೂರು ಸಬ್ ಮರ್ಸಿಬಲ್ ಮೋಟಾರ್ ಪಂಪ್ಗಳನ್ನು ಇಲ್ಲಿ ಅಳವಡಿಸಲಾಗಿದೆ.
ಇಲ್ಲೂ ಸಹ ನೀರು ವೈಜ್ಞಾನಿಕ ವಿಧಾನದಲ್ಲಿ ಶುದ್ಧೀಕರಣಗೊಂಡು ಅಲ್ಲಿಂದ ನೇರವಾಗಿ ನಗರದ ಸಂತೆಪೇಟೆ ಮೂಲಕ ನಗರಕ್ಕೆ ಪೂರೈಕೆ ಆಗಲಾರಂಭಿಸಿದೆ. ಇವೆರಡರ ಮಧ್ಯದಲ್ಲಿ ಮತ್ತೊಂದು ಜಾಕ್ವೆಲ್ ಅನ್ನು ನಿರ್ಮಿಸಲಾಗುತ್ತಿದೆ. ಬುಗುಡನಹಳ್ಳಿ ಕೆರೆ ಕೋಡಿ ಬಳಿ ಈ ಹೊಸ ಜಾಕ್ವೆಲ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇಲ್ಲಿಂದ ನೇರವಾಗಿ ಶಿರಾಗೇಟ್ ಮೂಲಕ ತುಮಕೂರು ಅಮಾನಿಕೆರೆಗೆ ಹೇಮಾವತಿ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.
ಅಮಾನಿಕೆರೆಯಿಂದ ಬೇಕಾದಾಗ ನೀರನ್ನು ಪಿ.ಎನ್.ಆರ್. ಪಾಳ್ಯದ ಶುದ್ಧ ನೀರಿನ ಯಂತ್ರಾಗಾರಕ್ಕೆ ಪಂಪ್ ಮಾಡಿಕೊಂಡು ಅಲ್ಲಿ ಶುದ್ಧೀಕರಿಸಿ ಮತ್ತೆ ನಗರಕ್ಕೆ ಹರಿಸಲು ಈ ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ನಗರದಲ್ಲಿ ಬಹುನಿರೀಕ್ಷಿತ 24/7 ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಯೋಜನೆಯು ಅನುಷ್ಠಾನದ ಹಂತದಲ್ಲಿರುವುದರಿಂದ, ಇವೆಲ್ಲ ಬೆಳವಣಿಗೆಗಳು ರಭಸ ಪಡೆದಿವೆ.