ವಿವಿಧ ಬೇಡಿಕೆಗಳಿಗಾಗಿ ಅನಿರ್ಧಿಷ್ಟಾವಧಿ ಧರಣಿ ಆರಂಭ

ದಾವಣಗೆರೆ:

            ಅರಣ್ಯ ಭೂಮಿ ಮತ್ತು ಗೋಮಾಳಗಳಲ್ಲಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ, ತಕ್ಷಣವೇ ಸಾಗುವಳಿ ಪತ್ರ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ಸಾಗುವಳಿದಾರರು ನಗರದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

           ನಗರದ ಅಂಬೇಡ್ಕರ್ ವೃತ್ತದಿಂದ ಡಿಎಸ್‍ಎಸ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಬಗರ್‍ಹುಕುಂ ಸಾಗುವಳಿದಾರರು, ಸಾಗುವಳಿ ಪತ್ರ ನೀಡಲು ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಾ ತಹಶೀಲ್ದಾರ್ ಕಚೇರಿಗೆ ತೆರಳಿ, ಕಚೇರಿಯ ಎದುರು ಬೇಡಿಕೆ ಈಡೇರುವ ವರೆಗೂ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

           ಈ ಸಂದರ್ಭದಲ್ಲಿ ಡಿಎಸ್‍ಎಸ್‍ನ ರಾಜ್ಯ ಸಂಘಟನಾ ಸಂಚಾಲಕ ಕಬ್ಬಳ್ಳಿ ಮೈಲಪ್ಪ ಮಾತನಾಡಿ, ಸುಮಾರು ಕಳೆದ 20 ವರ್ಷಗಳ ಹಿಂದೆಯೇ ದಾವಣಗೆರೆ ತಾಲ್ಲೂಕಿನಾದ್ಯಂತ ಸುಮಾರು 4,500 ಜನ ಬಗರ್‍ಹುಕುಂ ಸಾಗುವಳಿದಾರರು, ಸಾಗುವಳಿ ಪತ್ರಕ್ಕಾಗಿ ಅರ್ಜಿಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಈ ನಾಲ್ಕೂವರೆ ಸಾವಿರ ಸಾಗುವಳಿಲದಾರರ ಪೈಕಿ ಬೆಳೆಣಿಕೆಯಷ್ಟು ಸಾಗುವಳಿದಾರರಿಗೆ ಮಾತ್ರ ಹಕ್ಕುಪತ್ರ ನೀಡಿ, ಇನ್ನೂ ಕೆಲವರಿಗೆ ಸಾಗುವಳಿ ಪತ್ರವನ್ನೇ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೇ, ಶಾಸಕರ ಕಡೆ ಬೊಟ್ಟು ಮಾಡುತ್ತಿದ್ದಾರೆಂದು ಆರೋಪಿಸಿದರು.

         ಇನ್ನೂ ತಾಲೂಕಿನ ಹಲವು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವೇ ಇಲ್ಲವಾಗಿದೆ. ಆದ್ದರಿಂದ ದಲಿತ ವರ್ಗಕ್ಕೆ ಸೇರಿದವರು ಮೃತಪಟ್ಟರೆ, ಕೆರೆ, ಹಳ್ಳ, ಇಲ್ಲವೇ ರಸ್ತೆಯ ಬದಿಯಲ್ಲಿ ಹೂಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ಸಹ ಇನ್ನೂ ಅನೇಕ ದಲಿತ ಕುಟುಂಬಗಳು ವಸತಿ ಸೌಲಭ್ಯವಿಲ್ಲದೇ, ನರಕಯಾತನೆ ಅನುಭವಿಸುತ್ತಿದ್ದಾರೆ. ಎರಡ್ಮೂರು ಕುಟುಂಬಗಳು ಒಂದೇ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆಂದು ಅಳಲು ತೋಡಿಕೊಂಡರು.

         ತಕ್ಷಣವೇ ಅಧಿಕಾರಿಗಳು ಬಗರ್‍ಹುಕುಂ ಸಾಗುವಳಿದಾರರಿಗೆ ಸಾಗುವಳಿಪತ್ರ ನೀಡಲು ಇರುವ ಸಮಸ್ಯೆಯನ್ನು ಇತ್ಯರ್ಥ ಪಡಿಸಿ, ಇನ್ನುಳಿದ ಎಲ್ಲಾ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ದಲಿತರಿರುವ ಪ್ರತಿಗ್ರಾಮಗಳಲ್ಲೂ ದಲಿತರಿಗೆ ಸ್ಮಾಶನ ನಿರ್ಮಿಸಿಕೊಡಬೇಕು. ವಸತಿಹೀನ ದಲಿತರಿಗೆ ನಿವೇಶನ ನೀಡಿ, ಸೂರು ಕಲ್ಪಿಸಬೇಕು. ಆನಗೋಡು ಗ್ರಾಮದ ಗುಡಿಸಲು ನಿವಾಸಿಗಳಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು. ತಾಲ್ಲೂಕಿನ ಲೋಕಿಕೆರೆ, ಗುಮ್ಮನೂರು, ಗುಡಾಳ್, ಕ್ಯಾತನಹಳ್ಳಿ, ಮುದಹದಡಿ, ಕೋಲ್ಕುಂಟೆ ಮುಂತಾದ ಗ್ರಾಮಗಳಲ್ಲಿ ಸುಮಾರು 80 ವರ್ಷಗಳಿಂದ ವಾಸಿಸುತ್ತಿರುವ ಅಲ್ಲಿನ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಬೇಕು.

           ತಾಲ್ಲೂಕಿನ ಎಲೆ ಬೇತೂರು ಗ್ರಾಮದ ವೃತ್ತದಲ್ಲಿ ಶ್ರೀಬಸವೆಶ್ವರ ಪ್ರತಿಮೆ ಸ್ಥಾಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲಿಯ ವರೆಗೂ ನಮ್ಮ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೂವಿನಮಡು ಅಂಜಿನಪ್ಪ, ಗುಮ್ಮನೂರು ರಾಮಚಂದ್ರ, ಎನ್.ವಾಸುದೇವ್, ರವಿ, ಕಂಚಿಕೆರೆ ಕೆಂಚಪ್ಪ, ಮೆಳ್ಳೆಕಟ್ಟೆ ಪರಶುರಾಮ್, ಆನಗೋಡು ಸುರೇಶ್, ಸತೀಶ್ ಮಲೇಮಾಚೀಕೆರೆ, ಅಲಗವಾಡಿ ಲಿಂಗರಾಜು, ಮಂಜಪ್ಪ ಪುಣಬಗಟ್ಟಿ, ಪುಣಬಗಟ್ಟಿ ನಿಂಗಪ್ಪ, ರಾಜನಹಳ್ಳಿ ಮಂಜುನಾಥ್ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap