ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಾಡಾ ಕಚೇರಿಗೆ ಮುತ್ತಿಗೆ

ದಾವಣಗೆರೆ:

   ಹಲವು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದ ನಾಡಾ ಕಚೇರಿಗೆ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಂತೇಬೆನ್ನೂರು ಗ್ರಾಮದ ಪ್ರಮುಖ ವೃತ್ತದಿಂದ ಮೆರವಣಿಗೆ ಹೊರಟ ರೈತರು ನಾಡ ಕಚೇರಿಗೆ ತೆರಳಿ, ಮುತ್ತಿಗೆ ಹಾಕಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.

  ಸಂತೇಬೆನ್ನೂರು ಹೋಬಳಿಯ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ನಾಡ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ನಾಡ ಕಚೇರಿಯಲ್ಲಿ ನಡೆಯುತ್ತಿರುವ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಶಾಸಕರು ಹೋಬಳಿ ಕೇಂದ್ರದಲ್ಲಿ ಕಚೇರಿ ನಿರ್ಮಿಸಿ, ವಾರಕ್ಕೊಮ್ಮೆ ಜನರ ಅಹವಾಲು ಆಲಿಸಬೇಕು. ನಾಡ ಕಚೇರಿಗೆ ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ, ತಹಸೀಲ್ದಾರರು ತಿಂಗಳಿಗೆ ಕನಿಷ್ಟ 2 ಸಲ, ಭೇಟಿ ನೀಡುವ ಜೊತೆಗೆ ಹೋಬಳಿಯ ರೈತರು, ಜನರ ಸಮಸ್ಯೆ ಆಲಿಸಬೇಕೆಂದು ಆಗ್ರಹಿಸಿದರು.
ಹೋಬಳಿ ಕೇಂದ್ರದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರಿ ಜಮೀನಿನಲ್ಲಿ ನಿವೇಶನ ಮಂಜೂರು ಮಾಡಬೇಕು. ನಾಡ ಕಚೇರಿಯಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಅವುಗಳನ್ನು ಕಾಲಕಾಲಕ್ಕೆ ಸಮರ್ಪಕವಾಗಿ ತಲುಪಿಸುವತ್ತ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕು. ಹೋಬಳಿ ಕಂದಾಯ ಅಧಿಕಾರಿಗಳ ಲಂಚಾವತಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನ ಸಾಮಾನ್ಯರು, ರೈತರು, ಸಾರ್ವಜನಿಕರು ಇಂತಹ ಭ್ರಷ್ಟ ಅಧಿಕಾರಿ, ಸಿಬ್ಬಂದಿಯಿಂದ ಎದುರಿಸುತ್ತಿರುವ ಸಮಸ್ಯೆ, ತೊಂದರೆ ನಿವಾರಣೆ ಮಾಡಬೇಕು. ನಿರಂತರ ಮಳೆಯಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾನಿರತರು ಆಗ್ರಹಿಸಿದರು.

   ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಅರಸಿನಹಾಳ್ ಸಿದ್ದಪ್ಪ, ಮುಖಂಡರುಗಳಾದ ಎಸ್.ಆರ್.ರವಿಕುಮಾರ ಯಲೋದಹಳ್ಳಿ, ಮಲ್ಲಿಗೆರೆ ಪ್ರಕಾಶ, ಉಪ ನಾಯಕನಹಳ್ಳಿ ಉಮೇಶ, ಬಸವರಾಜ ಗುಮ್ಮನೂರು, ಲೋಕೇಶ ನಾಯ್ಕ, ಅಸ್ತಾಪನಹಳ್ಳಿ ಶರಣಪ್ಪ, ರುದ್ರಾಪುರ ಶಿವಣ್ಣ, ಮಲ್ಲಿಗೇನಹಳ್ಳಿ ಹನುಮಂತ, ವೆಂಕಟೇಶ, ದೊಡ್ಡಮಲ್ಲಾಪುರ ಕರಿಬಸಪ್ಪ, ಸೋಮಣ್ಣ, ಶಿವಣ್ಣ, ಪರಶುರಾಮಪ್ಪ, ಲೋಕೇಶ, ಸಿ.ಕೆ.ರಂಗಸ್ವಾಮಿ, ಎ.ಎಸ್.ನಾಗರಾಜ, ಎಂ.ಬಸಪ್ಪ, ಎಂ.ಆನಂದಪ್ಪ, ಕೆ.ಎಚ್.ನಾಗಪ್ಪ, ಚಿಕ್ಕಕೋಗಲೂರು ಮಂಜುನಾಥ, ಸಿ.ಎಚ್.ಅಶೋಕ, ಎಂ.ಆರ್.ರಾಜಶೇಖರಪ್ಪ, ಟಿ.ರುದ್ರೇಶ, ಎಚ್.ಸಿ.ಮಂಜುನಾಥ, ಎಂ.ಪ್ರಶಾಂತ, ಎಚ್.ಜಗದೀಶ, ಹಾಲಸಿದ್ದಪ್ಪ, ಹಂಚಿನಮನೆ ಮಂಜಪ್ಪ, ರಾಘವೇಂದ್ರ, ಆರ್.ಶೇಖರಪ್ಪ, ಎಂ.ವೈ.ಬಸವರಾಜ, ಗೊಲ್ಲರಹಳ್ಳಿ ರಂಗಸ್ವಾಮಿ, ಜಿ.ಸಿದ್ದಪ್ಪ, ಟಿ.ಎಚ್.ಮಂಜು, ಹನುಮಂತಪ್ಪ, ಬಿ.ಎನ್.ಮಂಜು, ಸ್ವಾಮಿ, ಎಸ್.ಎನ್.ಮಂಜು, ಹಾಲೇಶಪ್ಪ, ಲೋಕೇಶಪ್ಪ ಮತ್ತಿತರರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap