ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ : ಡಾ. ಜಿ. ಪರಮೇಶ್ವರ್

ತುಮಕೂರು:

             ಇಡೀ ವಿಶ್ವಕ್ಕೆ ತಮ್ಮ ಶಿಲ್ಪ ಕೌಶಲ್ಯತೆ, ಕೆತ್ತನೆ, ಕುಸುರಿ ಕೆಲಸಗಳಿಂದ ಮನುಕುಲಕ್ಕೆ ಆಸರೆಯಾಗಿರುವ ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ ಎಂದು ಉಪ ಮುಖ್ಯಮಂತ್ರಿ, ಗೃಹ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಅವರು ತಿಳಿಸಿದರು.

              ವಿಶ್ವಕರ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾ ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಸಹಯೋಗದಲ್ಲಿಂದು ಬೆಳಿಗ್ಗೆ ಪಾಂಡುರಂಗ ನಗರದಿಂದ ಬಾಲಭವನದವರೆಗೂ ಏರ್ಪಡಿಸಿದ್ದ ಶ್ರಿ ವಿಶ್ವಕರ್ಮ ಹಾಗೂ ಶ್ರೀ ಕಾಳಿಕಾಂಬ ದೇವಿ ಪ್ರತಿಮೆಗಳ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಇತಿಹಾಸ, ಚರಿತ್ರೆಯನ್ನು ಸೃಷ್ಟಿಸಿದ ಜನಾಂಗವೇ ವಿಶ್ವಕರ್ಮ ಜನಾಂಗ. ಈ ಜನಾಂಗದ ಕೊಡುಗೆಯಿಲ್ಲದಿದ್ದರೆ ನಾವು ಇತಿಹಾಸವನ್ನು ಅರಿಯಲು ಸಾಧ್ಯವಾಗುತ್ತಿರಲಿಲ್ಲವೆಂದು ತಿಳಿಸಿದರು.

              ವಿಶ್ವಕರ್ಮ ಜಯಂತಿಯನ್ನು ಕಳೆದ 3 ವರ್ಷಗಳಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಇದಕ್ಕಾಗಿ ಶ್ರಮಿಸಿದ ಸಮಾಜದ ಎಲ್ಲಾ ಮುಖಂಡರನ್ನು ಸ್ಮರಿಸಿದ ಅವರು, ವಿಶ್ವಕರ್ಮರು ನಿರ್ಧಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತರಲ್ಲ. ವಿಶ್ವಕ್ಕೆ ಅವರು ನೀಡಿರುವ ವಾಸ್ತುಶಿಲ್ಪದ ಕೊಡುಗೆ ಅಪಾರ ಎಂದು ಬಣ್ಣಿಸಿದರು.

              ನಗರದ ಅಶೋಕ ರಸ್ತೆ, ಎಂ.ಜಿ.ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಮಧುಗಿರಿ ತಾಲ್ಲೂಕು ನಿಟ್ಟರಹಳ್ಳಿಯ ಶ್ರೀಶ್ರೀಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ, ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ: ಶೋಭಾರಾಣಿ, ಸಮಾಜದ ಮುಖಂಡರಾದ ಪಿ.ಟಿ.ನರಸಿಂಹಮೂರ್ತಿ, ಕೆ.ವಿ.ಕೃಷ್ಣಮೂರ್ತಿ, ಎಂ.ವಿಶ್ವಮೂರ್ತಿ, ಎನ್.ಎಸ್.ರವಿ, ವಿ.ಎ.ವಿನಯ್ ಕುಮಾರ್, ಮತ್ತಿತರರು ಪಾಲ್ಗೊಂಡಿದ್ದರು.

               ನಂತರ ಬಾಲಭವನದಲ್ಲಿ ಜರುಗಿದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಕಂಚಿನ ಕೆಲಸ, ಕಬ್ಬಿಣದ ಕೆಲಸ, ಮರಗೆಲಸ, ಕಲ್ಲಿನ ಕೆತ್ತನೆ, ಚಿನ್ನಾಭರಣಗಳ ತಯಾರಿಕೆ ಮತ್ತಿತರ ಪಂಚ ವೃತ್ತಿಗಳನ್ನು ಸ್ವಾಭಿಮಾನದಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಇವರ ಕುಶಲತೆಗೆ ಮತ್ತಷ್ಟು ಮನ್ನಣೆ ದೊರೆಯಬೇಕು. ಆದರೂ ಶ್ರಮದ ಕೆಲಸವನ್ನು ಬಿಡದೆ ಜೀವಂತವಾಗಿಟ್ಟುಕೊಂಡು ಬಂದವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ವಿಶ್ವಕರ್ಮ ಜನಾಂಗದ ಶಿಲ್ಪಕಲೆ, ವಾಸ್ತುಶಿಲ್ಪವನ್ನು ನೋಡಬೇಕಾದರೆ ಬೇಲೂರು, ಹಳೇಬೀಡಿಗೆ ಮಾತ್ರವಲ್ಲದೆ ಜಿಲ್ಲೆಯಲ್ಲಿರುವ ಕೈದಾಳ ಪ್ರವಾಸಿ ಕ್ಷೇತ್ರಕ್ಕೆ ಭೇಟಿ ನೀಡಿ ಕಣ್ಮನ ತುಂಬಿಕೊಳ್ಳಬಹುದು. ಆಸ್ತಿ ವಿವಾದಕ್ಕಾಗಿ ಕೈದಾಳದಲ್ಲಿ ಹಾಳಾಗಿದ್ದ ಶಿಲ್ಪಕಲೆಯನ್ನು ಧರ್ಮಸ್ಥಳದ ಧಾರ್ಮಿಕ ಸಂಸ್ಥೆ ಮುಂದೆ ಬಂದು ಜೀರ್ಣೋದ್ದಾರ ಕೈಗೊಂಡಿದ್ದನ್ನು ನಾವೆಂದೂ ಮರೆಯಬಾರದು ಎಂದು ತಿಳಿಸಿದರು.

              ವಿಶ್ವಕರ್ಮ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯ ಕಾಮಗಾರಿಗಾಗಿ ಶಾಸಕರ ನಿಧಿಯಿಂದ 2 ಲಕ್ಷ ರೂ.ಗಳ ಅನುದಾನವನ್ನು ಮಂಜೂರು ಮಾಡುವ ಭರವಸೆ ನೀಡಿದ ಅವರು, ಈಗಾಗಲೇ ಅಭಿವೃದ್ಧಿ ಕಂಡಿರುವ ವಿಶ್ವಕರ್ಮ ಜನಾಂಗದವರು ಹಿಂದುಳಿದ ತಮ್ಮ ಸಮುದಾಯದವರನ್ನು ಮೇಲೆತ್ತುವ ಕೆಲಸ ಮಾಡಿದಾಗ ಸಮಾಜದ ಏಳಿಗೆಯಾಗುತ್ತದೆ ಎಂದು ಸಲಹೆ ನೀಡಿದರು.

             ಅಪರ ಜಿಲ್ಲಾಧಿಕಾರಿ ಸಿ. ಅನಿತಾ ಮಾತನಾಡಿ, ಐದು ಸಮಾಜದವರು ಒಟ್ಟಾಗಿ ಸೇರಿ ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ವಿಶ್ವಕರ್ಮ ದಿನವನ್ನು ಆಚರಿಸುತ್ತಿರುವುದು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

             ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಪಿ. ನಾಗರಾಜು ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಹಾಗೂ ಸಮಸ್ಯೆಗಳ ಬಗ್ಗೆ ಶಾಸಕ ಜ್ಯೋತಿಗಣೇಶ್ ಅವರ ಗಮನ ಸೆಳೆಯುತ್ತಾ, ಹಿಂದುಳಿದ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಅಧಿಕಾರಿಗಳೇ ನಿರ್ಲಕ್ಷತೆ ತೋರುತ್ತಿರುವುದು ವಿಷಾದದ ಸಂಗತಿಯಾಗಿದೆ. ರೈತರು ಸಮಾಜಕ್ಕೆ ಬೆನ್ನೆಲುಬಾದರೆ, ವಿಶ್ವಕರ್ಮ ಜನಾಂಗದವರು ಕೃಷಿ ಉಪಕರಣಗಳನ್ನು ತಯಾರಿಸಿ ನೀಡುವ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಓದಿನಿಂದ ಇಂಜಿನಿಯರ್ ಪದವಿ ಗಳಿಸದೆ ತನ್ನ ವಾಸ್ತುಶಿಲ್ಪ, ಕೆತ್ತನೆಗಳಿಂದ ಹುಟ್ಟಿನಿಂದಲೇ ಇಂಜಿನಿಯರ್ ಎನಿಸಿಕೊಳ್ಳುವ ವೃತ್ತಿ ನಮ್ಮದು ಎಂದು ಹೆಮ್ಮೆ ವ್ಯಕ್ತಪಡಿಸಿದರು.

           ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ: ಎಂ. ಪೂರ್ವಾಚಾರ್ ನೀಡಿದ ತಮ್ಮ ಉಪನ್ಯಾಸದಲ್ಲಿ ವಿಶ್ವಕರ್ಮರ ಹುಟ್ಟು, ಅವರ ಕೊಡುಗೆ, ತತ್ವಗಳ ಬಗ್ಗೆ ವಿವರಿಸಿದರು. ಆರ್ಯರು, ದ್ರಾವಿಡರು, ಮತ್ತಿತರ ಯಾವುದೇ ಪ್ರಾಚೀನ ಕಾಲದ ನಾಗರಿಕತೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿಶ್ವಕರ್ಮ ಜನಾಂಗದ ಕೊಡುಗೆಯನ್ನು ನಾವು ಮರೆಯುವಂತಿಲ್ಲವೆಂದ ಅವರು, 34 ಸಾಲುಗಳ ವಿಶ್ವಕರ್ಮ ಶ್ಲೋಕವು ವಿಶ್ವಕರ್ಮನೇ ಭೂಮ್ಯಾಕಾಶದ ಏಕೈಕ ಒಡೆಯನೆಂದು ಸಾರುತ್ತದೆ. ಮೂರು ದಶಲಕ್ಷ ವರ್ಷಗಳ ಇತಿಹಾಸದಲ್ಲಿ ಕೊಪ್ಪಳ ಜಿಲ್ಲೆಯ ಆನೆಗುಂದಿ ಪ್ರದೇಶದಲ್ಲಿ ವಿಶ್ವಕರ್ಮದ ಪೀಠವಿತ್ತು ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಅಮರ ಶಿಲ್ಪಿ ಜಕಣಾಚಾರಿ ಕಾಲ್ಪನಿಕ ವ್ಯಕ್ತಿಯೆಂದು ತಪ್ಪು ಕಲ್ಪನೆ ಕೆಲವರಲ್ಲಿದೆ. ಹೊಯ್ಸಳ ಶೈಲಿಯ ವಾಸ್ತುಶಿಲ್ಪಗಳಲ್ಲಿ ಜಕಣನ ಕೆತ್ತನೆ ಇರುವುದು ವಿದ್ವಾಂಸರು-ವಿದೇಶಿ ತಜ್ಞರು ಹೊಯ್ಸಳ ಶಿಲ್ಪಶಾಸನ ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ. ಬೇಲೂರು-ಹಳೇಬೀಡಿನಲ್ಲಿರುವ ಚನ್ನಕೇಶವ ದೇವಾಲಯವನ್ನು ಜಕಣನೇ ನಿರ್ಮಿಸಿರುವ ಬಗ್ಗೆ ಬಹಳಷ್ಟು ಪುರಾವೆಗಳಿವೆ ಎಂದು ಸ್ಪಷ್ಟಪಡಿಸಿದರು.

          ವಿಶ್ವಕರ್ಮ ಸೇವಾ ಸಮಿತಿಯ ಗೌರವಾಧ್ಯಕ್ಷ ಟಿ.ಹೆಚ್.ಆನಂದರಾಮು ಮಾತನಾಡಿ, ನೆನೆಗುದಿಗೆ ಬಿದ್ದಿರುವ ವಿಶ್ವಕರ್ಮ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವ ಕಾರ್ಯವಾಗಬೇಕು. ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಮಾಜದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

           ಇದಕ್ಕೂ ಮುನ್ನ ಮಂಜುಳ ಮತ್ತು ತಂಡದವರು ಪ್ರಸ್ತುತ ಪಡಿಸಿದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ “ದೇವ ಮಾದೇವ ಬಾರೋ…. ಸ್ವಾಮಿ ಮಲೆಯ ಮಾದೇವ ಬಾರೋ…” ಎನ್ನುವ ಗೀತೆ ಎಲ್ಲರನ್ನೂ ಭಕ್ತಿ ಸಾಗರದಲ್ಲಿ ತೇಲಿಸಿತು.

           ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಸಮಾಜದ ಮುಖಂಡರಾದ ಹೆಚ್.ಬಿ.ವೆಂಕಟರಮಣಾಚಾರ್, ಬಿ.ಜಕಣಾಚಾರ್, ಜಗದಾಂಬ ನಂಜಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಮತ್ತಿತರರು ಉಪಸ್ಥಿತರಿದ್ದರು.

    

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap