ಹೊಸಪೇಟೆ :
ವೀರಶೈವ ಬೇಡ ಜಂಗಮರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ(ಎಸ್.ಸಿ) ಪ್ರಮಾಣಪತ್ರ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘ ಹಾಗು ಹೈ.ಕ.ಅಲೆಮಾರಿ ಬುಡ್ಗ ಜಂಗಮ ಜಾಗೃತಿ ಸೇವಾ ಸಂಘಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
ನಗರದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವೀರಶೈವ ಜಂಗಮರು ಇತ್ತೀಚೆಗೆ ಬೇಡ ಜಂಗಮ ಪರಿಶಿಷ್ಟ ಜಾತಿ(ಎಸ್.ಸಿ) ಪ್ರಮಾಣಪತ್ರ ನೀಡಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಇದು ಸಂವಿಧಾನದ 19ನೇ ಕಲಂನಲ್ಲಿ ಬರುವ ಬೇಡಜಂಗಮ, ಬುಡ್ಗ ಜಂಗಮ ಜಾತಿಗಳು ಒಂದೇ ಸಂಖ್ಯೆಯಲ್ಲಿರುವುದರಿಂದ ವೀರಶೈವ ಜಂಗಮರು ನಾವೇ ಬೇಡ ಜಂಗಮ ಪರಿಶಿಷ್ಟ ಜಾತಿಯವರು ಎಂದು ಹೇಳಿ ಬೇಡ/ಬುಡ್ಗ ಜಂಗಮ ಮೀಸಲಾತಿಯ್ನು ಕಬಳಿಸುವ ಹುನ್ನಾರ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದರು.
ಮೇಲ್ವರ್ಗಕ್ಕೆ ಸೇರಿದ ವೀರಶೈವ ಜಂಗಮರು, ವೀರಶೈವ ಪಂಚಪೀಠ ಜಗದ್ಗುರುಗಳಾದ ಕಾಶಿ, ರಂಭಾಪುರಿ, ಶ್ರೀಶೈಲ, ಉಜ್ಜೀನಿ, ಮತ್ತು ಕೇದಾರ ಪೀಠಗಳ ಪರಂಪರೆಗೆ ಸೇರಿದವರಾಗಿದ್ದು, ಇವರು ಅಸ್ಪಶ್ಯರಲ್ಲ. ಇವರು ವೀರಶೈವ-ಲಿಂಗಾಯಿತರಿಗೆ ಗುರುಗಳಾಗಿದ್ದು, ಜಾತಿಯಲ್ಲಿ ಬಲಾಢ್ಯರಾಗಿದ್ದಾರೆ. ಆದರೆ ನಾವು ಬೇಡ/ಬುಡ್ಗ ಜಂಗಮರು ಅಸ್ಪಶ್ಯರೂ ಹಾಗು ಶೋಷಿತರಾಗಿದ್ದು, ಅಲೆಮಾರಿಗಳಾಗಿ ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡಿ ಜೀವನ ನಡೆಸುತ್ತಿದ್ದೇವೆ. ಹಳ್ಳಿಗಳಲ್ಲಿ ಗುಡಿ ಗುಂಡಾರಗಳಿಂದ ತಿರಸ್ಕೃತರಾಗಿದ್ದೇವೆ. ಕೆರೆ, ಬಾವಿಗಳಿಂದ ಬಹಿಷ್ಕಾರಕ್ಕೊಳಗಾಗಿದ್ದೇವೆ. ಊರನ್ನು ಸ್ವಚ್ಚ ಮಾಡಲು ಮಲ ಹೊರುವ ಪದ್ದತಿ ಹಾಗು ಸತ್ತ ಪ್ರಾಣಿಗಳನ್ನು ಎಳೆದುಕೊಂಡು ಹೋಗಿ ಊಳುವಂತ ಕೆಲಸ ಮಾಡುತ್ತಿದ್ದೇವೆ. ನಿತ್ಯ ಸುವರ್ಣಿಯರಿಂದ ಅನ್ಯಾಯ, ದೌರ್ಜನ್ಯಕ್ಕೆ ತುತ್ತಾಗುತ್ತಿದ್ದೇವೆ. ಅಸ್ಪಶ್ಯತೆ ಎಂದರೆ ಏನು ಎಂದು ಗೊತ್ತಿಲ್ಲದ ವೀರಶೈವ ಜಂಗಮರು ಕೇವಲ ಮೀಸಲಾತಿಗಾಗಿ ದಲಿತರ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿರುವುದು ಯಾವ ನ್ಯಾಯ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡ/ಬುಡ್ಗ ಜಂಗಮರಿಗೆ ನಮ್ಮದೇ ಆದ ಬುಡ್ಗ(ಮರುಗು) ಭಾಷೆ ಇದೆ. ನಮ್ಮದೇ ಆದ ಕುಲ ಪಂಚಾಯಿತಿ ಇದೆ. ನಮ್ಮ ಮನೆಯ ದೇವರುಗಳು ಸುಂಕ್ಲಮ್ಮ, ಜಂಭಲಮ್ಮ, ಮಾರೆಮ್ಮ, ಘೋಷಮ್ಮ, ಬಿಚ್ಚಮ್ಮ, ದುರ್ಗಮ್ಮ, ಎಲ್ಲಮ್ಮದೇವಿ ಇವರನ್ನು ಮದ್ಯ ಹಾಗು ಮಾಂಸದಿಂದ ಪೂಜಿಸುತ್ತೇವೆ. ಇದ್ಯಾವುದನ್ನು ಮಾಡದ ವೀರಶೈವ ಜಂಗಮರಿಗೆ ಯಾವುದೇ ಕಾರಣಕ್ಕೂ ಮಾನ್ಯ ತಹಶೀಲ್ದಾರರು ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬಾರದು. ಒಂದು ವೇಳೆ ಒತ್ತಡಕ್ಕೆ ಮಣಿದು ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿದ್ದೇಯಾದಲ್ಲಿ ಎಲ್ಲಾ ದಲಿತ ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಅಧಿಕಾರಿಗಳ ವಿರುದ್ದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎಚ್.ಗುಂಡಪ್ಪ, ತಾಲೂಕು ಸಂ.ಸಂಚಾಲಕ ಎನ್.ಶರಣಪ್ಪ, ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ.ವೀರಸ್ವಾಮಿ, ನಗರಸಭೆ ಸದಸ್ಯ ಎ.ಬಸವರಾಜ, ಮುಖಂಡರಾದ ನಿಂಬಗಲ್ ರಾಮಕೃಷ್ಣ, ಎರಿಸ್ವಾಮಿ, ಎಚ್.ಶೇಷು, ಹೈ.ಕ.ಅಲೆಮಾರಿ ಬುಡ್ಗ ಜಂಗಮ ಜಾಗೃತಿ ಸೇವಾ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ, ಶಿವರಾಜ ರುದ್ರಾಕ್ಷಿ, ಡಾ.ಆಂಜನೇಯ, ಅಸ್ತಿ ರಾಮಣ್ಣ, ಮಂಜುನಾಥ, ಭರತಕುಮಾರ, ಹೊನ್ನೂರಸ್ವಾಮಿ, ಶ್ರೀನಿವಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








