ಹೊಸಪೇಟೆ :
ವೀರಶೈವ-ಲಿಂಗಾಯಿತ ಸಮಾಜಗಳಲ್ಲಿ ಒಳಪಂಗಡಗಳು ಹೆಚ್ಚಾಗಿ ಇರುವುದರಿಂದ ಎಲ್ಲರೂ ಒಂದಾಗಿ ಹೋಗಲು ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಸಮಾಜದವರು ಒಳಪಂಡಗಳನ್ನು ಮರೆತು ಒಂದಾಗಬೇಕಿದೆ. ಇಲ್ಲದೇ ಹೋದರೆ ಸಮಾಜದಲ್ಲಿ ನಮಗೆ ಗೌರವ ಸಿಗುವುದಿಲ್ಲ ಎಂದು ಕೊಟ್ಟೂರು ಸಂಸ್ಥಾನಮಠದ ಜಗದ್ಗುರು ಡಾ.ಸಂಗನಬಸವ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಇಲ್ಲಿನ ಕೊಟ್ಟೂರು ಸಂಸ್ಥಾನಮಠದಲ್ಲಿ ಮಂಗಳವಾರ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ 46ನೇ ವರ್ಷದ ಸರ್ವ ಜನಾಂಗದವರ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಶೈವ-ಲಿಂಗಾಯಿತರಲ್ಲಿ ಒಂದು ಸಮಸ್ಯೆ ಏನೆಂದರೆ ನೀನು ಯಾರಪ್ಪಾ ಎಂದು ಕೇಳಿದರೆ ‘ನಾನು ರೆಡ್ಡಿ, ಪಂಚಮಸಾಲಿ, ಬಣಜಿಗ, ಗಾಣಿಗ ಎಂದು ಹೇಳುತ್ತಾರೆ. ಯಾರು ನಾನು ವೀರಶೈವ ಅಥವಾ ಲಿಂಗಾಯಿತ ಎಂದು ಹೇಳುವುದಿಲ್ಲ. ಹೀಗಾದರೆ ಸಮಾಜ ಒಂದಾಗಲು ಹೇಗೆ ಸಾಧ್ಯ ?. ನಾವು ಒಳಪಂಗಡಗಳನ್ನೆಲ್ಲ ಮರೆತು ವೀರಶೈವ-ಲಿಂಗಾಯಿತ ಎಂದು ಹೇಳದೇ ಹೋದರೆ ಸಮಾಜದಲ್ಲಿ ನಮಗೆ ಗೌರವ ಸಿಗುವುದಿಲ್ಲ. ಇದನ್ನು ಸಮಾಜದವರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಕೆಲವರು ನಾವು ಲಿಂಗಾಯಿತರು, ನಮ್ಮದು ಪ್ರತ್ಯೇಕ ಧರ್ಮ ಆಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ಪ್ರತ್ಯೇಕ ಧರ್ಮವಾಗಬೇಕು ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಲ್ಲ. ನಾವು ವೀರಶೈವರು, ನಾವು ಲಿಂಗಾಯಿತರು ಎಂಬುದನ್ನು ಬಿಟ್ಟು ಎಲ್ಲಾ ಒಳಪಂಗಡಗಳು ವಿಲೀನವಾಗಬೇಕಿದೆ. ಹಾಗಾದಾಗ ಮಾತ್ರ ಸಮಾಜ ಒಂದಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಒಬ್ಬರಿಗೊಬ್ಬರು ನಾವು ಶ್ರೇಷ್ಠ, ಅವರು ಕನಿಷ್ಠ ಎಂದು ಅಸ್ಪøಶ್ಯತೆ ತೋರುತ್ತಾ ಸಾಗುತ್ತಿರಬೇಕಾದರೆ, ಅಂದು 12ನೇ ಶತಮಾನದಲ್ಲೇ ಬಸವಣ್ಣನವರು ಮಾದಿಗರ ಮನೆಯಲ್ಲಿ ಅಂಬಲಿ ಕುಡಿದು ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿದ್ದರು. ಜಾತಿ ನಿರ್ಮೂಲನೆ ಮಾಡಲು ಅಂತರ್ಜಾತಿ ವಿವಾಹಗಳನ್ನು ಮಾಡಿದ್ದರು. ಎಲ್ಲಾ ಜಾತಿ, ಧರ್ಮದವರನ್ನು ಸಮಾನರಂತೆ ಕಂಡರು.
ಇಂಥ ಮಹಾಮಾನವತಾದಿ ಬಸವಣ್ಣನವರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕೊಟ್ಟೂರು ಸಂಸ್ಥಾನಮಠವು ಸಮಾನತೆಯ ಪ್ರತೀಕವಾಗಿದೆ. ಎಲ್ಲಾ ಜಾತಿ ಧರ್ಮದವರಿಗೆ ಶಿಕ್ಷಣ, ಅನ್ನದಾಸೋಹ ನೀಡುತ್ತಿದೆ. ಪ್ರತಿವರ್ಷ ಎಲ್ಲಾ ಜಾತಿ ಧರ್ಮದವರಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದೆ. ಬಸವಣ್ಣನವರ ಸಿದ್ದಾಂತದಂತೆ ಮಠದಲ್ಲಿ ವೀರಶೈವರಂತೆ ಅನ್ಯ ಜಾತಿಯವರಿಗೆ ಸಮಾನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ 16 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 25 ಮಕ್ಕಳಿಗೆ ಲಿಂಗದೀಕ್ಷೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಗರಗ-ನಾಗಲಾಪುರ ಮಠದ ಮರಿಮಹಾಂತ ಸ್ವಾಮೀಜಿ, ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಪಶ್ಚಿಮಾದ್ರಿ ವಿರಕ್ತಮಠದ ಪಂಚಮಸಿದ್ದಲಿಂಗ ಸ್ವಾಮೀಜಿ, ದರೂಲರಿನ ಕೊಟ್ಟೂರು ದೇಶಿಕರು, ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಸಾಲಿಸಿದ್ದಯ್ಯಸ್ವಾಮಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್.ವಿ.ಶರಣುಸ್ವಾಮಿ, ಕಾರ್ಯದರ್ಶಿ ಕೆ.ರವಿಶಂಕರ, ಮುಖಂಡರಾದ ಗೊಗ್ಗ ಚನ್ನಬಸವರಾಜ, ಕೆ.ಕೊಟ್ರೇಶ, ಕೋರಿಶೆಟ್ಟಿ ಲಿಂಗಪ್ಪ, ಹೊಸಪೇಟೆ ತಾಲೂಕು ಚೇಂಬರ್ ಆಫ್ ಕಾಮರ್ಸ್‍ನ ಅಶ್ವಿನ್ ಕೋತಂಬ್ರಿ, ಗುಜ್ಜಲ ಶಿವರಾಮಪ್ಪ, ಅಕ್ಕನ ಬಳಗದ ಅರುಣಾ ಶಿವಾನಂದ, ಎಸ್.ಎಂ.ಕಾಶಿನಾಥಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದ,ಪ್ಪ, ಮಧುರ ಚೆನ್ನಶಾಸ್ತ್ರಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
