ಶಕ್ತಿ ಯೋಜನೆ : 2ನೇವಾರಾಂತ್ಯಕ್ಕೆ ಕುಗ್ಗಿದ ರಣೋತ್ಸಾಹ…!

ಬೆಂಗಳೂರು

     ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಕಳೆದ ವಾರಾಂತ್ಯದಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಉಚಿತ ಪ್ರಯಾಣದ ಮೊದಲ ವಾರಾಂತ್ಯದಲ್ಲಿ ದೊಡ್ಡ ಸಂಖ್ಯೆಯ ಮಹಿಳೆಯರು ದೇಗುಲ ದರ್ಶನ, ಪ್ರವಾಸದ ಹೆಸರಿನಲ್ಲಿ ಸಂಭ್ರಮಿಸಿದ್ದರ ಪರಿಣಾಮವಾಗಿ ಬಸ್‌ಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನೂಕುನುಗ್ಗಲು ಉಂಟಾಗಿ ಅಸ್ತವ್ಯಸ್ತವಾಗಿತ್ತು.

     ಆದರೆ, ಈ ವಾರ ಎರಡನೇ ವಾರಾಂತ್ಯದ ಹೊತ್ತಿಗೆ ಈ ರಣೋತ್ಸಾಹ ಸ್ವಲ್ಪ ಮಟ್ಟಿಗೆ ತಗ್ಗಿದೆ. ಈ ಶನಿವಾರ (ಜೂನ್ 24) ರಾಜ್ಯದ ಯಾವುದೇ ಭಾಗದಲ್ಲಾಗಲೀ, ಕಳೆದ ಬಾರಿ ವಿಪರೀತ ಜನಸಾಗರವನ್ನು ಕಂಡ ಧರ್ಮಸ್ಥಳದಲ್ಲಾಗಲೀ ವಿಪರೀತ ರಷ್ ಕಂಡುಬಂದಿಲ್ಲದಿರುವುದು ವಿಶೇಷವಾಗಿದೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಉಚಿತ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಶಕ್ತಿ ಯೋಜನೆಯನ್ನು ಜೂನ್ 11ರಂದು ಉದ್ಘಾಟಿಸಿತ್ತು. ಅಂದು ಮಧ್ಯಾಹ್ನ ಒಂದು ಗಂಟೆಯಿಂದಲೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಆವತ್ತು ಆರಂಭವಾದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗಿ ಶನಿವಾರದ ಹೊತ್ತಿಗೆ ಹಾಹಾಕಾರವನ್ನೇ ಸೃಷ್ಟಿಸಿತ್ತು.

     ಉಚಿತ ಪ್ರಯಾಣದ ಮೊದಲ ವಾರಾಂತ್ಯವಾಗಿದ್ದ ಜೂನ್ 17 ಮತ್ತು 18ರಂದು ಮಹಿಳೆಯರು ಧರ್ಮಸ್ಥಳ, ಸುಬ್ರಹ್ಮಣ್ಯ, ಮುರ್ಡೇಶ್ವರ ಮತ್ತಿತರ ಪುಣ್ಯ ಕ್ಷೇತ್ರ ಪ್ರವಾಸಿ ತಾಣಗಳಿಗೆ ಗುಂಪು ಗುಂಪಾಗಿ ಆಗಮಿಸಿದ್ದರು. ತಮ್ಮ ಸ್ನೇಹಿತೆಯರ ತಂಡವನ್ನು ಕಟ್ಟಿಕೊಂಡು ಬಸ್‌ಗಳಲ್ಲಿ ಮೊದಲೇ ಬುಕ್ ಮಾಡಿಕೊಂಡು ಆಗಮಿಸಿದ್ದರು. ಇದರಿಂದಾಗಿ ಬಸ್‌ಗಳೆಲ್ಲ ತುಂಬಿ ತುಳುಕಿದ್ದಲ್ಲದೆ, ಪುಣ್ಯ ಕ್ಷೇತ್ರಗಳಲ್ಲೂ ಒತ್ತಡ ಸೃಷ್ಟಿಯಾಗಿತ್ತು.

    ಕಳೆದ ಭಾನುವಾರ ಮಣ್ಣಿನ ಅಮಾವಾಸ್ಯೆ ಇದ್ದುದರಿಂದ ಉತ್ತರ ಕರ್ನಾಟಕದಲ್ಲಂತೂ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಓಡಾಟ ನಡೆಸಿದ್ದರು. ಹೀಗಾಗಿ ಎಲ್ಲ ಕಡೆ ಅನಾಹುತಕಾರಿ ಅಲ್ಲೋಲಕಲ್ಲೋಲಗಳು ನಡೆದಿದ್ದವು. ಬಸ್‌ನ ಬಾಗಿಲು ಒಡೆಯುವುದು, ಹಲ್ಲೆ, ಕಿಟಕಿಗಳ ಮೂಲಕ ಹತ್ತುವುದು ಸೇರಿದಂತೆ ನಾನಾ ದೃಶ್ಯಗಳು ಕಾಣಿಸಿಕೊಂಡಿದ್ದವು.

    ಕೆಲವು ಕಡೆ ಪ್ರವಾಸಿ ತಾಣಗಳಿಗೆ ಹೋದರೆ ಸಂಜೆಯ ಹೊತ್ತು ಮರಳಿ ಬರಲು ಬಸ್ಸಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ, ಈ ಶನಿವಾರ ದೊಡ್ಡ ಮಟ್ಟದ ಒತ್ತಡ ಕಾಣಿಸುತ್ತಿಲ್ಲ. ಕಳೆದ ಬಾರಿ ಭಾರಿ ಸಂಖ್ಯೆಯ ಮಹಿಳೆಯ ಓಡಾಟ, ಒತ್ತಡಕ್ಕೆ ಸಾಕ್ಷಿಯಾದ ಕಲಬುರಗಿ ಬಸ್ ನಿಲ್ದಾಣದಲ್ಲಿ ಈ ಶನಿವಾರ ಯಾವುದೇ ಒತ್ತಡ ಇರಲಿಲ್ಲ. ಪ್ರಯಾಣಿಕರಿಲ್ಲದೆ ವಸ್ತುಶಃ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.

    ಕಳೆದ ಶನಿವಾರ ಬೆಳಗ್ಗಿನ ಹೊತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳೆಯರದೇ ಸಾಮ್ರಾಜ್ಯವಾಗಿತ್ತು. ಶುಕ್ರವಾರವೇ ತಂಡಗಳಾಗಿ ರಾಜ್ಯದ ನಾನಾ ಭಾಗಗಳಿಂದ ಹೊರಟಿದ್ದವರು ಬೆಳಗ್ಗೆ ಧರ್ಮಸ್ಥಳಕ್ಕೆ ಲಗ್ಗೆ ಇಟ್ಟಿದ್ದರು. ಆದರೆ, ಈ ಬಾರಿ ಅಲ್ಲೂ ಆ ಒತ್ತಡವಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap