ಗುಬ್ಬಿ
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಮಹತ್ವದ ಕಾರ್ಯ ಮಾಡುತ್ತಿದ್ದು ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಶಾಖೆಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಲಯನ್ಸ್ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ತಾಲ್ಲೂಕು ಕಾನೂನು ಸೇವಾ ಸಮಿತಿ, ತುಳಿಸಿ ಡಯಾಗ್ಯಾಸ್ಟ್ರಿಕ್ಸ್ ಸೆಂಟರ್ ಮತ್ತು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ರಕ್ತದ ಗುಂಪು ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜ ಸೇವೆ ಮತ್ತು ಉತ್ತಮ ಸೇವಾ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಆದರ್ಶ ವಿದ್ಯಾರ್ಥಿಗಳಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಶಿಸ್ತು ಮತ್ತು ಸೇವೆಗೆ ಪೂರಕವಾದ ಸ್ಕೌಟ್ಸ್ ಮತ್ತು ಗೈಡ್ಸ್ ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಮಾತನಾಡಿ ಯುವಕರು ರಕ್ತದಾನ ಮಾಡುವುದರಿಂದ ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ರಕ್ತ ಬಳಕೆಯಾಗುತ್ತದೆ. ಇದರಿಂದ ಒಂದು ಜೀವ ಉಳಿಸಿದಂತಾಗುತ್ತದೆ. ಆದ್ದರಿಂದ ವಿದ್ಯಾವಂತ ಯುವಕರು ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಸೇವಾ ಕಾರ್ಯಗಳನ್ನು ಮಾಡುವಂತೆ ಕರೆನೀಡಿದ ಅವರು ಇಂದಿನ ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸುಸಂಸ್ಕøತ ಸಮಾಜ ನಿರ್ಮಾಣ ಮಾಡುವಂತೆ ತಿಳಿಸಿದರು.
ರೆಡ್‍ಕ್ರಾಸ್ ಸಂಸ್ಥೆ ಛೇರ್ಮನ್ ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಯುವಕರು ಶಿಕ್ಷಣದ ಜೊತೆಗೆ ಸೇವಾ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಸರ್ವತೋಮುಖ ಪ್ರಗತಿಗೆ ಮುಂದಾಗಬೇಕಿದೆ ಎಂದ ಅವರು, ರಕ್ತದಾನದಂತಹ ಮಹತ್ವದ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಮತ್ತೊಬ್ಬರ ಜೀವ ಉಳಿಸುವಂತಹ ಸಹಾಯ ಮಾಡುವತ್ತ ಚಿಂತನೆ ನಡೆಸಬೇಕಿದೆ ಎಂದರು. ರೆಡ್‍ಕ್ರಾಸ್ ಸಂಸ್ಥೆ ಹಲವು ಸಮಾಜ ಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಪ್ರೊ:ಸಿ.ಕೃಷ್ಣಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಶಾಪ್ರಸನ್ನಕುಮಾರ್, ಜಿಲ್ಲಾ ಗೈಡ್ಸ್ ಆಯುಕ್ತರಾದ ಸುಭಾಷಿಣಿ ಆರ್.ಕುಮಾರ್, ವೇಣುಗೋಪಾಲ್, ಉಪ ಆಯುಕ್ತ ಚೇತನ್ ಮೂರ್ತಿ, ಸಾಗರನಹಳ್ಳಿ ಪ್ರಭು, ಲಯನ್ಸ್ ಸಂಸ್ಥೆ ಅಧ್ಯಕ್ಷ ಉಂಡೆರಾಮಣ್ಣ, ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಖಜಾಂಚಿ ಸಿದ್ದಪ್ಪಗುಜ್ಜರಿ, ಪದಾಧಿಕಾರಿಗಳಾದ ಕೆ.ಎಲ್.ಗೋಪಾಲಕೃಷ್ಣಶೆಟ್ಟಿ, ಕಮಲನಾಭಾಚಾರ್, ಎಲ್.ವಿ.ಸಾವಂತ್, ಭವರ್ ಲಾಲ್, ಎ.ಎಸ್.ರೇಣುಕಯ್ಯ, ಟಿ.ಜಿ.ಷಡಾಕ್ಷರಿ, ಸಿ.ಹುಚ್ಚಯ್ಯ, ಡಿ.ಆರ್.ಕೀರ್ತಿರಾಜ್, ರವೀಶ್, ಬಾಲಕೃಷ್ಣಮೂರ್ತಿ, ಹೆಚ್.ಎಸ್.ದಯಾನಂದ್, ಶಾಂತರಾಜು, ಡಾ:ಚೈತಾಲಿ, ಡಾ:ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.