ಹಿರಿಯೂರು:
ರಾಜ್ಯದಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಿಸುವಲ್ಲಿ, ಬಹುತೇಕರಿಗೆ ಅಕ್ಷರದ ಅರಿವು ಮೂಡಿಸುವಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು, ಮಠಗಳ ಪಾತ್ರ ಗಮನಾರ್ಹವಾದುದು ಎಂದು ಬೆಂಗಳೂರಿನ ಸದಾಶಿವನಗರದ ರೋಟರಿ ಅಧ್ಯಕ್ಷ ಶಶಿಧರ್ ಹೇಳಿದರು.
ನಗರದ ಗಿರೀಶ ಬಾಲಕಿಯರ ಪಿಯು ಕಾಲೇಜಿನಲ್ಲಿ ಶನಿವಾರ ರೋಟರಿ, ಇನ್ನರ್ ವ್ಹೀಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನದ ಕಾರಣಕ್ಕೆ ಓದು ನಿಲ್ಲಬಾರದು. ರಾಜ್ಯದಲ್ಲಿ ನೂರಾರು ಉಚಿತ ಶಿಕ್ಷಣ ಕೊಡುವ ಮಠ–ಮಾನ್ಯಗಳು, ಶಿಕ್ಷಣ ಸಂಸ್ಥೆಗಳಿವೆ. ಸರ್ಕಾರ ವಿದ್ಯಾರ್ಥಿ ವೇತನ ನೀಡುತ್ತದೆ. ಬಡತನವನ್ನು ಸವಾಲಾಗಿ ಸ್ವೀಕರಿಸಿ ಓದು ಮುಂದುವರಿಸಬೇಕು. ವಾಣಿಜ್ಯ ವಿಭಾಗದ ಪದವೀಧರರಿಗೆ ಸಾಕಷ್ಟು ಬೇಡಿಕೆ ಇದ್ದು, ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜಿನ ಪ್ರಥಮ ವರ್ಷದ ವಾಣಿಜ್ಯ ವಿದ್ಯಾರ್ಥಿನಿಯರಿಗೆ ಉಚಿತ ಪಠ್ಯ ಪುಸ್ತಕ ಕೊಡಲಾಗಿತ್ತು. ಈ ವರ್ಷ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಿಗೆ ಮುಂದುವರಿಸಿದ್ದೇವೆ. ಇವರು ಪದವಿ ಪೂರ್ಣಗೊಳಿಸುವವರೆಗೆ ಪಠ್ಯ ಪುಸ್ತಕ ಕೊಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಎಂ.ಎಸ್. ರಾಘವೇಂದ್ರ ಮಾತನಾಡಿ, ಶಿಕ್ಷಣ ಬಡವರ ಕೈಗೆ ಎಟುಕುವುದು ಕಷ್ಟ ಎಂಬಂತಹ ಸ್ಥಿತಿ ಇದೆ. ದುಬಾರಿ ಶುಲ್ಕ, ದುಬಾರಿ ಪಠ್ಯ ಪುಸ್ತಕಗಳು, ಇತರೆ ಖರ್ಚು ಬಡ ಕುಟುಂಬದವರಿಗೆ ನಿರ್ವಹಿಸುವುದು ಸುಲಭದ ಮಾತಲ್ಲ ಎಂಬ ಕಾರಣಕ್ಕೆ ಪಠ್ಯ ಪುಸ್ತಕ ವಿತರಿಸುವ ತೀರ್ಮಾನಕ್ಕೆ ಬಂದೆವು. ವಿದ್ಯಾರ್ಥಿನಿಯರು ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಓದಿನ ಕಡೆ ಹೆಚ್ಚು ಗಮನ ಕೊಡಿ ಎಂದು ಸಲಹೆ ನೀಡಿದರು.
ಗಿರೀಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎನ್. ತಿಪ್ಪೇಸ್ವಾಮಿ, ಬೆಂಗಳೂರಿನ ನಾಗರಾಜ್, ಎಂ.ಪಿ.ಎಂ. ಆರಾಧ್ಯ, ಎಚ್.ಎಸ್. ಸುಂದರರಾಜ್, ಎಚ್. ವೆಂಕಟೇಶ್, ಎಂ.ವಿ. ಹರ್ಷ, ಅನಿಲ್ ಕುಮಾರ್, ಸಪ್ನಾ ಸತೀಶ್, ರಾಜೇಶ್ವರಿ ಉಪಸ್ಥಿತರಿದ್ದರು.








