ಚಳ್ಳಕೆರೆ–
ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರದ ಅಭ್ಯದಯಕ್ಕಾಗಿ ಚಿಂತನೆ ನಡೆಸಬೇಕಿದೆ. ಇಂದು ಈ ಸಮಾಜಕ್ಕೆ ಪರಿವರ್ತನೆ ಮಾಡುವಂತಹ ಶಕ್ತಿ ಸಾಮಥ್ರ್ಯವುಳ್ಳ ವ್ಯಕ್ತಿಗಳ ಅವಶ್ಯಕತೆ ಇದೆ. ಕಳೆದ ನೂರಾರು ವರ್ಷಗಳಿಂದ ದೌರ್ಜನ್ಯ ಮತ್ತು ಶೋಷಣೆಗೆ ಒಳಗಾದ ಸಮುದಾಯವನ್ನು ಮೇಲೇತ್ತುವ ಕಾರ್ಯವಾಗಬೇಕಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಹ ಶಿಕ್ಷಣ ಮತ್ತು ಸಂಪ್ರದಾಯಗಳ ಸಂಕೋಲೆಯಲ್ಲಿ ಹಿಂದುಳಿದ ದಲಿತ ಸಮುದಾಯದ ಮಹಿಳೆಯೊಬ್ಬಳು ಐಎಎಸ್ ಪದವಿ ಪಡೆದು ರಾಷ್ಟ್ರ ಸೇವೆಗೆ ಮುಂದಾಗಿರುವುದು ಸಂತಸ ವಿಷಯವೆಂದು ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಜೈಲು ಅಧಿಕಾರಿ ಹರ್ತಿಕೋಟೆ ವೀರೇಂದ್ರಸಿಂಹ ತಿಳಿಸಿದರು.
ಅವರು, ಬುಧವಾರ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಕನ್ನೇಶ್ವರ ಪ್ರಾಚೀನ ಶಿವಾಲಯದಲ್ಲಿ ಶ್ರೀಗೋಕರ್ಣೇಶ್ವರ ದೇವಾಲಯದ ಸಮಿತಿ ಹಮ್ಮಿಕೊಂಡಿದ್ದ ಗ್ರಾಮದ ದಲಿತ ಯುವತಿ ಡಿ.ಆರ್.ಮೇಘಶ್ರೀವಿಕ್ರಮಸಿಂಹ ಐಎಎಸ್ ಪದವಿ ಪಡೆದು ಪ್ರಸ್ತುತ ಕೇರಳ ಸರ್ಕಾರದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರನ್ನು ಅದ್ದೂರಿಯಾಗಿ ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಿ.ಆರ್.ಮೇಘಶ್ರೀವಿಕ್ರಮಸಿಂಹ ಬಾಲ್ಯದಿಂದಲೇ ತನ್ನ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಗಮನಹರಿಸಿದ್ದಳು. ಗ್ರಾಮದಲ್ಲಿ ಕನಿಷ್ಠ ಶಿಕ್ಷಣವನ್ನು ಪಡೆದರೂ ಸಹ ವಿದ್ಯಾಕ್ಷೇತ್ರದ ಒಂದೊಂದೆ ಮೆಟ್ಟಿಲನ್ನೇರಿ ಸಾಧನೆಯ ಶಿಖರವೇರಿದ್ದಾಳೆ. ಶೋಷಿತ ಸಮುದಾಯದ ನೋವುಗಳಿಗೆ ಸ್ಪಂದಿಸದೆ ಸಮಸ್ತ ಸಮುದಾಯಕ್ಕೂ ನೆರವು ನೀಡುವ ಕಾರ್ಯದಲ್ಲಿ ಮುಂದಾಗಲಿ ಎಂದರು.
ಖ್ಯಾತ ನರರೋಗ ತಜ್ಞ ಡಾ.ರಂಗಯ್ಯ ಮಾತನಾಡಿ, ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳ ಕಾರ್ಯಕ್ರಮ ನಡೆಯುವುದು ಸ್ವಾಭಾವಿಕ. ಆದರೆ, ಈ ಪುಣ್ಯ ಕ್ಷೇತ್ರದಲ್ಲಿ ತನ್ನದೇಯಾದ ಸಾಧನೆಯಿಂದ ಸಮಾಜಕ್ಕೆ ಬೆಳಕಾಗುವ ಡಿ.ಆರ್.ಮೇಘಶ್ರೀವಿಕ್ರಮಸಿಂಹರವರನ್ನು ಸನ್ಮಾನಿಸುವ ಕಾರ್ಯವನ್ನು ಇಲ್ಲಿನ ಗ್ರಾಮಸ್ಥರು ಹಮ್ಮಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಗುರುತರವಾದ ಜವಾಬ್ದಾರಿ ಮೇಘಶ್ರೀ ಮೇಲಿದೆ. ತನ್ನ ಎಲ್ಲಾ ಬುದ್ದಿ ಕೌಶಲ್ಯವನ್ನು ಉಪಯೋಗಿಸಿ ಎಲ್ಲಾ ವರ್ಗದ ಬಡ ಜನರ ಏಳಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಕಿವಿ ಮಾತು ಹೇಳಿದರು.
ಮಾಜಿ ಪ್ರಧಾನ ಬಿ.ವೀರಣ್ಣ ಮಾತನಾಡಿ, ನಮ್ಮ ಗ್ರಾಮದಲ್ಲೇ ಹುಟ್ಟಿ ಎಲ್ಲರೊಂದಿಗೂ ವಿಶ್ವಾಸವನ್ನು ಗಳಿಸಿದ ಬಿ.ಆರ್.ಮೇಘಶ್ರೀ ಜಿಲ್ಲಾಧಿಕಾರಿಯಂತಹ ಹುದ್ದೆಯನ್ನು ಪಡೆದಿರುವುದು ಗ್ರಾಮಕ್ಕಷ್ಟೇಯಲ್ಲ, ನಮ್ಮ ಜಿಲ್ಲೆಗೆ ಹೆಚ್ಚು ಗೌರವ ತಂದುಕೊಟ್ಟಂತೆ. ಗ್ರಾಮೀಣ ಭಾಗದಲ್ಲಿ ಓದುವ ವಿದ್ಯಾರ್ಥಿಗಳಿಗೆ ಉತ್ತಮ ಹುದ್ದೆ ಪಡೆಯುವುದಿಲ್ಲ ಎಂಬ ಎಲ್ಲರ ಮಾತನ್ನು ಮೇಘಶ್ರೀ ಸುಳ್ಳಾಗಿಸಿದ್ಧಾಳೆ. ಅವರು ಮಾಡಿರುವ ಅತ್ಯಮೂಲ್ಯ ಸಾಧನೆ ಎಲ್ಲರಿಗೂ ಮಾರ್ಗದರ್ಶನವಾಗಲಿ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಘಶ್ರೀಯವರ ಆದರ್ಶಗಳು ಮೈಗೂಡಿಸಿಕೊಳ್ಳಲಿ ಎಂದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಎಚ್.ಶಿವರುದ್ರಪ್ಪ, ಸರ್ವಮಂಗಳ, ಗೀತಮ್ಮ ಮುಂತಾದವರನ್ನು ಸನ್ಮಾನಿಸಲಾಯಿತು. ಕುಮಾರಿ ಸಂಧ್ಯಾಶಿವಕುಮಾರ್‍ರವರಿಂದ ಭರತನಾಟ್ಯ ಕಾರ್ಯಕ್ರಮ ನಡೆಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಿ.ಆರ್.ಮೇಘಶ್ರೀವಿಕ್ರಮಸಿಂಹ, ನಾನು ಪ್ರಾರಂಭದಿಂದಲೂ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ನೀಡುತ್ತಾ ಬಂದೆ. ನಮ್ಮ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರು ನನಗೆ ಸದಾಕಾಲ ಮಾರ್ಗದರ್ಶನ ಮಾಡುತ್ತಿದ್ದರು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಬೇರೆಯಾವುದೇ ವಿಷಯಗಳ ಬಗ್ಗೆ ನಾನು ಗಮನಹರಿಸುತ್ತಿದ್ದಿಲ್ಲ. ಐಎಎಸ್ ಪದವಿ ಪೂರೈಸುವುದು ಕಷ್ಟಕರವೆಂಬ ಭಾವನೆ ಬಹುತೇಕರಲ್ಲಿದೆ. ಆದರೆ, ಪ್ರಾರಂಭದಲ್ಲಿ ಸ್ವಲ್ಪಕಷ್ಟವಾದರೂ ವಿಷಯವನ್ನು ಅರಿತು ನಡೆದಂತೆಲ್ಲಾ ಎಲ್ಲಾ ವಿಷಯ ಸುಲಭವಾಗುತ್ತವೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಪರಿಶ್ರಮಿಸುವ ವಿದ್ಯಾರ್ಥಿಗಳು ಇಂತಹ ಪದವಿಯನ್ನು ಅಲಂಕರಿಸಲು ಸಾಧ್ಯವೆಂಬುವುದು ಇಂದು ರುಜುವಾತಾಗಿದೆ. ನನ್ನ ಸಾಧನೆ ಕಡಿಮೆ ಇದ್ದರೂ ಸಹ ಗ್ರಾಮದ ಜನರು ನನ್ನ ಮೇಲೆ ಅಪಾರವಾದ ವಿಶ್ವಾಸ ಗೌರವವಿಟ್ಟು ಸನ್ಮಾನಿಸಿದೆ. ಇದಕ್ಕೆ ನಾನು ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುವೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಂ.ಓಂಕಾರಪ್ಪ, ಡಾ.ಚಂದ್ರಾನಾಯ್ಕ, ಎಸ್.ರುದ್ರಮುನಿ, ವಿಕ್ರಮಸಿಂಹ, ರತ್ನನಾಯಕಿ, ಡಾ.ಕೃಷ್ಣಸ್ವಾಮಿ, ಪ್ರತಾಪಸಿಂಹ, ನಿವೃತ್ತ ಡಿವೈಎಸ್ಪಿ ಎಚ್.ಆಂಜನೇಯ, ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅಶ್ವತ್ಥನಾಯಕ, ಡಿ.ಎಸ್.ಮಲ್ಲಿಕಾರ್ಜುನ, ಎಂ.ಎನ್.ಶಿವಲೀಲಾ, ಮಧುಮತಿ, ಅನ್ವರ್ ಮಾಸ್ಟರ್, ಶಿವಾನಂದ, ಕುಮಾರ್, ಸುಧಾ, ದ್ಯಾಮಯ್ಯ, ಮಹಬಲೇಶ್ವರ, ಮಹಂತೇಶ್, ಡಿ.ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.