ಬಂಡಾಯ ಸಾಹಿತ್ಯ ಸಂವಾದಕ್ಕೆ ಚಾಲನೆ

0
24

 ಚಿತ್ರದುರ್ಗ

         ಸಮಾನತೆ ಮತ್ತು ಸಹಿಷ್ಣುತೆ ವಿರೋಧಿ ವಲಯಗಳು ಪ್ರಬಲವಾಗಿ ಬೆಳೆಯುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಗತಿಪರರಲ್ಲಿ ಒಗ್ಗಟ್ಟು ಮೂಡಿಸುತ್ತಲೇ ಸಂವಾದನೀಯ ಸಮಾಜ ನಿರ್ಮಾಣದತ್ತ ಮುನ್ನಡೆಯಬೇಕಾದ ಅನಿವಾರ್ಯಯತೆ ಇದೆ ಎಂದು ಖ್ಯಾತ ಸಾಹಿತಿ, ಬಂಡಾಯ ಸಾಹಿತ್ಯ ಸಂಘಟನೆಯ ರೂವಾರಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಹೇಳಿದರು

         ನಗರದ ತರಾಸು ರಂಗಮಂದಿರಲ್ಲಿ ಬಂಡಾಯ ಸಾಹಿತ್ಯ ಸಂಘಟನೆ: ಕರ್ನಾಟಕ ಆಯೋಜಿಸಿದ್ದ ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ ಪರಿಕಲ್ಪನಾತ್ಮಕ ಚಿಂತನೆ ಕುರಿತ ಎರಡು ದಿನಗಳ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

          ರಾಜಕೀಯ ಪಕ್ಷಗಳು ಮತಕ್ಕಾಗಿ ಏನು ಬೇಕಾದರೂ ಮಾಡುತ್ತವೆ. ಇವು ಜಾತಿವಾದ, ಕೋಮುವಾದವನ್ನು ವಿರೋಧಿಸುವಾಗ ಚುನಾವಣಾ ರಾಜಕೀಯವೇ ಈ ಪಕ್ಷಗಳಿಗೆ ಪ್ರಧಾನವಾಗಿರುತ್ತದೆ. ಸಾಂಸ್ಕತಿಕ ಕ್ಷೇತ್ರವು ಸಾಮಾಜಿಕ ಪಿಡುಗುಗಳ ವಿರೋಧಕ್ಕಾಗಿ ರಾಜಕೀಯ ಪಕ್ಷಗಳ ಬತ್ತಳಿಕೆಯ ಬಾಣವಾಗದೆ ಅಸಹಿಷ್ಣುತೆ, ಅಸಮಾನತೆಗಳ ವಿರುದ್ಧ ಜನ ಸಮುದಾಯದಲ್ಲಿ ಜನಾಂದೋಲನ ಬೀಜ ಬಿತ್ತುವ ಸಾಂಸ್ಕತಿಕ ಕೆಲಸವಾಗಬೇಕಿದೆ ಎಂದರು.

        ಇಂದು ದೇಶ ಎದುರಿಸುತ್ತಿರುವ ಸವಾಲು ಮತ್ತು ಸಮಸ್ಯೆಗಳು 20ನೇ ಶತಮಾನಕ್ಕಿಂತ ಭಿನ್ನವಾಗಿವೆ. ಸಂವಾದನೀಯ, ಸಂವಹನೀಯ ಸಮಾಜ ನಿರ್ಮಾಣ ಮಾಡುವ ಮೂಲಕ ಯುವಮನಸ್ಸುಗಳನ್ನು ತಲುಪಬೇಕಿದೆ. ಯುವ ಮನಸ್ಸುಗಳನ್ನು ಕೃತಿ, ಮಾತು ಮತ್ತು ಸಂವಾದದ ಮೂಲಕ ತಲುಪಬೇಕು. ಆದರೆ ನಾವು ಇಂದು ಜಾತಿವಾದ, ಕೋಮುವಾದವನ್ನು ವಿರೋಧಿಸುತ್ತಾ ರಾಜಕೀಯವಾಗಿ ಉತ್ತರಿಸುತ್ತಾ ಕಾಲವ್ಯಯ ಮಾಡಲಾಗುತ್ತಿದೆ. ಆದರೆ ನಾವು ಜನರನ್ನು ತಲುಪುವ ರೀತಿ, ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಜನರನ್ನು ಮುಟ್ಟುವ ಅವರ ಮನಸ್ಸು ಕಟ್ಟುವ ಕಾರ್ಯ ಮಾಡಬೇಕಿದೆ. ಇದು ಸಾಂಸ್ಕತಿಕ ಜವಾಬ್ದಾರಿಯಾಗಬೇಕು ಎಂದರು.

       20ನೇ ಶತಮಾನದ ಸಮಾನತೆ, ಸೋದರತ್ವ, ಸಹಿಷ್ಣುತೆಗಳು ಮುಪ್ಪುರಿಗೊಂಡು ಆತ್ಮವಿಶ್ವಾಸದ ಬದಲು ಅಸಹಾಯಕತೆ ಕಾಣಿಸತೊಡಗಿದೆ. ಇಂದು ಜಾತ್ಯತೀತ ತತ್ವವು ಗೇಲಿಗೆ ಒಳಗಾಗಿದೆ. ಮೊಂಡುವಾದದ ತುಂಡು ತಂಡಗಳ ತುರಿಕೆ ತೀವ್ರವಾಗುತ್ತಿದೆ. ಇಂಥ ಸಂದರ್ಭದಲ್ಲಿ ಸತ್ಯಶೋಧನೆಯೆ ಸಂವಾದದಿಂದ ನಾವು ಜನಮನ ತಲುಪಬೇಕಾಗಿದೆ ಎಂದರು.

       ಸಾಂಸ್ಕತಿ ಲೋಕದಲ್ಲಿದ್ದ ವಿವೇಕಕ್ಕೆ ಜವಿವೇಕದ ಅಪವ್ಯಾಖ್ಯಾನ ನೀಡಿ ಜನರಲ್ಲಿ ಭಾವೋದ್ರೆಕ ಉಂಟು ಮಾಡಲಾಗುತ್ತಿದೆ. ಧರ್ಮ, ಸಂಸ್ಕತಿ, ದೇಶಭಕ್ತಿ, ದೇಶದ್ರೋಹ ವಿಚಾರಗಳಲ್ಲಿ ಏಕಪಕ್ಷೀಯವಾಗಿ ತೀರ್ಪು ನೀಡಲಾಗುತ್ತಿದ್ದು, ಧರ್ಮವನ್ನೇ ಸಂಸ್ಕತಿ ಎಂದು ಬಿಂಬಿಸುತ್ತಾ ರಾಷ್ಟ್ರೀಯತೆಯನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಅಪವ್ಯಾಖ್ಯಾನಗಳನ್ನೇ ನಿಜ ವ್ಯಾಖ್ಯಾನಗಳೆಂದು ಬಿಂಬಿಸಲಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಸಾಹಿತಿಗಳು ಈ ಅಪವ್ಯಾಖ್ಯಾನಗಳಿಗೆ ನಿಜವ್ಯಾಖ್ಯಾನ ನೀಡಬೇಕಾಗಿದೆ ಎಂದರು.

        ಸೈದ್ಧಾಂತಿಕರಹಿತ ರಾಜಕೀಯ ಪಕ್ಷಗಳ ಪಾಲುದಾರರಾಗುವ ಬದಲು ಸೈದ್ಧಾಂತಿಕ ವಿಚಾರಗಳನ್ನು ಸೃಜನಾತ್ಮಕ ರೀತಿಯಲ್ಲು ಜನಮನಕ್ಕೆ ಮುಟ್ಟಿಸಬೇಕು. ಸೈದ್ಧಾಂತಿಕ ವಿರೋಧದ ಪಕ್ಷಗಳ ವಿರುದ್ಧ ಮಾತನಾಡುತ್ತಾ ಕಾಲವ್ಯಯ ಮಾಡುವುದು ವ್ಯರ್ಥ ರಾಜಕಾರಣವಾಗುತ್ತದೆ. ಜನ ನಮಗೆ ಮುಖ್ಯವಾಗಿದ್ದು, ಅವರೇ ನಮ್ಮ ಆದ್ಯತೆ. ಆನರಲ್ಲಿ ಸಹಿಷ್ಣುತೆ, ಸಮಾನತೆ ರೂಪಿಸುವ ಪ್ರಕ್ರಿಯೆ ಆಗಬೇಕು. ರಾಜಕೀಯ ಪಕ್ಷಗಳ ಜನವಿರೋಧಿ ಸತ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಆದರೆ ನಾವು ರಾಜಕೀಯ ಪಕ್ಷಗಳ ಪಾಲಾಗದೆ ಜನರಲ್ಲಿ ಒಂದಾಗಬೇಕು, ಅವರಿಗೆ ಹತ್ತಿರವಾದ ಸಾಮಸ್ಕತಿ ಸಂವಾದಕ್ಕೆ ಸಿದ್ಧವಾಗಬೇಕು ಎಂದರು.

       ಇತ್ತೀಚೆಗೆ ಪ್ರಗತಿಪರರೆನಿಸಿಕೊಂಡವರಲ್ಲಿ ವಿವಿಧ ಗುಂಪುಗಳಾಗಿವೆ. ಅವುಗಳ ಗುರಿ ಒಂದೇ ಆಗಿದ್ದರೂ ಗುಂಪು ಒಂದಾಗಿಲ್ಲ. ಸಹಬಾಳ್ವೆ, ಸೌಹಾರ್ದತೆ, ಸಹಿಷ್ಣುತೆ, ಸಮಾನತೆಗಳೇ ಪ್ರಗತಿಪರರ ಗುರಿ. ಆದ್ದರಿಂದ ನಮ್ಮೊಳಗಿನ ಸಂವಾದದ ಕೊರತೆ ನೀಗಿಸಿಕೊಂಡು ವೈಚಾರಿಕ ವಿರೋಧಿಗಳನ್ನು ಎದುರಿಸುವ ಹೊಸ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕು. ವೀರಾವೇಶದ ಮಾತನಾಡಿ ತೆರೆಯ ಮೇಲಿನ ಹೀರೋಗಳಾಗುವುದಕ್ಕಿಂತ ಜನಮನ ಪರಿವರ್ತನೆ ಮತ್ತು ಪಲ್ಲಟ ಪ್ರಕ್ರಿಯೆಯ ಸಾಂಸ್ಕತಿ ನಾಯಕ್ವವನ್ನು ರೂಪಿಸಬೇಕು ಎಂದರು.

         ಅಂಬೇಡ್ಕರ್‍ವಾದ, ಗಾಂಧಿವಾದ, ಲೋಹಿಯಾವಾದ, ಮಾಕ್ರ್ಸ್‍ವಾದ ಮುಂತಾದ ಸೈದ್ಧಾಂತಿಕ ಸಾಮಾನ್ಯ ಪ್ರಗತಿಪರ ವಲಯದವರನ್ನು ಒಟ್ಟಿಗೇ ಒಳಗೊಳ್ಳುವ ವಿಶಾಲ ವೇದಿಕೆ ಬಂಡಾಯ ಸಾಹಿತ್ಯ ಸಂಘಟನೆ. ಎಲ್ಲ ಪ್ರಗತಿಪರರೂ ಸೇರಿ ಜನವಿರೋಧಿ ಸಾಂಸ್ಕತಿಕ ರಾಜಕಾರಣ ಮತ್ತು ಪ್ರಭುತ್ವಕ್ಕೆ ಸಾಂಸ್ಕತಿಕ ಪ್ರತಿರೋಧ ಒಡ್ಡಬೇಕು. ಈ ದೃಷ್ಟಿಯಿಂದ ಪರಂಪರೆ ಪ್ರಜ್ಞೆ ಮತ್ತು ಪ್ರಗತಿ ಪ್ರಜ್ಞೆ ಒಂದಾಗಬೇಕು.

          ಪರಂಪರೆಯಲ್ಲಿರುವ ಪ್ರಗತಿಪರ ನೆಲೆಗಳನ್ನು ಅರ್ಥ ಮಾಡಿಕೊಂಡು ಮರು ವ್ಯಾಖ್ಯಾನದ ಮೂಲಕ ಪ್ರಸ್ತುತಪಡಿಸಿಕೊಳ್ಳಬೇಕು. ಜನರನ್ನು ತಲುಪಬೇಕು. ಇದರಿಂದ ಧರ್ಮ ಮತ್ತು ಸಂಸ್ಕತಿಗಳ ಅಪವ್ಯಾಖ್ಯಾನದ ಮೂಲಕ ಭಾರತ ಭಾವೋದ್ರೀಕರಣ ಮಾಡುತ್ತಿರುವ ಜನವಿರೋಧಿ ಶಕ್ತಿಗಳಿಗೆ ಉತ್ತರವಾಗಬೇಕು. ಹಿಂಸೆ ವಿರೋಧಿ ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಬೆಲೆ ತರಬೇಕು. ಈ ನಿಟ್ಟಿನಲ್ಲಿ ಪ್ರಗತಿಪರ ವಲಯವರು ವೈಪರೀತ್ಯ ತೊರದು ಪ್ರಜಾಸತ್ತಾತ್ಮಕವಾದ ಒಳ ಸಂವಾದ ನಡೆಸಬೇಕು ಎಂದರು.

          ಪರಂಪರೆ ಪ್ರಜ್ಞೆ, ಪ್ರಗತಿ ಪ್ರಜ್ಞೆ, ಸಮಕಾಲೀನ ಪ್ರಜ್ಞೆ ಬೆಳೆಸಿಕೊಂಡು ಮನುಷ್ಯರಾಗಬೇಕು. ಆದ್ದರಿಂದ ಇಂದು ಜನರಿಗೆ ಸತ್ಯವನ್ನು ತಿಳಿಸಿ ಮನವರಿಕೆ ಮಾಡಿಕೊಡುವುದು ನಮ್ಮ ಸಾಮಾಜಿಕ ಮತ್ತು ಸಾಂಸ್ಕತಿಕ ಜವಾಬ್ದಾರಿ ಎಂದರು.

           ಹಿರಿಯ ಚಿಂತಕ ಜಿ.ರಾಮಕೃಷ್ಣ ಮಾತನಾಡಿ, ಇಂದಿನ ಸಂದರ್ಭದಲ್ಲಿ ರಾಜಕೀಯ, ಸಾಂಸ್ಕತಕ ಕಲುಷಿತವಾಗಿರುವಷ್ಟು ಸಾಹಿತ್ಯ ಕಲುಷಿತಗೊಂಡಿಲ್ಲ. ರಾಷ್ಟ್ರೋತ್ಥಾನದಂತಹ ಸಾಹಿತ್ಯವು ಜನರನ್ನು ವಿಮುಖಗೊಳಿಸುತ್ತಿದ್ದು, ಬುಹತ್ವದ ಭಾವನೆಗೆ ಧಕ್ಕೆ ತರುತ್ತಿದೆ. ಇತಿಹಾಸಕಾರರ ಜಾಗದಲ್ಲಿ ಉಪಹಾಸಕಾರರು ಬರುತ್ತಿದ್ದಾರೆ. ನಿಜ ಇತಿಹಾಸದಿಂದ ವಿಮುಖಗೊಳಿಸಿ, ಪುರಾಣ ಪ್ರೇರಿತ ಇತಿಹಾಸಕ್ಕೆ ಇಂದಿನ ಪ್ರಭುತ್ವ ಹಾಗೂ ಸಾಮಾಜಿಕ ವಲಯ ಆದ್ಯತೆ ನೀಡುತ್ತಿದೆ ಎಂದರು.

          ವಾಸ್ತವವನ್ನು ವಾಸ್ತವವಾಗಿ ಗ್ರಹಿಸುವುದೇ ಬಂಡಾಯ. ಆದರೆ ಇಂದು ವಾಸ್ತವಕ್ಕಿಂತ ಅವಾಸ್ತವಗಳು, ಗೊಂದಲಗಳು, ಅಸತ್ಯಗಳು ಹೆಚ್ಚು ವೈಭವೀಕರಣಗೊಳ್ಳುತ್ತಿವೆ. ಅತಿಮಾನುಷ ಅಮಾನುಷ ಕುಯುಕ್ತಿಗಳನ್ನು ಮಾಡಲಾಗುತ್ತಿದೆ ಎಂದರು.
ಪ್ರಸ್ತುತದಲ್ಲಿ ಸರ್ವಾಧಿಕಾರಿ, ನಿರಂಕುಶ ಪ್ರಭುತ್ವದ ವಿರುದ್ಧ ಮುಕ್ತ ಹಾಗೂ ಜಂಟಿ ಹೋರಾಟ ಮಾಡುವುದು ಇಂದಿನ ಅನಿವಾರ್ಯವಾಗಿದೆ ಎಂದರು.

         ಲೇಖಕಿ ಬಾನು ಮುಷ್ತಾಕ್ ಮಾತನಾಡಿ, ಇಂದು ಸಮಾಜದಲ್ಲಿ ಮಾತನ್ನು ವ್ಯವಸ್ಥಿತವಾಗಿ ಮರೆಸಲಾಗುತ್ತಿದೆ. ಗುಂಪು ಹತ್ಯೆ, ದಲಿತರು, ಮಹಿಳೆಯರು, ಬರಹಗಾರರ ಮೇಲೆ ಕ್ರೌರ್ಯಯುತವಾಗಿ ದಾಳಿ ಮಾಡಲಾಗುತ್ತಿದೆ. ಆಳುವವರು ಕಾರ್ಪೋರೇಟ್‍ಗಳಿಗೆ ದಾಸರಾಗಿ ಮಹಿಳೆಯರ ಮೇಲೆ ಹಿಂಸೆ, ಕ್ರೌರ್ಯ, ಕೋಮುವಾದ, ಅಸ್ಪಶ್ಯತೆ, ರೈತರ ಭೂಮಿ ಕಬಳಿಕೆ, ಪರಿಸರದ ಮೇಲಿನ ಆಕ್ರಮಣದಂತಹ ವ್ಯವಸ್ಥೆ ಗಟ್ಟಿಯಾಗಿ ಬೇರೂರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

          ಕಾರ್ಯಕ್ರಮದಲ್ಲಿ ಆರ್.ಜಿ.ನಾಗರಾಜ್ ಸಂಪಾದಿಸಿದ ಬಂಡಾಯದ ಸ್ಮರಣ ಸಂಚಿಕೆಯನ್ನು ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ಈ ವೇಳೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಜಿ.ಜಗದೀಶ್, ಹಿರೇಹಳ್ಳಿ ಮಲ್ಲಿಕಾರ್ಜುನ, ಕೆ.ಎಂ.ವೀರೇಶ್, ಸತೀಶ್ ರೆಡ್ಡಿ ಸೇರಿದಂತೆ ಸಾಹಿತಿಗಳು, ಬರಹಗಾರರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here