ಶಿರಾ: ಬರದ ಬೀಡೆಂದು ಹೆಸರಾದ ಶಿರಾ ತಾಲ್ಲೂಕು ಶೈಕ್ಷಣಿಕವಾಗಿ ಎಂದಿಗೂ ಬರದ ಬೀಡಲ್ಲವೆಂಬಂತೆ ತಾಲ್ಲೂಕಿನ ಮೂರು ಮಂದಿ ವಿದ್ಯಾರ್ಥಿಗಳು ಐ.ಎ.ಎಸ್. ಪರೀಕ್ಷೆಯಲ್ಲಿ ರ್ಯಾಂಕ್‍ಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ತಾಲ್ಲೂಕಿನ ಯರಗುಂಟೆ ಗ್ರಾಮದ ಗೌಡಗೆರೆ ಹೋಬಳಿಯ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ವೈ.ಬಿ.ಕಾಂತಪ್ಪ ಅವರ ಪುತ್ರಿ ಅರುಣ ಎಂಬ ವಿದ್ಯಾರ್ಥಿನಿ 291ನೇ ರ್ಯಾಂಕ್ ಪಡೆದಿದ್ದಾರೆ.
ಹುಲಿಕುಂಟೆ ಹೋಬಳಿಯ ತಡಕಲೂರು ಗ್ರಾಮದ ರೈತ ಮಹಾಲಿಂಗಪ್ಪ ಅವರ ಪುತ್ರಿ ಅರುಣ 308ನೇ ರ್ಯಾಂಕ್ ಪಡೆದಿದ್ದು ಇದೇ ಸಬ್ ರಿಜಿಸ್ಟ್ರಾರ್ ಆಗಿದ್ದ ಶಿರಾ ತಾಲ್ಲೂಕಿನ ಯಂಜಲಗೆರೆ ಗ್ರಾಮದ ದಿ.ಧರ್ಮೇಶ್ ಅವರ ಪುತ್ರ ಡಾ.ಶ್ರೀಕಾಂತ್ 680ನೇ ರ್ಯಾಂಕ್ ಪಡೆಯುವ ಮೂಲಕ ಬರದ ಬೀಡಿನಲ್ಲೂ ಶೈಕ್ಷಣಿಕ ಹಸಿರ ಸಿರಿ ಮೂಡಿಸಿದ್ದಾರೆ. ಈ ಮೂರು ಮಂದಿ ಪ್ರತಿಭಾವಂತರ ಬಗ್ಗೆ ತಾಲ್ಲೂಕಿನಲ್ಲಿ ಪ್ರಶಂಸೆ ವ್ಯಕ್ತವಾಗಿದೆ.