ಶಿರಾ :
ನಗರದ ಜನತೆಗೆ ಕುಡಿಯುವ ನೀರನ್ನು ಪೂರೈಸುವ ದೊಡ್ಡ ಕೆರೆಯ ಜಲಸಂಗ್ರಹಾಗಾರಕ್ಕೆ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಶನಿವಾರ ಭೇಟಿ ನೀಡಿದರು.
ಹೇಮಾವತಿಯ ನೀರು ಹಾಗೂ ಕಳೆದ ಕೆಲ ದಿನಗಳಿಂದ ಬಂದ ಮಳೆಯ ನೀರಿನಿಂದ ಶಿರಾ ದೊಡ್ಡ ಕೆರೆಯು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅವರು ಕೆರೆಯ ಹಾಗೂ ನೀರಿನ ಶುದ್ಧೀಕರಣ ಘಟಕವನ್ನು ವೀಕ್ಷಣೆ ಮಾಡಿದರು. ನೀರನ್ನು ಶುದ್ಧೀಕರಿಸಲು ಹಾಕುವ ಆಲಂ ಸೇರಿದಂತೆ ದಿನಂ ಪ್ರತಿ ಶುದ್ಧೀಕರಿಸಲಾಗುವ ನೀರಿನ ಪ್ರಮಾಣದ ಬಗ್ಗೆ ಹಾಗೂ ನಗರದ ಜನತೆಗೆ ಪೂರೈಸುವ ನೀರಿನ ಬಗ್ಗೆ ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ ಏರಿಯ ಮೇಲೆ ನಾಡಜಾಲಿ ಗಿಡಗಳು ಬೆಳೆದಿದ್ದು, ಈವರೆಗೂ ಇದನ್ನು ಸ್ವಚ್ಛಗೊಳಿಸುವ ಕೆಲಸವಾಗಿಲ್ಲ. ಮೃತ ಕೋಳಿಗಳ ತ್ಯಾಜ್ಯವನ್ನು ಕೆರೆಗೆ ತಂದು ಹಾಕಲಾಗುತ್ತಿದೆ. ಕುಡಿಯುವ ನೀರನ್ನು ಸಂರಕ್ಷಿಸುವ ದೃಷ್ಟಿಯಿಂದ ನೀರಿನ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಂಡಿಲ್ಲವಾದ್ದರಿಂದ ಕೂಡಲೆ ನೀರಿನ ಸಂರಕ್ಷಣೆಯ ಜೊತೆಗೆ ನಾಡ ಜಾಲಿ ಗಿಡಗಳನ್ನು ಕಡಿದು, ಸ್ವಚ್ಛತೆ ಕಾಪಾಡಲು ನಗರಸಭೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ದೊಡ್ಡಕೆರೆಯು ಸಂಪೂರ್ಣ ತುಂಬಿ ಕೋಡಿಯಿಂದ ನೀರು ಹೊರ ಬೀಳಲು ಕೇವಲ ಒಂದು ಅಡಿ ಮಾತ್ರ ಬಾಕಿ ಇದ್ದು, ಇದು ಸಂತಸದ ವಿಚಾರ. ಕೆರೆಯು ಸಂಪೂರ್ಣ ಭರ್ತಿಯಾದರೆ ಒಂದು ವರ್ಷದವರೆಗೂ ಕುಡಿಯುವ ನೀರು ನಗರದ ಜನತೆಗೆ ಲಭ್ಯವಾಗಲಿದೆ. ಶಿರಾ, ಕಳ್ಳಂಬೆಳ್ಳ ಕೆರೆಗಳು ತುಂಬಿದ ನಂತರ ಹೇಮಾವತಿ ಜಲಾಶಯದ ನೀರು ಮದಲೂರು ಕೆರೆಗೂ ಹರಿಯಲಿದೆ. ಈ ವರ್ಷ ಮದಲೂರು ಕೆರೆಗೆ ನೀರು ಹರಿಯುತ್ತದೆ ಎಂಬ ಸಂಪೂರ್ಣ ನಂಬಿಕೆ ನಮಗಿದೆ ಎಂದರು.
ಕೆರೆಯು ತುಂಬಿದೆ ಎಂದು ನೀರನ್ನು ವ್ಯರ್ಥ ಮಾಡುವ ಪ್ರಯತ್ನವನ್ನು ಯಾರೂ ಮಾಡಬಾರದು. ನೀರನ್ನು ಮಿತವಾಗಿ ಬಳಸುವ ಕೆಲಸವಾಗಬೇಕು. ಈ ದಿಶೆಯಲ್ಲಿ ನಗರಸಭೆ ನೀರನ್ನು ವ್ಯರ್ಥಗೊಳ್ಳದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಚಿದಾನಂದ್ ಎಂ.ಗೌಡ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ