ಗುಬ್ಬಿ
ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವತ್ತ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಕಾರ್ಯ ಮಾಡಬೇಕಿದೆ. ಕೆಮ್ಮಿನ ವೈರಸ್ ಹರಡುವ ಭೀತಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೂಡಲೇ ಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತುರ್ತುಕ್ರಮ ವಹಿಸಲು ಎಲ್ಲೆಂದರಲ್ಲಿ ತಲೆ ಎತ್ತಿರುವ ಕೋಳಿ ಫಾರಂಗಳು ಮತ್ತು ಚಿಕನ್ ಸೆಂಟರ್‍ಗಳಿಂದ ಸಾಕಷ್ಟು ಕಿರಿಕಿರಿಯಾಗಿದೆ.
ಗ್ರಾಮದ ಸ್ವಾಸ್ಥ್ಯ ಹಾಳುವ ಮಾಡುವ ಕೋಳಿ ತ್ಯಾಜ್ಯ ರಸ್ತೆ ಬದಿಯಲ್ಲೇ ಎಸೆಯುತ್ತಿರುವುದು ನಾಯಿಗಳು ಮತ್ತು ನೊಣಗಳ ಹಾವಳಿಗೆ ಕಾರಣವಾಗಿದೆ. ಸ್ವಚ್ಚತೆ ಕಾಣದೆ ಈಗಾಗಲೇ ಮಾರಕ ರೋಗಗಳು ಕಾಣಿಸಿಕೊಂಡಿದೆ. ಪರವಾನಗಿ ನೀಡುವ ಮುನ್ನ ಅಧಿಕಾರಿಗಳು ಅವಲೋಕಿಸಬೇಕಿತ್ತು. ಈ ಬಗ್ಗೆ ಕಠಿಣ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಡೆಂಗ್ಯು ಪ್ರಕರಣಗಳು ನಮ್ಮಲ್ಲಿ ಕಾಣಿಸಿಕೊಂಡಿದೆ. 17 ಕ್ಕೂ ಹೆಚ್ಚು ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿದ್ದು, ನೂರಾರು ಮಂದಿ ಜ್ವರದಿಂದ ನರಳಿದ್ದಾರೆ. ಕೊಂಡ್ಲಿ ಮಾವಿನಹಳ್ಳಿ, ಮೆಳೇಕಲ್ಲಹಳ್ಳಿ ಹಾಗೂ ತಿಪ್ಪೂರುಹಟ್ಟಿಗಳಲ್ಲಿ ಜ್ವರದಿಂದ ಸಾಕಷ್ಟು ಮಂದಿ ಬಳಲಿದ್ದಾರೆ.
ಈ ಸ್ಥಳದಲ್ಲಿ ಸಂಚಾರಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುವ ಜತೆಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಿಂದ ಸ್ವಚ್ಚತೆ, ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್, ಜಂಗಲ್ ಕಟಿಂಗ್ ಹೀಗೆ ಅನೇಕ ಕ್ರಮವಹಿಸಲು ಕಾರ್ಯುನಿರ್ವಹಣಾಧಿಕಾರಿಗಳಿಗೆ ಸೂಚಿಸಿದ ಅವರು 24 ಗಂಟೆಗಳ ಚಿಕಿತ್ಸೆ ಸೌಲಭ್ಯ ಹೇಳುವ ಆಸ್ಪತ್ರೆಯಲ್ಲಿ ಸಂಜೆ ಬಳಿಕ ಶುಶ್ರೂಕಿಯೂ ಕೂಡ ಇರುವುದಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳಿವೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುವ ಕ್ರಮವಹಿಸಿ ಎಲ್ಲಾ ಔಷಧಿಗಳು ದೊರೆಕಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.
ಬಸವಯ್ಯನಪಾಳ್ಯ ಎಂಬ ಪುಟ್ಟ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕೆ ಕಳೆದ ಮೂರು ವರ್ಷದಿಂದ ನಾನೇ ಖುದ್ದು ಪರದಾಡುತ್ತಿದ್ದೇನೆ ಎಂದು ಅಸಹಾಯಕತೆ ತೋಡಿಕೊಂಡ ಸದಸ್ಯ ಕರೇತಿಮ್ಮಯ್ಯ ಸಂಬಂಧಪಟ್ಟ ನೀರು ಸರಬರಾಜು ಇಂಜಿನಿಯರ್ ಜನಪ್ರತಿನಿಧಿಗಳ ಮಾತು ಕೇಳುವುದಿಲ್ಲ. ಆನ್‍ಲೈನ್ ಮೂಲಕ ಎಲ್ಲಾ ಪೈಪ್‍ಲೈನ್ ಕಾಮಗಾರಿ ಪಟ್ಟಿ ಮಾಡುವ ವೇಳೆ ನಮಗೆ ಕೊಂಚವೂ ಮಾಹಿತಿ ನೀಡದೇ ತಮಗೆ ಬೇಕಾದ ಕೆಲಸವನ್ನು ನಡೆಸುತ್ತಾರೆ. ಒಂದು ಸಿಸ್ಟನ್ ಅಳವಡಿಸಿಕೊಡಲು ಸಾಧ್ಯವಾಗದ ನಮಗೆ ಜನರು ನಿತ್ಯ ಬೈಯುವಂತಾಗಿದೆ ಎಂದು ಬೇಸರವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ನಿರ್ಮಿಸಲಾದ ಶುದ್ದ ಕುಡಿಯುವ ನೀರು ಘಟಕಗಳು ಕೆಟ್ಟು ನಿಂತಿದೆ. ದುರಸ್ಥಿ ಕಾರ್ಯಗಳಿಗೆ ಆರು ತಿಂಗಳಾದರೂ ಕ್ರಮವಹಿಸದ ಎಇಇ ಅವರು ಏಜೆನ್ಸಿ ಮೇಲೆ ಹೇಳುವುದು ಸೂಕ್ತವಲ್ಲ. ಕೂಡಲೇ ದುರಸ್ಥಿ ಮಾಡಿಸುವ ಕಾರ್ಯ ಕುಡಿಯುವ ನೀರು ಸರಬರಾಜು ಇಲಾಖೆ ಮಾಡಬೇಕಿದೆ ಎಂದ ಹೇಳಿದ ಸ್ಥಾಯಿ ಸಮಿತಿ ಅಧ್ಯಕ್ಷ ಅ.ನ.ಲಿಂಗಪ್ಪ ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ವಹಿಸಿದರೇ ಘಟಕಗಳು ಸುರಕ್ಷವಾಗುತ್ತದೆ.
ಆದರೇ ವಹಿಸಿಕೊಂಡ ಏಜೆನ್ಸಿ ರಿಪೇರಿ ನಡೆಸಲು ವಿಳಂಬ ಮಾಡುತ್ತಿದೆ. ಆದರೇ ಕ್ರಮವಹಿಸಬೇಕಾದ ಎಇಇ ಏಜೆನ್ಸಿಗೆ ತಿಳಿಸಿ ದುರಸ್ಥಿ ಮಾಡಬೇಕು ಎಂದು ಸೂಚಿಸಿದರು.ಸಂತೆ ಸುಂಕ ವಸೂಲಿ ಬಗ್ಗೆ ಗ್ರಾಮ ಪಂಚಾಯಿತಿ ನಿಗದಿ ಮಾಡಿದ ಹಣ ವಸೂಲಿ ಮಾಡದೇ ಮನಬಂದಂತೆ ಗುತ್ತಿಗೆದಾರರು ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ ಸದಸ್ಯ ಭಾನುಪ್ರಕಾಶ್ ತರಕಾರಿ ಬೆಳೆದು ಸಂತೆ ತರುವ ಸಣ್ಣ ರೈತನಿಗೆ ಲಾಭದಷ್ಟೇ ಸುಂಕ ವಿಧಿಸುವುದು ಸರಿಯಲ್ಲ.
ಕೃಷಿ ಆಹಾರ ಪದಾರ್ಥಗಳಿಗೆ ಎಷ್ಟಷ್ಟು ಸುಂಕವೆಂದು ನಿಗದಿ ಮಾಡಿದ ರೂಪದಲ್ಲೇ ಹಣ ವಸೂಲಿ ಮಾಡಲು ಸೂಚಿಸಬೇಕು ಎಂದ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಚೇಳೂರು ಆಸ್ಪತ್ರೆಯಲ್ಲಿ ಔಷಧಿ ಪಡೆಯಲು ಬಂದ ರೋಗಿಗಳು ಹೊರಭಾಗದ ಮೆಡಿಕಲ್ ಸ್ಟೋರ್‍ಗೆ ತೆರಳುತ್ತಿದ್ದ ಬಗ್ಗೆ ಸದಸ್ಯ ಕೆಂಪರಾಜು ಆಕ್ಷೇಪ ವ್ಯಕ್ತಪಡಿಸಿದರು.
ನಂತರ ಮಹಿಳಾ ಅಭಿವೃದ್ದಿ, ಸಮಾಜ ಕಲ್ಯಾಣ, ಕೃಷಿ, ಆಹಾರ, ಕಂದಾಯ ಸೇರಿದಂತೆ 29 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ದೀಪಿಕಾ ಮಹೇಶ್, ತಾಪಂ ಇಒ ನರಸಿಂಹಯ್ಯ, ಯೋಜನಾಧಿಕಾರಿ ರಾಜಾನಾಯಕ್ ಸೇರಿದಂತೆ ವಿವಿಧ ಇಲಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
