ಶೈಕ್ಷಣಿಕ ದಾಖಲೆಗಳಿಗೆ ಡಿಜಿ ಲಾಕರ್ ವ್ಯವಸ್ಥೆ ಹಾವೇರಿಯಲ್ಲೇ ಪ್ರಥಮ ಪ್ರಯೋಗ

ಹಾವೇರಿ:

     ಹಾಸ್ಟೇಲ್ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್‍ಕರಣಗೊಳಿಸಿ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವ ಕಾಗದರಹಿತ ಸೌಲಭ್ಯ ಡಿಜಿ ಲಾಕರ್ (ವಿದ್ಯುನ್ಮಾನ ಲಾಕರ್) ವ್ಯವಸ್ಥೆಯನ್ನು ಹಾವೇರಿ ನಗರದ ಪರಿಶಿಷ್ಟ ವರ್ಗದ ಬಾಲಕಿಯರ ಕಾಲೇಜು ವಿದ್ಯಾರ್ಥಿನಿ ನಿಲಯದಲ್ಲಿ ಅನುಷ್ಠಾನಗೊಳಿಸಲಾಗಿದೆ.

     ಸೆಪ್ಟೆಂಬರ್ 20ರ ಗುರುವಾರ ಅಧಿಕೃತವಾಗಿ ಡಿಜಿ ಲಾಕರ್ ವ್ಯವಸ್ಥೆ ಉದ್ಘಾಟನೆಗೊಳ್ಳಲಿದೆ. ರಾಜ್ಯದ ವಿದ್ಯಾರ್ಥಿ ನಿಲಯಗಳ ಪೈಕಿ ಡಿಜಿ ಲಾಕರ್ ವ್ಯವಸ್ಥೆ (ಡಿಜಿಟಲ್‍ಕರಣ ಲಾಕರ್)ಜಾರಿಗೊಳಿಸಿದ ಮೊದಲ ವಿದ್ಯಾರ್ಥಿ ನಿಲಯ ಎಂಬ ಕೀರ್ತಿ ಹಾವೇರಿ ಜಿಲ್ಲೆಗೆ ಸಲ್ಲುತ್ತದೆ.
ಡಿಜಿ ಲಾಕರ್ ವ್ಯವಸ್ಥೆಯ ಪ್ರಗತಿ ಕುರಿತಂತೆ ಮಂಗಳವಾರ ಸಂಜೆ ಈ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಡಿಜಿ ಲಾಕರ್ ವ್ಯವಸ್ಥೆಯನ್ನು ಪರಿಶೀಲಿಸಿ ಇದರ ಉದ್ದೇಶ, ಬಳಕೆ ಕುರಿತಂತೆ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

    ಡಿಜಿಟಲ್ ಇಂಡಿಯಾದ ಭಾಗವಾಗಿ ವಿದ್ಯಾರ್ಥಿಗಳ ಆಧಾರ ಕಾರ್ಡ್, ಜಾತಿ, ಆದಾಯ ಪ್ರಮಾಣಪತ್ರ ಸೇರಿದಂತೆ ಶೈಕ್ಷಣಿಕ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್)ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ಸುರಕ್ಷಿತ ತಾಣವಾಗಿದೆ.

     ಬ್ಯಾಂಕ್‍ಗಳಲ್ಲಿ ಒಡವೆ, ಹಣವನ್ನು ಸುರಕ್ಷಿತವಾಗಿ ಕಾಯ್ದಿರಿಸಲು ಲಾಕರ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಕಾಗದ ರಹಿತ ಆಡಳಿತ ಪರಿಕಲ್ಪನೆಯ ಭಾಗವಾಗಿ ದಾಖಲೆಗಳನ್ನು ಗಣಕೀಕರಣಗೊಳಿಸಿ ಡಿಜಿ ಲಾಕರ್‍ನಲ್ಲಿ ಸುರಕ್ಷಿತವಾಗಿ ಇರಿಸಲು ಹಾಗೂ ಅಗತ್ಯವಿದ್ದಾಗ ಬಳಸಲು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

      ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜು ಪ್ರವೇಶ, ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಹಾಗೂ ವಿವಿಧ ಉದ್ಯೋಗ ಸಂದರ್ಶನ ಸಂದರ್ಭದಲ್ಲಿ ತಮ್ಮ ದಾಖಲೆ ಪತ್ರಗಳನ್ನು ಕಾಗದ ರೂಪದಲ್ಲಿ ಸದಾ ಕೊಂಡ್ಯೂವ ವ್ಯವಸ್ಥೆಯನ್ನು ಡಿಜಿ ಲಾಕರ್ ದೂರಮಾಡುತ್ತದೆ. ತಮಗೆ ಅವಶ್ಯವಿದ್ದಾಗ ಮೊಬೈಲ್ ಅಥವಾ ಡೆಸ್ಕಟಾಪ್, ಲ್ಯಾಪಟಾಪ್‍ಗಳಲ್ಲೇ ಆನ್‍ಲೈನ್ ಮುಖಾಂತರ ಹಂಚಿಕೊಳ್ಳಬಹುದು. ಡೌನ್‍ಲೋಡ ಮಾಡಿಕೊಳ್ಳಬಹುದು ಹಾಗೂ ಡಿಜಿಟಲ್ ರೂಪದಲ್ಲಿ ತೋರಿಸಬಹುದಾಗಿದೆ. ಈ ವ್ಯವಸ್ಥೆಗೆ ಈಗಾಗಲೇ ದೇಶದ 13ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು, ತಾಂತ್ರಿಕ ಸಂಸ್ಥೆಗಳು ಕೈಜೋಡಿಸಿವೆ. ಮುಂದಿನ ಹಂತದಲ್ಲಿ ಎಲ್ಲ ಉದ್ಯೋಗದಾತ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಡಿಜಿ ಲಾಕರ್ ವ್ಯವಸ್ಥೆಗೆ ಒಳಪಡಲಿವೆ.

      ಹಾವೇರಿ ಬುಡಕಟ್ಟು ಕಾಲೇಜು ವಿದ್ಯಾರ್ಥಿನಿಯರ ನಿಲಯದಲ್ಲಿ ವಾಸವಾಗಿರುವ 76 ವಿದ್ಯಾರ್ಥಿನಿಯರ ಶೈಕ್ಷಣಿಕ ದಾಖಲೆ ಹಾಗೂ ಪ್ರಮಾಣಪತ್ರಗಳನ್ನು ಡಿಜಿ ಲಾಕರ್‍ನಲ್ಲಿ ಅಳವಡಿಸಲಾಗಿದೆ. ಹಂತ ಹಂತವಾಗಿ ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಡಿಜಿ ಲಾಕರ್ ವ್ಯವಸ್ಥೆಯಡಿ ತರುವ ಯೋಜನೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ಪ್ರಮಾಣಪತ್ರಗಳು, ಶೈಕ್ಷಣಿಕ ದಾಖಲೆಗಳು ಕಳೆದುಹೋಗುವ, ಹರಿದುಹೋಗುವ , ಸವಕಳಿಯಾಗುವ ಆತಂಕ ದೂರವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು.

      ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಸುರೇಶ ರೆಡ್ಡಿ ಅವರು ವಿದ್ಯಾರ್ಥಿ ನಿಲಯಕ್ಕೆ ಸಂಬಂದಿಸಿದಂತೆ ಡಿಜಿ ಲಾಕರ್ ವ್ಯವಸ್ಥೆಯನ್ನು ರಾಜ್ಯದ ಯಾವ ಹಾಸ್ಟೇಲ್‍ಗಳಲ್ಲೂ ಅಳವಡಿಸಿಲ್ಲ. ದೇಶದ ಇತರ ರಾಜ್ಯಗಳಲ್ಲೂ ಈ ವ್ಯವಸ್ಥೆ ಇರುವುದು ಕಡಿಮೆಯೇ. ಮೊಟ್ಟ ಮೊದಲಬಾರಿಗೆ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಜಿ ಲಾಕರ್ ವ್ಯವಸ್ಥೆಯನ್ನು ರೂಪಿಸಲಾಗಿದೆ. ಅಧಿಕೃತವಾಗಿ ಸೆಪ್ಟೆಂಬರ್ 20 ರಂದು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

        ಡಿಜಿ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ದಾಖಲೆಗಳನ್ನು ಅಳವಡಿಸುವ ಕಾರ್ಯನಿರ್ವಹಿಸುತ್ತಿರುವ ಪ್ರದೀಪ ಪಾಟೀಲ ಅವರು ಮಾತನಾಡಿ, ಡಿಜಿ ಲಾಕರ್ ಅತ್ಯಂತ ಸರಳ ಹಾಗೂ ಸುರಕ್ಷಿತ ಆನ್‍ಲೈನ್ ವ್ಯವಸ್ಥೆಯಾಗಿದೆ. ವೆಬ್‍ಪೋರ್ಟೆಲ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಡಿಜಿ ಲಾಕರ್ ಪ್ರವೇಶ ಮಾಡಬಹುದು. ಪ್ರತಿ ವಿದ್ಯಾರ್ಥಿಗೆ ಪ್ರತ್ಯೇಕವಾದ ಇ-ಮೇಲ್ ಐಡಿ, ಪಾಸ್‍ವರ್ಡ್ ನೀಡಲಾಗಿದೆ. ಒಂದು ಜಿಬಿ ಸಾಮಥ್ರ್ಯದ ಡಿಜಿ ಲಾಕರ್‍ನಲ್ಲಿ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಶೈಕ್ಷಣಿಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು. ಧ್ವನಿ ಮುದ್ರಿಕೆಗಳನ್ನು ಸಹ ಅಪ್‍ಲೋಡ ಮಾಡಬಹುದು. ಪ್ರತಿ ವಿದ್ಯಾರ್ಥಿಗಳಿಗೆ ಒಂದು ಜಿಬಿ ಸಾಮಥ್ರ್ಯದ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದರಿಂದ ಪ್ರತಿ ವಿದ್ಯಾರ್ಥಿಯ ಕನಿಷ್ಠ 300ಕ್ಕೂ ಅಧಿಕ ಪ್ರಮಾಣಪತ್ರಗಳನ್ನು ಅಪ್‍ಲೋಡ್ ಮಾಡಬಹುದು ಹಾಗೂ ಬೇಕಾದಾಗ ಬಳಸಿಕೊಳ್ಳಬಹುದಾಗಿದೆ.

       ಇ-ಮೇಲ್ ಮೂಲಕ ತನ್ನ ಡಿಜಿ ಲಾಕರ್ ಪ್ರವೇಶಿಸಿ ದಾಖಲೆಗಳನ್ನು ಡೌನ್‍ಲೋಡ್ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೊಬೈಲ್‍ಗೆ ಪ್ರತಿಭಾರಿ ಓಟಿಪಿ (ಒನ್ ಟೈಮ್ ಪಾಸ್‍ವರ್ಡ್) ಸಂಖ್ಯೆ ಬರುತ್ತದೆ. ಈ ಸಂಖ್ಯೆ ದಾಖಲಿಸಿದರೆ ತಮ್ಮ ಡಿಜಿಟಲ್ ಖಾತೆ ತೆರೆಯುತ್ತದೆ. ತಮಗೆ ಬೇಕಾದ ಪ್ರಮಾಣಪತ್ರಗಳನ್ನ ವಿಕ್ಷೀಸಬಹುದು, ತೋರಿಸಬಹುದು ಅಥವಾ ಡೌನ್‍ಲೋಡ್ ಮಾಡಿಕೊಳ್ಳಬಹುದು. ಬೇರೆಯವರು ದುರುಪಯೋಗ ಪಡಸಿಕೊಳ್ಳಲು ಸಾಧ್ಯವಿಲ್ಲ. ಅತ್ಯಂತ ಸುರಕ್ಷಿತವಾಗಿ ದಾಖಲೆಗಳನ್ನು ಡಿಜಿ ಲಾಕರ್ ಸಂರಕ್ಷಿಸುತ್ತದೆ ಎಂದು ತಿಳಿಸಿದರು.

   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link