ಬ್ಯಾಡಗಿ:
ಶಿಕ್ಷಣದಿಂದ ಮಕ್ಕಳು ವಂಚಿತವಾಗದಂತೆ ತಡೆಗಟ್ಟುವುದನ್ನು ಪ್ರತಿಯೊಬ್ಬರೂ ಮಾಡಿದಾಗ ಮಾತ್ರ ದೇಶ ಸಂಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯವೆಂದು ಸಮಾಜ ಸೇವಕ ದ್ಯಾವಪ್ಪ ಭರಡಿ ಹೇಳಿದರು.
ಅವರು ತಾಲೂಕಿನ ಅರಬಗೊಂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಹೆಲ್ಪ್ ಟು ಎಜುಕೇಟ್ ಪೌಂಡೇಶನ್ ವತಿಯಿಂದ ನಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳು ತಮ್ಮ ಮೊದಲಿನ ಗುಣಮಟ್ಟವನ್ನು ಕಳೆದುಕೊಳ್ಳುತ್ತಲಿವೆ
ಎನ್ನುವ ಸಾರ್ವಜನಿಕರ ಅನಿಸಿಕೆಗಳನ್ನು ಅಲ್ಲಗಳೆಯಬೇಕಾದರೇ ಮತ್ತು ಖಾಸಗಿ ಶಾಲೆಗಳಿಗೆ ಪ್ರತಿಸ್ಪರ್ಧಿಯಾಗಬೇಕಾದಲ್ಲಿ ಹೆಲ್ಪ್ ಟು ಎಜುಕೇಟ್ ಪೌಂಡೇಶನ್ನಂತಹ ಸ್ವಯಂ ಸೇವಾ ಸಂಸ್ಥೆಯ ನೆರವು ನಮ್ಮ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಬಹಳ ಅವಶ್ಯವೆಂದರಲ್ಲದೇ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಶಿಕ್ಷಕರು ನಿರ್ವಹಿಸಿದಾಗ ಮಾತ್ರ ಸರಕಾರದ ಶೈಕ್ಷಣಿಕ ಉದ್ದೇಶಗಳು ಸಫಲಗೊಳ್ಳಲು ಸಾಧ್ಯವೆಂದರು. ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ದಿನಚರಿಯನ್ನು ಬರೆಯಲು ಪ್ರೇರಪಿಸಿ ಇದರಿಂದ ಅವರಲ್ಲಿಯ ಮಹಾನತೆ ಹೊರಹೊಮ್ಮಲು ಸಾಧ್ಯವಲ್ಲದೇ ಹೆಲ್ಪ್ ಟು ಎಜುಕೇಟ್ ಪೌಂಡೇಶನ್ನಂತಹ ಸ್ವಯಂ ಸೇವಾ ಸಂಸ್ಥೆಯ ಕೊಡಮಾಡಿರುವ ಶೈಕ್ಷಣಿಕ ಪರಿಕರಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಕೂರಗುಂದ ಅಧ್ಯಕ್ಷತೆ ವಹಿಸಿ ಮಾತನಾಡಿ ಇತ್ತೀಚೆಗೆ ಎಲ್ಲ ಸರಕಾರಗಳು ಶಿಕ್ಷಣದ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಈ ಯೋಜನೆಗಳು ಸಫಲಗೊಳ್ಳಲು ಶಿಕ್ಷಣ ಅಭಿವೃದ್ದಿಯಲ್ಲಿ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಸಮುದಾಯ ಜಾಗೃತಿಗೊಂಡಾಗ ಮಾತ್ರ ಸರಕಾರದ ಶೈಕ್ಷಣಿಕ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯವಲ್ಲದೇ ಸ್ಪರ್ಧಾತ್ಮಕವಾದ ಇಂದಿನ ದಿನಗಳಲ್ಲಿ ಮಕ್ಕಳ ಸರ್ವೋತೋಮುಖ ಬೆಳವಣೆಗೆಗೆ ಶಿಕ್ಷಣ ಅತ್ಯಗತ್ಯವಾಗಿದ್ದು ಈ ದಿಶೆಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು, ಪಾಲಕರು ಹಾಗೂ ಜನ ಪ್ರತಿನಿಧಿಗಳು ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುಬೇಕು ಎಂದರು.
ಹೆಲ್ಪ್ ಟು ಎಜುಕೇಟ್ ಪೌಂಡೇಶನ್ನ ಸ್ವಯಂ ಸೇವಾ ಸಂಸ್ಥೆಯ ಜಯದೇವ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯೋಪಾಧ್ಯಯ ಶ್ರೀಕಾಂತ ಭಗವಂತಗೌಡ್ರ, ಚೌಡಪ್ಪ ಹರಮಗಟ್ಟಿ, ಹನುಮಂತಪ್ಪ ಚೆನ್ನಗಿರಿ, ಚಂದ್ರಪ್ಪ ಹಾವೇರಿ, ಪರಶುರಾಮ ಚೆನ್ನಗೇರಿ, ಪರಶುರಾಮ ಕೂರಗುಂದ, ಮಲ್ಲಪ್ಪ ಕಾಟೇನಹಳ್ಳಿ, ರಾಜನಗೌಡ್ರ ಪಾಟೀಲ, ಮಲ್ಲಮ್ಮ ಕಿಳ್ಳಿ, ಯಲ್ಲಪ್ಪ ಕನವಳ್ಳಿ, ಪುಟ್ಟಪ್ಪ ತಳವಾರ, ಅಜ್ಜಪ್ಪ ತಳವಾರ ನಾಗಲಿಂಗಪ್ಪ ಕಮ್ಮಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ಸುಧಾ ಹನುಮನಹಳ್ಳಿಮಠ ಸ್ವಾಗತಿಸಿದರು. ಎಂ.ಪಿ.ಸಿದ್ದಲಿಂಗಕುಮಾರ ನಿರೂಪಿಸಿದರು. ವಿಶ್ವನಾಥ ಸೋಗಿಮಠ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
