ಶ್ರದ್ಧಾಂಜಲಿ ಸಮಾರಂಭ

ಹೊನ್ನಾಳಿ:
           ಸಿರಿಗೆರೆ ಬೃಹನ್ಮಠದ ಲಿಂ. ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾಜದ ಎಲ್ಲರ ಏಳಿಗೆಗಾಗಿ ತಮ್ಮ ಜೀವನವನ್ನೇ ಧಾರೆ ಎರೆದಿದ್ದರು. ಅಂಥ ಗುರುಗಳನ್ನು ಪಡೆದ ನಾವೆಲ್ಲರೂ ಧನ್ಯರು ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
            ತಾಲೂಕಿನ ಬಿದರಗಡ್ಡೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ದಾಸೋಹ ನಿಧಿ ಸಮರ್ಪಣಾ ಸಮಾರಂಭ ಮತ್ತು ಶ್ರೀ ಶ್ರೀಶೈಲ ಮಲ್ಲಿಕಾರ್ಜುನ, ಶ್ರೀ ಬಸವೇಶ್ವರ, ಶ್ರೀ ಚೌಡೇಶ್ವರಿ ದೇವಸ್ಥಾನಗಳ ಕಳಸಾರೋಹಣ ಸಮಾರಂಭ, ಮಹಾದ್ವಾರ, ಶ್ರೀಶೈಲ ಮಲ್ಲಿಕಾರ್ಜುನ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
              ಸಮಾಜದಲ್ಲಿನ ಬಹುತೇಕ ಜನರು ಅಂದಿನ ದಿನಗಳಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದುದನ್ನು ಮನಗಂಡ ಶಿವಕುಮಾರ ಮಹಾಸ್ವಾಮಿಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಎಲ್ಲರಿಗೂ ಸುಲಭವಾಗಿ ಶಿಕ್ಷಣ ಸೌಲಭ್ಯ ದೊರೆಯುವಂತೆ ಮಾಡಿದರು. ಆ ಮೂಲಕ ಸಮಾಜದ ಎಲ್ಲರೂ ತಮ್ಮ ಬದುಕು ಕಟ್ಟಿಕೊಳ್ಳಲು ಅವಶ್ಯಕವಾದ ವೇದಿಕೆ ನಿರ್ಮಿಸಿದರು ಎಂದು ತಿಳಿಸಿದರು.
              ಶಿವಕುಮಾರ ಮಹಾಸ್ವಾಮಿಗಳು ಅಂದಿನ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ವಾಣಿಜ್ಯಕ ಸಮಾನತೆಗೆ ಬಹುವಾಗಿ  ಶ್ರಮಿಸಿದರು. ಯಾರಿಗೆ ಯಾವ ಕ್ಷೇತ್ರದಲ್ಲಿ ಆಸ್ಥೆ ಇರುತ್ತದೋ ಅವರಿಗೆ ಆಯಾ ಕ್ಷೇತ್ರಗಳಲ್ಲಿ ಮುಂದುವರೆಯುವಂತೆ ಪ್ರೇರೇಪಿಸಿದರು. ಶಿವಕುಮಾರ ಮಹಾಸ್ವಾಮಿಗಳ ಅಧಿಕಾರಾವಧಿ ನಂತರ ತಾವು ಪಟ್ಟಕ್ಕೆ ಬಂದ ಮೇಲೆ ಅವರ ಮಾರ್ಗದರ್ಶನದಲ್ಲೇ ಮುಂದುವರೆಯುತ್ತಿದ್ದು, ಶಿಕ್ಷಣ ಸಂಸ್ಥೆಗಳ ಆಧುನೀಕರಣಕ್ಕೆ ಮುಂದಾಗಿರುವುದಾಗಿ ವಿವರಿಸಿದರು.
                ತಮ್ಮ ಹಲವಾರು ಸಮಾಜಮುಖಿ, ವಿಭಿನ್ನ-ವಿಧಾಯಕ ಕಾರ್ಯಕ್ರಮಗಳ ಮೂಲಕ ನಮ್ಮ ಗುರುಗಳಾದ ಶಿವಕುಮಾರ ಮಹಾಸ್ವಾಮಿಗಳು ಸಮಾಜವನ್ನು ಬಾಧಿಸುತ್ತಿದ್ದ ಜಾತಿ ಪದ್ಧತಿ, ಅಜ್ಞಾನ, ಅಂಧ ಶ್ರದ್ಧೆ ಮತ್ತಿತರ ಸಾಮಾಜಿಕ ಅನಿಷ್ಟಗಳಿಂದ ಸಮಾಜವನ್ನು ಹೊರತಂದರು. ಈ ಕಾರಣಕ್ಕೆ ನಾವೆಲ್ಲರೂ ಅವರಿಗೆ ಸದಾ ಋಣಿಗಳಾಗಿದ್ದೇವೆ ಎಂದು ತಿಳಿಸಿದರು.
               ಸ್ವಚ್ಛತೆಗೆ ಆದ್ಯತೆ ನೀಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಾವೇ ಸ್ವತಃ ಪೊರಕೆ ಹಿಡಿದುಕೊಂಡು ಕಸ ಗುಡಿಸುವ ಮೂಲಕ ನೈರ್ಮಲ್ಯತೆಗೆ ಆದ್ಯತೆ ನೀಡಬೇಕು ಎಂದು ದೇಶದ ಜನತೆಗೆ ಸಂದೇಶ ನೀಡಿದ್ದಾರೆ. ಅವರ ಆಶಯದಂತೆ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಮ್ಮ ನಿಮ್ಮ ಮನೆಗಳ ಸುತ್ತ-ಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕು. ಇದರೊಂದಿಗೆ, ಕೇವಲ ಬಹಿರಂಗ ಶುದ್ಧತೆಗೆ ಮುಂದಾಗದೇ ಅಂತರಂಗದ ಶುದ್ಧತೆಗೂ ಮುಂದಾಗಬೇಕು. ಮನಸ್ಸಿನ ಕೊಳೆಯನ್ನು ತೊಳೆದುಕೊಳ್ಳಬೇಕು. ಈ ನಿಟ್ಟಿನಲ್ಲಿ 12ನೇ ಶತಮಾನದಲ್ಲಿಯೇ ಕ್ರಾಂತಿಯೋಗಿ ಬಸವಣ್ಣನವರು ಅಂತರಂಗ ಮತ್ತು ಬಹಿರಂಗ ಶುದ್ಧಿಯ ಅಗತ್ಯತೆಯನ್ನು ತಮ್ಮ ವಚನದ ಮೂಲಕ ತಿಳಿಸಿದ್ದರು ಎಂದು ವಿವರಿಸಿದರು.
               ಭ್ರಷ್ಟಾಚಾರ ರಹಿತ ಚುನಾವಣೆ: ವಾತಾವರಣದ ಸ್ವಚ್ಛತೆಯ ಜತೆಗೇ ನಮ್ಮಲ್ಲಿ ನಡೆಯುವ ಚುನಾವಣೆಗಳೂ ಭ್ರಷ್ಟಾಚಾರ ರಹಿತವಾಗಬೇಕಿದೆ. ಚುನಾವಣೆಗಳ ವೇಳೆ ಹಣವೆಂಬ ಕಸವನ್ನು ಸಮಾಜದಲ್ಲಿ ಹರಡುತ್ತಾ ಅನೈರ್ಮಲ್ಯತೆಗೆ ಮುಂದಾಗದೇ ರಾಜಕಾರಣಿಗಳು ಭ್ರಷ್ಟಾಚಾರ ರಹಿತ ಚುನಾವಣೆಗಳನ್ನು ನಡೆಸಲು ಮುಂದಾಗಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ಪೊರಕೆ ಹಿಡಿದು ವಾತಾವರಣ ಸ್ವಚ್ಛಗೊಳಿಸುವುದಕ್ಕೆ ಆದ್ಯತೆ ನೀಡದೇ ಚುನಾವಣೆಗಳನ್ನೂ ಭ್ರಷ್ಟಾಚಾರ ರಹಿತವಾಗಿ ನಡೆಸಲು ಮುಂದಾಗಬೇಕು. ಈ ಬಗ್ಗೆ ಸಂಸದ ಜಿ.ಎಂ. ಸಿದ್ಧೇಶ್ವರ್ ಪ್ರಧಾನಮಂತ್ರಿ ಬಳಿ ವಿಷಯ ಪ್ರಸ್ತಾಪಿಸಬೇಕು ಎಂದು ವೇದಿಕೆಯಲ್ಲಿದ್ದ ಸಂಸದರಿಗೆ ಕಿವಿ ಮಾತು ಹೇಳಿದರು.
                 ಪಾನ ನಿರೋಧ ಅತ್ಯಗತ್ಯ: ಇಂದಿನ ಸಮಾಜದಲ್ಲಿ ಎಲ್ಲರನ್ನು ಕಾಡುತ್ತಿರುವ ಒಂದು ಸಮಸ್ಯೆ ಎಂದರೆ ಮದ್ಯಪಾನ. ಸಾಮಾಜಿಕ ಪಿಡುಗಾಗಿರುವ ಮದ್ಯ ಸೇವನೆಯನ್ನು ಎಲ್ಲರೂ ತ್ಯಜಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಬಿದರಗಡ್ಡೆ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಬೇಕು. ಯಾರೂ ಮದ್ಯ ಸೇವಿಸಬಾರದು. ಹಾಗಾದಾಗ ಮಾತ್ರ ವೈಯಕ್ತಿಕ ಆರೋಗ್ಯದ ಜತೆಗೆ ಸಮಾಜದ ಆರೋಗ್ಯವೂ ಸುಧಾರಿಸುತ್ತದೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮರಳು ಭಕ್ತಿ!: ಬಿದರಗಡ್ಡೆ ಗ್ರಾಮದಲ್ಲಿ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ದೇವಸ್ಥಾನಗಳು, ಸಮುದಾಯ ಭವನ, ಮಹಾದ್ವಾರ ಮತ್ತಿತರ ಕಾರ್ಯಗಳ ಬಗ್ಗೆ ಮಾತನಾಡಿದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, “ಅಳಿಲು ಸೇವೆ, ಮರಳು ಭಕ್ತಿ” ಎಂಬ ಮಾತಿದೆ. ರಾಮಾಯಣದಲ್ಲಿ ಕಪಿ ಸೇನೆ ಸಮುದ್ರಕ್ಕೆ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ತನ್ನಿಂದಾದಷ್ಟು ಮರಳನ್ನು ಸಾಗಿಸುವ ಮೂಲಕ ಚಿಕ್ಕ ಜೀವಿ ಅಳಿಲು ಕೂಡ ತನ್ನ ಪಾಲಿನ ಸೇವೆ ಸಲ್ಲಿಸಿತ್ತಂತೆ. ಆ ರೀತಿ, ಈಗ ಬಿದರಗಡ್ಡೆ ಗ್ರಾಮಸ್ಥರು ತುಂಗಭದ್ರಾ ನದಿಯ ಮರಳಿನಿಂದ ಲಭಿಸುವ ಆದಾಯದಲ್ಲಿ ಅಳಿಲು ಸೇವೆ ಎಂಬಂತೆ ಈ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎನ್ನುತ್ತಿದ್ದಂತೆ ಇಡೀ ಸಭೆ ನಗೆಗಡಲಲ್ಲಿ ತೇಲಿತು.
               ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸಿರಿಗೆರೆ ತರಳಬಾಳು ಬೃಹನ್ಮಠ ತನ್ನ ಅನನ್ಯ ಸಮಾಜಮುಖಿ ಕಾರ್ಯಗಳಿಂದ ಜನಮನ್ನಣೆ ಗಳಿಸಿದೆ. ಸಿರಿಗೆರೆಯಲ್ಲಿ ನಡೆಯುವ ನ್ಯಾಯದಾನ ಅನುಪಮವಾದುದು. ಎಷ್ಟೋ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದ ಸಮಸ್ಯೆಗಳು ಅಲ್ಲಿ ಪರಿಹಾರವಾಗುತ್ತವೆ. ಆ ನಿಟ್ಟಿನಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಕಾರ್ಯ ಆದರ್ಶವಾದುದು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಬದುಕನ್ನು ಸಾರ್ಥಕಪಡಿಸಿಕೊಳ್ಳೋಣ ಎಂದು ಹೇಳಿದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ ಅಕ್ಕಿ ಸಮರ್ಪಣಾ ಸಮಾರಂಭಕ್ಕೆ ಮಾಜಿ ಶಾಸಕ ಡಿ.ಜಿ. ಬಸವನಗೌಡ ಅವರೇ ಪ್ರೇರಣೆ. ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ ಎಂದು ತಿಳಿಸಿದರು.
                ದೊಡ್ಡಬಾತಿಯ ಬಾತಿ ಬಸವರಾಜ್ ಉಪನ್ಯಾಸ ನೀಡಿದರು. ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕ ಬಿ.ಎಚ್. ಮಂಜಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ತಾಲೂಕು ಸಾಧು ಲಿಂಗಾಯತ ಸಮಾಜದ ಪ್ರಭಾರ ಅಧ್ಯಕ್ಷ ಬಿ.ಜಿ. ಬೆನಕಪ್ಪಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಮಾರಂಭ ಉದ್ಘಾಟಿಸಿದರು.
               ಸಂಸದ ಜಿ.ಎಂ. ಸಿದ್ಧೇಶ್ವರ್, ತಾಲೂಕು ಸಾಧು ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಜಿ. ಮುರಿಗೆಪ್ಪಗೌಡ, ಜಿಪಂ ಸದಸ್ಯ ಡಿ.ಜಿ. ವಿಶ್ವನಾಥ್, ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪರಮೇಶ್ವರಪ್ಪ, ಎಪಿಎಂಸಿ ನಿರ್ದೇಶಕ ದಿಡಗೂರು ಎ.ಜಿ. ಪ್ರಕಾಶ್, ಎಚ್. ಕಡದಕಟ್ಟೆ ಗ್ರಾಪಂ ಸದಸ್ಯರಾದ ಬಿ.ಎಚ್. ನಾಗರಾಜ್, ಕರಿಬಸಮ್ಮ ಎ.ಕೆ. ಮಂಜಪ್ಪ, ರತ್ನಮ್ಮ ಬಿ.ಕೆ. ಸಿದ್ಧಪ್ಪ, ಮುಖಂಡರಾದ ಬಿ.ಎಚ್. ಕುಬೇರಗೌಡ, ಬಿ.ಎಚ್. ಭರಮಗೌಡ, ಬಿ.ಕೆ. ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಮಾರಂಭದ ನಂತರ ಸಿರಿಗೆರೆಯ ತರಳಬಾಳು ಕಲಾ ಸಂಘದ ಕಲಾವಿದರಿಂದ ಜಾನಪದ ಸಿರಿ ಸಂಭ್ರಮ ನೃತ್ಯ ಪ್ರದರ್ಶನ ನಡೆಯಿತು. ಮಲ್ಲಿ ಹಗ್ಗ, ಬಂಜಾರ ನೃತ್ಯ, ಸೋಲಿಗರ ನೃತ್ಯ, ಮಲ್ಲಗಂಬ, ಕಂಗೀಲು ನೃತ್ಯ, ಲಂಬಾಣಿ ನೃತ್ಯ, ಕೋಲಾಟ, ಡೊಳ್ಳು ಕುಣಿತ ಮತ್ತು ಗೀಗೀಪದ ಗಾಯನ ಕಾರ್ಯಕ್ರಮಗಳ ಜನ-ಮನಸೂರೆಗೊಂಡವು.
              ಮುಂದಿನ ವರ್ಷ ರಾಮೇಶ್ವರ ಗ್ರಾಮದಲ್ಲಿ: ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ದಾಸೋಹ ನಿಧಿ ಸಮರ್ಪಣಾ ಸಮಾರಂಭ ಮುಂದಿನ ವರ್ಷ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ನಡೆಸುವುದಾಗಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು. ತಾಲೂಕಿನ ಕೂಲಂಬಿ, ಕ್ಯಾಸಿನಕೆರೆ ಗ್ರಾಮಸ್ಥರು ಮತ್ತು ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮಸ್ಥರು ಮುಂದಿನ ವರ್ಷದ ಸಮಾರಂಭವನ್ನು ನಡೆಸಲು ತಮಗೆ ಅವಕಾಶ ನೀಡಬೇಕು ಎಂದು ಶ್ರೀಗಳ ಎದುರು ಕೋರಿಕೆ ಸಲ್ಲಿಸಿದ್ದರು. ಮುಂದಿನ ವರ್ಷ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ನಡೆಸುವುದಾಗಿ ಸಮಾರಂಭದಲ್ಲಿ ಶ್ರೀಗಳು ಘೋಷಿಸುತ್ತಿದ್ದಂತೆ ರಾಮೇಶ್ವರ ಗ್ರಾಮಸ್ಥರು ಹರ್ಷಚಿತ್ತರಾದರು. ತಮ್ಮ ಗ್ರಾಮಕ್ಕೆ ಅವಕಾಶ ದೊರೆತ ಹಿನ್ನೆಲೆಯಲ್ಲಿ ಸಮಾರಂಭದ ಆವರಣದಲ್ಲೇ ರಾಮೇಶ್ವರ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
              ಸಮಾರಂಭಕ್ಕೂ ಮೊದಲು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಿದರಗಡ್ಡೆ ಗ್ರಾಮದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ, ಶ್ರೀ ಬಸವೇಶ್ವರ, ಶ್ರೀ ಚೌಡೇಶ್ವರಿ ದೇವಸ್ಥಾನಗಳ ಕಳಸಾರೋಹಣ ನೆರವೇರಿಸಿದರು. ನೂತನ ಮಹಾದ್ವಾರ, ಶ್ರೀಶೈಲ ಮಲ್ಲಿಕಾರ್ಜುನ ಸಮುದಾಯ ಭವನಗಳನ್ನು ಲೋಕಾರ್ಪಣೆಗೊಳಿಸಿದರು.
101 ಕ್ವಿಂಟಾಲ್‍ಗಳಷ್ಟು ಅಕ್ಕಿ, ತರಕಾರಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಹೊತ್ತ ಲಾರಿಗೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.