ದಾವಣಗೆರೆ:
17ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಎಸ್‍ಯುಸಿಐ(ಸಿ) ಪಕ್ಷದಿಂದ ಕಾಮ್ರೇಡ್ ಮಧು ತೊಗಲೇರಿ ಶನಿವಾರ ನಾಮಪತ್ರ ಸಲ್ಲಿಸಿದರು.
ಇಲ್ಲಿನ ಪಾಲಿಕೆಯ ಎದುರಿನ ಭಗತ್‍ಸಿಂಗ್ ಪುತ್ಥಳಿಯ ಎದುರು ಜಮಾಯಿಸಿದ ಎಸ್‍ಯುಸಿಐ(ಸಿ) ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಗತ್‍ಸಿಂಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜಿಲ್ಲಾಡಳಿತ ಭವನದ ವರೆಗೂ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿ ಚುನಾವಣಾಧಿಕಾರಿ ಜಿ.ಎಸ್.ಶಿವಮೂರ್ತಿಯವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಸ್‍ಯುಸಿಐ ಕಾರ್ಯಕರ್ತರು ಹೋರಾಟದ ಹಿನ್ನೆಲೆಯ ಅಭ್ಯರ್ಥಿ ಕಾಮ್ರೇಡ್ ಮಧು ತೊಗಲೆರಿಯವರನ್ನು ಗೆಲ್ಲಿಸಿ ಎಂಬುದು ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿದರು.
ಆಸ್ತಿ ವಿವರ:
ಎಸ್‍ಯುಸಿಐ(ಸಿ) ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಧು ತೊಗಲೇರಿಯವರು ಒಂದೂವರೆ ಎಕರೆ ಹೊಲವನ್ನು ಹೊಂದಿರುವುದಾಗಿ ಘೋಷಿಸಿ ಪ್ರಮಾಣಪತ್ರ ಸಲ್ಲಿಸಿದ್ದು, 30 ವರ್ಷದ ಮಧು ಬಿಎ ವ್ಯಾಸಂಗ ಮಾಡಿದ್ದಾರೆ. ಅವರು ತಮ್ಮ ಖಾತೆಗಳಲ್ಲಿ 8 ಸಾವಿರ ರೂ., 50 ಸಾವಿರ ಮೌಲ್ಯದ ಬೈಕ್ ಹೊಂದಿದ್ದಾರೆ ಹಾಗೂ ಪತ್ನಿ ಶ್ವೇತಾ ಕೆ ಆರ್ ಅವರ ಬ್ಯಾಂಕ್ ಖಾತೆಯಲ್ಲಿ 1000 ರೂ ನಗದು ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಎಸ್‍ಯುಸಿಐ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ.ಸುನಿತ್‍ಕುಮಾರ್ ಟಿ.ಎಸ್. ಮುಖಂಡರಾದ ಮಂಜುನಾಥ ಕೈದಾಳೆ, ಅಪರ್ಣ.ಬಿ.ಆರ್, ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ, ಜ್ಯೋತಿ ಕುಕ್ಕುವಾಡ, ಬನಶ್ರೀ ಜಿ.ಎಸ್, ಸೌಮ್ಯ, ಭಾರತಿ, ವಸಂತಕುಮಾರ್, ಯತೀಂದ್ರ, ಪರಶುರಾಮ್ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
