ಮಡಿಕೇರಿ : ಅಪಾಯದಲ್ಲಿದ್ದ ಕೆಲವು ಮನೆಗಳನ್ನು ಸ್ಥಳಾಂತರಿಸಲಾಗಿದ್ದು, ಕೆಲವರು ಗಂಜಿ ಕೇಂದ್ರದಲ್ಲಿದ್ದಾರೆ. ಇನ್ನು ಕೆಲವರು ಸಂಬಂಧಿಕರ ಮನೆಗಳಲ್ಲಿದ್ದಾರೆ. ಸಂಬಂಧಿಕರ ಮನೆಗಳಲ್ಲಿರುವವರಿಗೂ ಕೂಡ ಅಕ್ಕಿ, ಎಣ್ಣೆ, ಬೇಳೆ, ವಿತರಣೆಯಾಗಬೇಕು ಎಂಬ ಸೂಚನೆ ನೀಡಲಾಗಿದೆ. ಗಂಜಿ ಕೇಂದ್ರದಿಂದ ಮನೆಗೆ ತೆರಳುವ ಸಂದರ್ಭದಲ್ಲಿಯೂ ಅವರಿಗೆ ಪಡಿತರವನ್ನು ಕೊಟ್ಟು ಕಳುಹಿಸಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಮಡಿಕೇರಿಯಲ್ಲಿ ಮಳೆಯಿಂದ ಹಾನಿ ಉಂಟಾಗಿರುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗ್ರಾಮಮಟ್ಟದಲ್ಲಿ ಟಾಸ್ಕ್ ಫೋರ್ಸ್: ಗ್ರಾಮೀಣ ಪ್ರದೇಶದಲ್ಲಿ ಟಾಸ್ಕ್ ಫೋರ್ಸ್ ಮಾಡಬೇಕು. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಕಂಟ್ರೋಲ್ ರೂಂನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಅನುದಾನ ಲಭ್ಯವಿದ್ದು, ಅಗತ್ಯ ಬಿದ್ದರೆ ಇನ್ನಷ್ಟು ಅನುದಾನವನ್ನು ಒದಗಿಸಲಾಗುವುದು ಎಂದರು.
ಕಾವೇರಿ ಮತ್ತು ಹಾರಂಗಿ ನದಿಪಾತ್ರದಲ್ಲಿನ ಹೂಳು ತೆಗೆಯಲು ಕ್ರಮ:
ಕೊಡಗು ಜಿಲ್ಲೆಯ ನಾಲ್ಕು ತಹಶೀಲ್ದಾರರ ಖಾತೆಗಳಲ್ಲಿ ತಲಾ 25 ಲಕ್ಷ ರೂ.ಗಳು ಲಭ್ಯವಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 50 ಸಾವಿರ ರೂ.ಗಳನ್ನು ಈಗಾಗಲೇ ಒದಗಿಸಲಾಗಿದೆ. ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿ ಹೂಳು ತುಂಬಿದೆ. ಅದರ ಜೊತೆಗೆ ನೀರಿನ ಹರಿವಿನಿಂದ ನೀರು ಹೊರಗೆ ಹರಿಯುತ್ತಿದೆ. ಇದನ್ನು ತಪ್ಪಿಸಲು ಹಾರಂಗಿ ಜಲಾಶಯದ ಹಿಂದಿನ ಪ್ರದೇಶಕ್ಕೆ ಈಗಾಗಲೇ 40 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದು, ಕೆಲಸ ಕೂಡಲೇ ಪ್ರಾರಂಭವಾಗುತ್ತದೆ. ಹೂಳು, ಮಣ್ಣು ತೆಗೆಯುವುದು ಹಾಗೂ ಗೋಡೆ ನಿರ್ಮಾಣ ಕಾರ್ಯವನ್ನು ಇದು ಒಳಗೊಂಡಿದೆ. ಕಾವೇರಿ ನದಿಯಲ್ಲಿನ ಹೂಳು ತೆಗೆಯಲು ಕಾವೇರಿ ನೀರಾವರಿ ನಿಗಮಕ್ಕೆ ಸೂಚಿಸಲಾಗಿದೆ. ನೀರು ನಿಲ್ಲದಂತೆ ಮಾಡಲು ಕ್ರಮ ಕೈಗೊಳ್ಳಲು ಹಾಗೂ ಮರದ ದಿಮ್ಮಿಗಳನ್ನು ಕೂಡಲೇ ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಕಳೆದ ಬಾರಿಯ ದಿಮ್ಮಿಗಳು ಹಾಗೆಯೇ ಉಳಿದುಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು, ನದಿ ಪಾತ್ರದಲ್ಲಿ ಯಾವುದೇ ಮರದ ದಿಮ್ಮಿಗಳು ಇರಬಾರದು ಎಂದು ಸೂಚಿಸಲಾಗಿದೆ ಎಂದರು.
ಜುಲೈ ತಿಂಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸಣ್ಣ ಪ್ರಮಾಣದ ಭೂಕುಸಿತವಾಗಿ ಸಂಚಾರ ಕಡಿತಗೊಂಡಿದೆ. ಮನೆಗಳು ಹಾನಿಗೊಳಗಾಗಿವೆ. ನದಿ ಪಾತ್ರಗಳು ಉಕ್ಕಿ ಹರಿಸು ಪ್ಪದಲ್ಲಿರುವ ಜಮೀನುಗಳಿಗೆ ಹಾಗೂ ಮನೆಗಳಿಗೆ ನೀರುನುಗ್ಗಿದೆ. ರಸ್ತೆಗಳು ಹಾನಿಗೊಳಗಾಗಿದ್ದು, ಸೇತುವೆಗಳು ಮಣ್ಣು ಮತ್ತು ಮರದ ದಿಮ್ಮಿಗಳಿಂದ ತುಂಬಿವೆ. ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಇವೆಲ್ಲವನ್ನೂ ಪರಿಶೀಲಿಸಲಾಗಿದೆ.
ಈ ಬಾರಿಯ ಮುಂಗಾರಿನಲ್ಲಿ ವಾರ ಹತ್ತು ದಿನಗಳೊಳಗೆ ಶೇ 114% ಮಳೆಯಾಗಿದ್ದು, ಇದುವರೆಗೂ ಸಂಪೂರ್ಣವಾಗಿ ಹಾನಿಗೊಳಗಿರುವುದು ಎರಡು, ತೀವ್ರ ಗತಿಯಲ್ಲಿ ಹಾನಿಯಾಗಿರುವುದು 15, ಭಾಗಶ: ಹಾನಿಗೊಳಗಾಗಿರುವುದು 63 . ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳಿಗೆ 5 ಲಕ್ಷ ರೂ.ಗಳು, ತೀವ್ರ ಹಾನಿಯಾದ ಮನೆಗಳಿಗೆ 3 ಲಕ್ಷ ರೂ.ಗಳು ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂ.ಗಳ ಪರಿಹಾರವನ್ನು ಕೂಡಲೇ ನೀಡಲು ಸೂಚಿಸಲಾಗಿದೆ. ಬಿದ್ದುಹೋಗಿರುವ ಮನೆಗಳಿಗೆ ತುರ್ತು ವ್ಯವಸ್ಥೆಗಾಗಿ ಈಗಾಗಲೇ 10 ಸಾವಿರ ರೂ.ಗಳನ್ನು ನೀಡಲಾಗಿದೆ ಎಂದರು.
ಸಭೆಯಲ್ಲಿ ಸಚಿವರಾದ ಆರ್ ಅಶೋಕ್, ಸಿ ಸಿ ಪಾಟೀಲ್, ಸುನಿಲ್ ಕುಮಾರ, ಶಾಸಕ ಕೆ ಜಿ ಬೋಪಯ್ಯ, ಅಪ್ಪಚ್ವು ರಂಜನ್, ಸಂಸದ ಪ್ರತಾಪ ಸಿಂಹ ಮತ್ತು ಇತರರು ಉಪಸ್ಥಿತರಿದ್ದರು.