ಹೊಸಪೇಟೆ :
ಬಿಜೆಪಿಯವರಿಗೆ ಪ್ರಜಾ ಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಗೌರವವಿಲ್ಲ. ಹೀಗಾಗಿ ಅವರು ಆಗಾಗ ಸಂವಿಧಾನವನ್ನು ಬದಲಿಸಬೇಕು. ಅದನ್ನು ಸುಡಬೇಕು ಎಂದು ಹೇಳುತ್ತಾರೆ. ಇಂಥವರನ್ನು ನಾವು ಆರಿಸಬೇಕಾ ? ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಪ್ರಶ್ನಿಸಿದರು.
ಇಲ್ಲಿನ ಪಟೇಲನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ ಮಾದಿಗ ಸಮಾಜದ ಮುಖಂಡರ, ಯುವಕರ, ಜನಪ್ರತಿನಿಧಿಗಳ ಹಾಗು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗು ಎಲ್ಲಾ ಜನರ ಏಳಿಗೆಗಾಗಿ ಶ್ರಮಿಸುತ್ತಿದೆ. ಬಿಜೆಪಿಗೆ ಶೋಷಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹೀಗಾಗಿ ಅವರು ಸಂವಿಧಾನವನ್ನು ಸುಡಬೇಕು ಎನ್ನುತ್ತಿದ್ದಾರೆ. ಇಂಥವರಿಗೆ ನೀವು ಬುದ್ದಿ ಕಲಿಸಬೇಕಾ ? ಬೇಡ್ವಾ? ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತರ ಹಿತ ರಕ್ಷಣೆಗಾಗಿ ಮಾಡಿದ ಕಾನೂನುಗಳು ದೇಶದಲ್ಲಿ ಯಾರು ಮಾಡಿಲ್ಲ. ಬಿಜೆಪಿಯವರಿಗೆ ಒಂದೇ ಒಂದು ಕಾನೂನು ಮಾಡಲು ಸಾಧ್ಯವಾಗಿಲ್ಲ. ಪ್ರಧಾನಿ ಮೋದಿಗೆ ಸದಾಶಿವ ವರದಿ ಜಾರಿಗೆ ಹಲವು ರಾಜ್ಯಗಳು ಶಿಫಾರಸ್ಸು ಮಾಡುವಂತೆ ಬೇಡಿಕೆ ಇಟ್ಟಿದ್ದರೂ ಮೋದಿ ಅದರ ಕಡೆಗೆ ತಿರುಗಿ ನೋಡುತ್ತಿಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷ ಮೀಸಲಾತಿ ನೀಡಿದ್ದರಿಂದಲೇ ಜಿ.ಪಂ.ತಾ.ಪಂ.ಮತ್ತು ಗ್ರಾ.ಪಂ.ಗಳಲ್ಲಿ ಶೋಷಿತ ವರ್ಗಗಳಿಗೆ ಅಧಿಕಾರ ಸಿಗುತ್ತಿದೆ. ಬಿಜೆಪಿ ಮೀಸಲಾತಿಯನ್ನು ವಿರೋಧಿಸುತ್ತಿದೆ. ಇಂಥವರಿಗೆ ನೀವು ಮತ ಹಾಕ್ತೀರಾ? ಎಂದರು.
ಸದಾಶಿವ ಆಯೋಗ ವರದಿ ಜಾರಿಗೆ ತರುವ ನಿರ್ಧಾರದಲ್ಲಿ ಸ್ವಲ್ಪ ತಪ್ಪಾಗಿದೆ. ಅದನ್ನು ಸರಿ ಪಡಿಸುತ್ತೇವೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಕುರಿತು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ತರುವ ಬಗ್ಗೆ ಭರವಸೆ ನೀಡಿದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಸೋನಿಯಾ ಗಾಂಧಿ, ಮನಮೋಹನಸಿಂಗ್ ಸೇರಿದಂತೆ ದೇಶದ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಯಾವುದೇ ಕಾರಣಕ್ಕೂ ಸಂವಿಧಾನವನ್ನು ಬದಲಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಹೀಗಾಗಿ ತುಳಿತಕ್ಕೊಳಗಾದ ಸಮುದಾಯಗಳು ಒಗ್ಗಟ್ಟಾಗಬೇಕು. ಈ ಕುರಿತು ಮಾತನಾಡುವವರಿಗೆ ಬುದ್ದಿ ಕಲಿಸಬೇಕು ಎಂದರು.
ಮನಮೋಹನಸಿಂಗ್ ಸರ್ಕಾರವಿದ್ದಾಗ ರೈತರ 72 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಈಗ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ರಾಹುಲಗಾಂಧಿ ಹೇಳಿದ್ದಾರೆ. ಅವರನ್ನು ಎಲ್ಲರೂ ಬೆಂಬಲಿಸಬೇಕು. ಪ್ರಧಾನಿ ಮೋದಿ ಇದುವರೆಗೂ ರೈತರ ಸಾಲಮನ್ನಾ ಮಾಡಲಿಲ್ಲ. ದಲಿತ, ಹಿಂದುಳಿದ, ಶೋಷಿತರಿಗೆ ಅವರ ಕೊಡುಗೆ ಏನು ಇಲ್ಲ. ಬದಲಿಗೆ ಬಂಡವಾಳಶಾಯಿಗಳ ಸಾಲಮನ್ನಾ ಮಾತ್ರ ಮಾಡಿದ್ದಾರೆ ಎಂದು ಛೇಡಿಸಿದರು.
ಶಾಸಕ ಆನಂದಸಿಂಗ್ ಮಾತನಾಡಿ, ಮೊದಲಿಗೆ ನನಗೆ ಪ್ರಧಾನಿ ಮೋದಿ ದೇಶಕ್ಕೆ ಸೂಕ್ತವಾದ ವ್ಯಕ್ತಿ ಅಂತಾ ಅನಿಸಿತ್ತು. ಬರ ಬರುತ್ತಾ ಅವರು ಬರೀ ಭಾಷಣಕ್ಕೆ ಸೀಮಿತವಾದ ವ್ಯಕ್ತಿ. ಅವರಿಗೆ ಯಾವುದೇ ಅಭಿವೃದ್ದಿ ಪರ ಕಾಳಜಿ ಇಲ್ಲ ಅಂತಾ ಗೊತ್ತಾಯ್ತು. ಜೊತೆಗೆ ನನ್ನ ಬಿಜೆಪಿ ಸ್ನೇಹಿತರಿಗೆ ಮೋದಿ ಸಾಧನೆ ಕುರಿತು ಕೇಳಿದಾಗ ‘ಅವರು ಕೂಡ ಮೋದಿ ಸಾಧನೆ ಏನು ಇಲ್ಲ. ಬರೀ ಶೂನ್ಯ ಅಂತಾ ನಗುತ್ತಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು. ಸಭೆಯಲ್ಲಿ ಸಂಸದರಾದ ಬಿ.ಎನ್.ಚಂದ್ರಪ್ಪ, ಎಲ್.ಹನುಮಂತಯ್ಯ, ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ, ಮಾಜಿ ಶಾಸಕ ರತನಸಿಂಗ್, ಮುಖಂಡರಾದ ಅಬ್ದುಲ್ ವಹಾಬ್, ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಮುಂಡ್ರಿಗಿ ನಾಗರಾಜ, ಎ.ಮಾನಯ್ಯ, ಧರ್ಮೇಂದ್ರಸಿಂಗ್, ನಿಂಬಗಲ್ ರಾಮಕೃಷ್ಣ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







