ಸಬಲೀಕರಣ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು : ಪ್ರೊ. ವೈ. ಎಸ್. ಸಿದ್ದೇಗೌಡ

ತುಮಕೂರು:

              ಮಾನವ ತನ್ನ ಸ್ವಾಭಾವಿಕ ನಡೆನುಡಿಯೊಂದಿಗೆ ಪ್ರಕೃತಿ ಪರವಾದ ಪರಿಸರ ಸ್ನೇಹಿ ಜೀವನ ಸಾಗಿಸಿದರೆ ಮಾತ್ರ ಅವನ ಉಳಿವು. ಇಲ್ಲವಾದರೆ ಅವನ ಅಳಿವು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಯಾರು ಸಕಾರಾತ್ಮಕ ಆಲೋಚನೆ ಮಾಡುತ್ತಾರೋ ಅವರು ಪ್ರಾಕೃತಿಕ ಬದುಕಿಗೆ ಹತ್ತಿರವಾಗುತ್ತಾರೆ ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ವೈ.ಎಸ್. ಸಿದ್ದೇಗೌಡರು ಅಭಿಪ್ರಾಯ ಪಟ್ಟರು.

             ಅವರು ಯೂನಿಯನ್ ಕ್ರಿಶ್ಚಿಯನ್ ಕಾಲೇಜು, ತುಮಕೂರು ಮತ್ತು ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಳ್ಳಂಬೆಳ್ಳ ಇವರ ಸಂಯುಕ್ತಾಶ್ರದಲ್ಲಿ ನಡೆದ ಶ್ರೀ ತಿಪ್ಪೇಸ್ವಾಮಿ. ಕೆ.ಟಿ ರವರ ‘ಸೆಳೆರೆಂಬೆ- ಗ್ರಾಮ ಪಂಚಾಯ್ತಿಯೆಡೆಗೆ ಯುವಜನರು ಮತ್ತು ಗಡಿಗಳ ಮೀರಿ ವಿಕಾಸದೆಡೆಗೆ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಬಲೀಕರಣ ಎನ್ನವುದು ಕೇವಲ ಪುಸ್ತಕಕ್ಕೆ ಸೀಮಿತವಾಗಬಾರದು. ಅದು ಜೀವನದ ಪ್ರತಿ ಹಂತದಲ್ಲೂ ಕಂಡುಕೊಳ್ಳಬೇಕಾದ ಒಂದು ಪ್ರಕ್ರಿಯೆ. ಈ ರೀತಿಯಾಗಿ ಯುವಜನರು ರಚನಾತ್ಮಕ ಕಾರ್ಯಗಳನ್ನು ಕೈಗೊಂಡು ಅವುಗಳನ್ನು ಅನುಷ್ಠಾನಕ್ಕೆ ತಂದಾಗ ತಮ್ಮ ಯಶಸ್ಸು ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

             ಕೃತಿ ಲೋಕಾರ್ಪಣೆಯ ಜೊತೆಗೆ ‘ಪಂಚಾಯತ್ ರಾಜ್ ಮತ್ತು ಯುವಜನರು’ ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಈ ಸಂಕಿರಣದಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ವ್ಯವಸ್ಥೆಯ ಇತಿಹಾಸದ ಬಗ್ಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀಯುತ ಕಾಡಶೆಟ್ಟಿ ಸತೀಶ್ ತಿಳಿಸಿಕೊಟ್ಟರೆ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಯುವಜನರ ಭಾಗವಹಿಸುವೆಕೆಯ ಬಗ್ಗೆ ಮೈಸೂರಿನ ಅಬ್ದುಲ್ ನಜೀರ್‍ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತರಬೇತುದಾರರಾದ ಶ್ರೀಯುತ ಕೆ.ಎಸ್. ರಾಘವೇಂದ್ರರವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಜೋಯೆಲ್ ಜಯಪ್ರಕಾಶ್‍ರವರು ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವುದು ದುರಂತ. ಈ ನಿಟ್ಟಿನಲ್ಲಿ ಮೌಲ್ಯಗಳನ್ನು ಕಟ್ಟುವ ಕೆಲಸವನ್ನು ಪುಸ್ತಕಗಳು ಮಾಡುತ್ತವೆ. ಈ ಸಾಲಿನಲ್ಲಿ ತಿಪ್ಪೇಸ್ವಾಮಿ ಕೆ.ಟಿ ಯವರ ಪುಸ್ತಕಗಳು ಸೇರುತ್ತವೆ ಎಂದರು.

             ಕಾರ್ಯಕಾರ್ಯಕ್ರಮದಲ್ಲಿ ಮಂಗಳೂರಿನ ಅರಿವು ಬಂಟ್ವಾಳ ಸಂಸ್ಥೆಯ ಶ್ರೀಯುತ ನಾದ ಮಣಿನಾಲ್ಕೂರುರವರು ಮನಸುಗಳನ್ನು ಬೆಸೆಯುವ ಸೌಹಾರ್ದತೆಯ ಗೀತೆಗಳನ್ನು ಹಾಡಿದರು. ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ಕಾರ್ತೀಕ್ ಶಾಸ್ತ್ರಿರವರು, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ವೈ.ಆರ್. ಸದಾಶಿವಯ್ಯ, ಪ್ರೊ. ಅಜಿತ್ ಕುಮಾರ್, ಪ್ರೊ. ಮಹದೇವ್, ಪ್ರೊ. ಜಯಪ್ರಕಾಶ್, ಗುರುಶ್ರೀ ಕಾಲೇಜ್, ಬಸವೇಶ್ವರ ಕಾಲೇಜುಗಳ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳು, ಯೂನಿಯನ್ ಕ್ರಿಶ್ಚಿಯನ್ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ತುಮಕೂರು ಜಿಲ್ಲೆಯ ಹಲವು ಯುವಜನ ಸಂಘಗಳ ಪದಾಧಿಕಾರಿಗಳು, ಸಂಸ್ಥೆಯ ಪಧಾದಿಕಾರಿಗಳು ಹಿತೈಶಿಗಳು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link