ಮಹಿಳೆಯರ ಮೇಲೆ ರಷ್ಯನ್ ಪಡೆಗಳು ಅತ್ಯಾಚಾರವೆಸಗುತ್ತಿವೆ; ಉಕ್ರೇನ್ ಗಂಭೀರ ಆರೋಪ

ಉಕ್ರೇನ್:

ರಷ್ಯನ್ ಪಡೆಗಳು ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿವೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಗಂಭೀರ ಆರೋಪ ಮಾಡಿದ್ದಾರೆ. ಲಂಡನ್​ನಲ್ಲಿ ಅವರು ಮಾತನಾಡಿದರು.

‘ರಷ್ಯಾದ ಪಡೆಗಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿವೆ’ ಎಂದು ಉಕ್ರೇನ್  ಗಂಭೀರ ಆರೋಪ ಮಾಡಿದೆ.

ಶುಕ್ರವಾರ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಲಂಡನ್‌ನ ಚಾಥಮ್ ಹೌಸ್ ಥಿಂಕ್-ಟ್ಯಾಂಕ್‌ನಲ್ಲಿ ಮಾತನಾಡುತ್ತಾ ಮೇಲಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ  ನಡೆಸಿರುವುದನ್ನು ಶಿಕ್ಷಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ನ್ಯಾಯಮಂಡಳಿ ರಚಿಸಬೇಕೆನ್ನುವುದನ್ನು ಅವರು ಬೆಂಬಲಿಸಿದ್ದಾರೆ.

ಈ ವೇಳೆ ಅವರು ರಷ್ಯನ್ ಪಡೆಗಳ ಬಗ್ಗೆ ಮಾತನಾಡುತ್ತಾ, ”ದುರದೃಷ್ಟವಶಾತ್, ರಷ್ಯಾದ ಪಡೆಗಳು ಆಕ್ರಮಿಸಿರುವ ಉಕ್ರೇನ್​ ನಗರಗಳಲ್ಲಿ ಮಹಿಳೆಯರ ಮೇಲೆ ಸೈನಿಕರು ಅತ್ಯಾಚಾರ ಎಸಗಿದ ಹಲವು ಪ್ರಕರಣಗಳು ವರದಿಯಾಗಿವೆ” ಎಂದಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಸಚಿವರ ಹೇಳಿಕೆಯ ಬಗ್ಗೆ ಡೈಲಿ ಮೇಲ್ ವರದಿ ಮಾಡಿದೆ. ಉಕ್ರೇನ್ ವಿದೇಶಾಂಗ ಸಚಿವರು ಮಾಡಿರುವ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.

ಮಾಜಿ ಬ್ರಿಟಿಷ್ ಪ್ರಧಾನಿ ಗಾರ್ಡನ್ ಬ್ರೌನ್ ಮತ್ತು ವಿಶೇಷ ನ್ಯಾಯಮಂಡಳಿಗಾಗಿ ಅಂತರರಾಷ್ಟ್ರೀಯ ಕಾನೂನು ತಜ್ಞರು ಸಲ್ಲಿಸಿದ್ದ ಮನವಿಯನ್ನು ಬೆಂಬಲಿಸಿದ ಕುಲೆಬಾ, ”ಉಕ್ರೇನ್​ನಲ್ಲಿ ನಾಗರಿಕರ ಸಾವು- ನೋವು ಹೆಚ್ಚಾಗುತ್ತಿದೆ. ಈ ಯುದ್ಧಕ್ಕೆ ಕಾರಣರಾದ ಎಲ್ಲರನ್ನೂ ನ್ಯಾಯಾಲಯದ ಮುಂದೆ ತರಬೇಕು. ಅದಕ್ಕಿರುವ ಏಕೈಕ ಸಾಧ್ಯತೆಯೆಂದರೆ ಅಂತಾರಾಷ್ಟ್ರೀಯ ಕಾನೂನು” ಎಂದು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾದ ವಿರುದ್ಧ ಉಕ್ರೇನ್ ಹೋರಾಟವನ್ನು ಪ್ರಸ್ತಾಪಿಸಿದ ಕುಲೆಬಾ, ”ನಾವು ನಮಗಿಂತ ಬಲಶಾಲಿಯಾದ ಶತ್ರುಗಳ ವಿರುದ್ಧ ಹೋರಾಡುತ್ತಿದ್ದೇವೆ” ಎಂದಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕಾನೂನು ತಮ್ಮ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಅಲ್ಲಿ ಉಕ್ರೇನ್ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ.

ಬ್ರಿಟನ್ ಮಾಜಿ ಪ್ರಧಾನಿ ಗಾರ್ಡನ್ ಬ್ರೌನ್ ಸೇರಿದಂತೆ ಗಣ್ಯರು, ಮಾಜಿ ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ಬುಧವಾರ ವಿಶೇಷ ನ್ಯಾಯಮಂಡಳಿ ರಚನೆಗೆ ಕರೆ ನೀಡಿದ್ದರು. ಉಕ್ರೇನ್‌ನಲ್ಲಿ ಆಪಾದಿತ ಯುದ್ಧ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಬೇಕೆ ಎಂಬುದನ್ನು ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಅಧ್ಯಯನ ಮಾಡಲಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ‘ಉಕ್ರೇನ್ ಮೇಲೆ ದಾಳಿ ನಡೆಸುವ ನಿರ್ಧಾರವು 1945ರ ನಂತರದ ಅಂತರರಾಷ್ಟ್ರೀಯ ಕಾನೂನುಗಳಿಗೆ ಗಂಭೀರ ಸವಾಲನ್ನು ಒಡ್ಡುತ್ತದೆ’ ಎಂದು ಬ್ರೌನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕದನ ವಿರಾಮ ಘೋಷಿಸಿದ ರಷ್ಯಾ:

ಈ ನಡುವೆ ಪ್ರಮುಖ ಬೆಳವಣಿಗೆ ನಡೆದಿದ್ದು, ಶನಿವಾರ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಮಾನವೀಯ ಕಾರಿಡಾರ್ ಮೂಲಕ ನಾಗರಿಕರ ಸ್ಥಳಾಂತರಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಈ ಕುರಿತು ರಷ್ಯನ್ ಮಾಧ್ಯಮಗಳು ವರದಿ ಮಾಡಿವೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap