ಚಳ್ಳಕೆರೆ
ಸಮಾಜದ ಎಲ್ಲಾ ವರ್ಗಗಳನ್ನು ಸಮಾನತೆಯಿಂದ ಕಾಣುವ ಅವಕಾಶವನ್ನು ನಮ್ಮ ಕಾನೂನು ನಿರೂಪಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇಯಾದ ಜವಾಬ್ದಾರಿಯುತ ಕೆಲಸ ಕಾರ್ಯಗಳನ್ನು ಕಾನೂನು ಅಡಿಯಲ್ಲಿ ಮಾಡಬೇಕಿದೆ. ಕಾನೂನನ್ನು ನಿರ್ಲಕ್ಷಿಸಿ ನಿರ್ಲಕ್ಷಾತಾ ಳುವವರು ಕಾನೂನಿನಿಂದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಈಗಾಗಿ ಸುಖಿ ಜೀವನಕ್ಕೆ ಕಾನೂನೇ ಅಡಿಪಾಯವೆಂದು ಇಲ್ಲಿನ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಮಂಗಳವಾರ ಸಂಜೆ ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಪ್ರಕಾಶ್ ಸ್ಪಾಂಜ್ ಐರನ್ ಪ್ರೈ.ಲಿ ಕಂಪನಿ ಆವರಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು, ಕಾರ್ಮಿಕರನ್ನು ಮತ್ತು ಶಾಲಾ ಮಕ್ಕಳನ್ನು ನಿರ್ಬಂಧಿಸುವ ಕುರಿತು ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಸರಕು ಸಾಗಾಣಿಕೆ ವಾಹನಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರ ಮೋಟಾರ್ ವಾಹನ ಕಾಯ್ದೆ ಪ್ರಕಾರ ಸರಕು ಸಾಗಾಣಿಕೆ ವಾಹನಗಳನ್ನು ಪತ್ಯೇಕವಾಗಿ ಸರಕು ಸಾಗಾಣಿಕೆಗಾಗಿ ಮಾತ್ರ ಉಪಯೋಗಿಸಬೇಕಿದೆ. ಆದರೆ, ಕಾರ್ಮಿಕರನ್ನು ಮಕ್ಕಳನ್ನು ಇಂತಹ ವಾಹನಗಳಲ್ಲಿ ಕರೆತರುವುದು ಕಾನೂನು ಬಾಹಿರ. ಯಾವುದೇ ರೀತಿ ಅಪಘಾತ ಉಂಟಾದಲ್ಲಿ ನೊಂದವರು ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲವೆಂದರು.
ಜೆಎಂಎಫ್ಸಿ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಯಾವುದೇ ಹಂತದಲ್ಲಿ ಕಾನೂನು ತನ್ನ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಕಾನೂನನ್ನು ವ್ಯವಸ್ಥಿತವಾಗಿ ಪರಿಪಾಲನೆ ಮಾಡುವುದರಿಂದ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ. ಕಾನೂನಿನ ನಿಯಮದಡಿಯೇ ಎಲ್ಲಾ ವ್ಯವಸ್ಥೆಯನ್ನು ಜಾರಿಗೆ ತರಲು ಕಾನೂನು ಇಲಾಖೆ ಮೂಲಕ ತಮ್ಮದೇಯಾದ ವ್ಯವಸ್ಥೆಗಳನ್ನು ಜಾರಿ ಮಾಡಿದೆ. ಸರಕು ಸಾಗಾಣಿಕೆ ವಾಹನಗಳು ಕೇವಲ ಸಾಮಾಗ್ರಿಗಳನ್ನು ಸಾಗಿಸಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಕೆಲವೊಮ್ಮೆ ಚಾಲಕರು ಹಣದಾಸೆಗಾಗಿ ಪ್ರಯಾಣಿಕರನ್ನು ಕರೆದ್ಯೊಯುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾಗಿರುವುದು ಪ್ರಯಾಣಿಕರು ಮಾತ್ರ ಎಂದರು.
ಕಾರ್ಮಿಕ ಅಧಿಕಾರಿ ಶೇಕ್ ಶಫೀವುಲ್ಲಾ ಮಾತನಾಡಿ, ಕಾರ್ಮಿಕರ ಸೌಲಭ್ಯಕ್ಕಾಗಿ ಅನೇಕ ನಿಯಮಗಳನ್ನು ಕಾರ್ಮಿಕ ಇಲಾಖೆ ಜಾರಿಗೆ ತಂದಿದೆ. ಪ್ರತಿಯೊಬ್ಬ ಕಾರ್ಮಿಕನು ಇಲಾಖೆಯ ಗುರುತಿನ ಚೀಟಿಯನ್ನು ಪಡೆದರೆ ಮಾತ್ರ ಸೌಲಭ್ಯ ಪಡೆಯಲು ಆರ್ಹನಾಗುತ್ತಾನೆ. ಪ್ರಸ್ತುತ ಜಾರಿಯಲ್ಲಿರುವ ಎಲ್ಲಾ ಕಾನೂನುಗಳು ಕಾರ್ಮಿಕರ ಹಿತರಕ್ಷಣೆಯನ್ನು ಕಾಪಾಡುವುದರಲ್ಲಿ ಯಶಸ್ಸಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಕಾರ್ಯದರ್ಶಿ ತಿಪ್ಪೇಸ್ವಾಮಿ, ಹನುಮಂತಪ್ಪ, ಪ್ರಕಾಶ್ ಸ್ಪಾಂಜ್ ಐರನ್ ಪ್ರೈ.ಲಿ ಕಂಪನಿ ಜನರಲ್ ಮ್ಯಾನೇಜರ್ ರಾಜೇಂದ್ರಕುಮಾರ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ