ಹಿರಿಯೂರು :
ತಾಲ್ಲೂಕಿನಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದ್ದು, ಜೂನ್ ತಿಂಗಳು ಕಳೆದರೂ ವರುಣ ಕೃಪೆ ತೋರದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಸ್ಥಗಿತಗೊಳಿಸದಂತೆ ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಓಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಮಳೆ ಕೊರತೆ, ಅಂತರ್ಜಲ ಕುಸಿತ, ಕೊಳವೆ ಬಾವಿಗಳ ವೈಫಲ್ಯದಿಂದ ಜನ-ಜಾನುವಾರು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಲಾಗುವುದು. ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಂಡು ಬಂದರೆ ತಕ್ಷಣ ನನ್ನ ಗಮನಕ್ಕೆ ತಂದರೆ ಹೊಸದಾಗಿ ಬೋರ್‍ವೆಲ್ ಕೊರೆಸಲು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಅವರು ತಿಳಿಸಿದರು.
ಹಳ್ಳಿಗಳ ಕುಡಿವ ನೀರು, ಸ್ವಚ್ಛತೆ, ಬೀದಿದೀಪ, ಉದ್ಯೋಗ ಖಾತರಿ ಯೋಜನೆಗಳ ನಿರ್ವಹಣೆಯಲ್ಲಿ ಗ್ರಾಪಂ ಪಿಡಿಓಗಳು ಬೇಕಾಬಿಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ವ್ಯವಸ್ಥೆ ಸರಿಪಡಿಸದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒಗೆ ಸೂಚಿಸಬೇಕಾಗುತ್ತದೆ ಎಂದು ಪಿಡಿಒಗಳಿಗೆ ಎಚ್ಚರಿಸಿದರು.
ಜಲಾಮೃತ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಿಟ್ಟಿನಲ್ಲಿ ತಾಲ್ಲೂಕಿನ 38 ಕೆರೆಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಎಲ್ಲ ಕೆರೆಗಳ ಸರ್ವೇ ನಡೆಸಲಾಗಿದೆ. ಜಲಾಮೃತ ಯೋಜನೆಯಡಿ ಜಲ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಾಪಂ.ಸಹಾಯಕ ತಾಂತ್ರಿಕ ಅಧಿಕಾರಿ ಸಂತೋಷ್ ಮಾಹಿತಿ ನೀಡಿದರು.
ಈ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಇಒ ರಾಮ್‍ಕುಮಾರ್, ಉಮೇಶ್, ಪಿಡಿಒಗಳಾದ ಸೌಮ್ಯ, ವನಜಾಕ್ಷಿ, ಶ್ರೀನಿವಾಸ್, ಶಾಸಕರ ಆಪ್ತ ಸಹಾಯಕ ನಿರಂಜನ್ ಮೂರ್ತಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
